ಬೆಂಗಳೂರು: ತಮಿಳುನಾಡಿನ ರಾಜಕೀಯ ಪಕ್ಷವೊಂದರ ಮಧುರೈ ಮಂಡಲ ಅಧ್ಯಕ್ಷ ವಿ.ಕೆ.ಗುರುಸ್ವಾಮಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದ ಆರೋಪಿಗಳ ಪತ್ತೆಗೆ ಪೂರ್ವ ವಿಭಾಗದ ಎಸಿಪಿ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಲಾಗಿದೆ.
‘ತನಿಖಾ ತಂಡಗಳು ಮಂಗಳವಾರ ಬೆಳಿಗ್ಗೆ ತಮಿಳುನಾಡಿಗೆ ತೆರಳಿದ್ದು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ಸುಖಸಾಗರ್ ಹೋಟೆಲ್‌ನಲ್ಲಿ ಸೋಮವಾರ ಸಂಜೆ 5.30ರ ಸುಮಾರಿಗೆ ಬ್ರೋಕರ್ ಜತೆಗೆ ಟೀ ಕುಡಿಯುತ್ತಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು, ಗುರುಸ್ವಾಮಿ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಹೋಟೆಲ್ ಸಿಬ್ಬಂದಿ, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
‘ಗುರುಸ್ವಾಮಿಗೆ ಕ್ಯೂರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಕುಟುಂಬಸ್ಥರು ತಮಿಳುನಾಡಿನಿಂದ ಬಂದಿದ್ದಾರೆ’ ಎಂದು ಮೂಲಗಳು ಹೇಳಿವೆ.
ತಮಿಳುನಾಡಿನತ್ತ ದುಷ್ಕರ್ಮಿಗಳು:
‘ತಮಿಳುನಾಡಿನಿಂದ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳ ಪೈಕಿ, ನಾಲ್ವರು ಏಕಾಏಕಿ ಕಾರಿನಿಂದ ಕೆಳಗೆ ಇಳಿದು ಹೋಟೆಲ್‌ಗೆ ನುಗ್ಗಿ ಮಚ್ಚುಗಳಿಂದ ಹಲ್ಲೆ ನಡೆಸಿದ್ದರು. ಚಾಲಕ ಕಾರಿನಲ್ಲೇ ಕುಳಿತಿದ್ದ. ಉಳಿದವರು ಹಲ್ಲೆ ನಡೆಸಿ, ಕಾರು ಹತ್ತಿ ಪರಾರಿಯಾಗಿರುವುದು ಸಿಸಿ ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಪೊಲೀಸರು ಈ ದೃಶ್ಯಾವಳಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು ಬಂದಿದ್ದ ಕಾರು ತಮಿಳುನಾಡಿನತ್ತಲೇ ತೆರಳಿರುವುದು ಗೊತ್ತಾಗಿದೆ. ಚೆಕ್‌ಪೋಸ್ಟ್‌ವೊಂದರಲ್ಲಿ ಕಾರು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ’ ಎಂದು ಮೂಲಗಳು ಹೇಳಿವೆ.
ಹಳೇ ವೈಷಮ್ಯ?:
ಪ್ರಾಥಮಿಕ ಮಾಹಿತಿಯಂತೆ ಹಳೇ ವೈಷಮ್ಯದಿಂದ ಮತ್ತೊಂದು ತಂಡವು ದಾಳಿ ನಡೆಸಿದೆ. ಗುರುಸ್ವಾಮಿ ಅವರು ಮಧುರೈ ಭಾಗದಲ್ಲಿ ರಾಜಕೀಯದ ಜತೆಗೆ ರಿಯಲ್ ಎಸ್ಟೇಟ್‌ನಲ್ಲಿ ಸಕ್ರಿಯವಾಗಿದ್ದರು. ಉದ್ಯಮದ ವಿಚಾರಕ್ಕೆ ಮತ್ತೊಂದು ತಂಡದೊಂದಿಗೆ ವೈಷಮ್ಯ ಬೆಳೆದಿತ್ತು. ಗುರುಸ್ವಾಮಿ ಹೆಸರು ರೌಡಿಪಟ್ಟಿಯಲ್ಲಿದೆ. ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಹೋಟೆಲ್‌ನಲ್ಲಿ ಪೂಜೆ:
ಕೃತ್ಯ ನಡೆದ ಕಮ್ಮನಹಳ್ಳಿಯ ಸುಖಸಾಗರ್ ಹೋಟೆಲ್ ಅನ್ನು ಮಂಗಳವಾರ ಬೆಳಿಗ್ಗೆ ಸಿಬ್ಬಂದಿ ಸ್ವಚ್ಛಗೊಳಿಸಿದರು. ಜತೆಗೆ ಅರ್ಚಕರು ಶಾಂತಿ ಹೋಮ ನಡೆಸಿದರು ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.