ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತಿಯಿಂದ ಕಿರುಕುಳ: ವಿಡಿಯೊ ಕರೆ ಮಾಡುತ್ತಲೇ ಬೆಂಕಿ ಹಚ್ಚಿಕೊಂಡ ಮಹಿಳೆ

‘ದರ್ಶನ್ ಎರಡನೇ ಮದುವೆ ಆಗಿಲ್ವಾ, ನಾನು ಆದರೆ ತಪ್ಪೇನು’
Published : 8 ಸೆಪ್ಟೆಂಬರ್ 2024, 16:23 IST
Last Updated : 8 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಬೆಂಗಳೂರು: ಕೌಟುಂಬಿಕ ಕಲಹದ ಕಾರಣಕ್ಕೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಷಯ ನಗರ ನಿವಾಸಿ ಅನುಷಾ (27) ಮೃತ ಮಹಿಳೆ. ಅನುಷಾ ಅವರು ಶಿರಸಿಯ ಶ್ರೀಹರಿ ಅವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಇದೆ. ಮೃತಳ ಪೋಷಕರ ದೂರಿನ ಮೇರೆಗೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಖಾಸಗಿ ಕಂಪನಿಯಲ್ಲಿ ‘ಟೀಂ ಲೀಡರ್’ ಆಗಿದ್ದ ಶ್ರೀಹರಿಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಮೂರು ತಿಂಗಳಿನಿಂದ ಮನೆಯಲ್ಲಿದ್ದ. ಬೇರೊಬ್ಬ ಮಹಿಳೆ ಜತೆ ಸಂಬಂಧ ಹೊಂದಿದ್ದ ವಿಷಯ ಮಗಳು ಅನುಷಾಗೆ ಗೊತ್ತಾಗಿತ್ತು. ಮಹಿಳೆಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಅಶ್ಲೀಲ ವಿಡಿಯೊವನ್ನು ವೀಕ್ಷಿಸುತ್ತಿದ್ದ. ಮಗಳಿಗೂ ತೋರಿಸಿ ಹಿಂಸೆ ಕೊಡುತ್ತಿದ್ದ. ಈ ಬಗ್ಗೆ ಮಗಳು ಪತಿಗೆ ಬುದ್ಧಿವಾದ ಹೇಳಿದ್ದಳು. ಈ ವಿಚಾರಕ್ಕೆ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು. ಮಗಳಿಗೆ ದೈಹಿಕ, ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದ’ ಎಂದು ಮೃತ ಅನುಷಾ ಅವರ ತಾಯಿ ರೇಣುಕಾ ಆರೋಪಿಸಿದ್ದಾರೆ.

‘ಗುರುವಾರ ಸಹ ದಂಪತಿ ಮಧ್ಯೆ ಜಗಳ ನಡೆದಿದೆ. ಅನುಷಾ ವಾಟ್ಸ್‌ಆ್ಯಪ್ ಕರೆ ಮಾಡುತ್ತಲೇ ಸ್ನಾನದ ಕೊಠಡಿಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಆತ ಕರೆ ಸ್ವೀಕರಿಸಿಯೂ ರಕ್ಷಣೆಗೆ ಧಾವಿಸಲಿಲ್ಲ. ನೆರೆಹೊರೆಯವರ ನೆರವಿನಿಂದ ಸ್ನಾನದ ಕೊಠಡಿಯ ಬಾಗಿಲು ಮುರಿದು ಹೊರ ತರಲಾಯಿತು’ ಎಂದು ರೇಣುಕಾ ಕಣ್ಣೀರಿಟ್ಟಿದ್ದಾರೆ.

ತೀವ್ರವಾದ ಸುಟ್ಟ ಗಾಯಗಳಿಂದ ನರಳುತ್ತಿದ್ದ ಅನುಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

‘ಮೂರು ತಿಂಗಳಿನಿಂದ ಮಗಳು ಮತ್ತು ಅಳಿಯನ ಮಧ್ಯೆ ಜಗಳ ನಡೆಯುತ್ತಿತ್ತು. ಬೇರೊಬ್ಬ ಮಹಿಳೆ ಜತೆ ಸಂಬಂಧ ಹೊಂದಿರುವುದನ್ನು ಮಗಳು ಪ್ರಶ್ನಿಸಿದಾಗ, ‘ದರ್ಶನ್ ಎರಡನೇ ಮದುವೆ ಆಗಿಲ್ವಾ, ನಾನು ಆದರೆ ತಪ್ಪೇನು ಎಂದು ಪ್ರಶ್ನೆ ಮಾಡುತ್ತಿದ್ದನಂತೆ. ನನಗೆ ಬೇರೆ ಸಂಬಂಧ ಇದೆ ಎಂದು ಹೇಳಿಕೊಂಡಿದ್ದ ಆತ, ವಿಚ್ಛೇದನ ನೀಡುವಂತೆ ಮಗಳಿಗೆ ಒತ್ತಾಯಿಸುತ್ತಿದ್ದ’ ಎಂದು ಮೃತಳ ತಂದೆ ಹೇಮಂತ್‌ ಆರೋಪಿಸಿದ್ದಾರೆ.

ಅಂತಿಮ ವಿಧಿ ವಿಧಾನದ ವೇಳೆ ಚಿತಾಗಾರದ ಬಳಿ ಅನುಷಾ ಹಾಗೂ ಶ್ರೀಹರಿ ಕಡೆಯವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳೀಯರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಹುಳಿಮಾವು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆಯ ಬಾತ್‌ರೂಂ ಬಾಗಿಲು ಮುರಿದಿರುವುದು
ಮನೆಯ ಬಾತ್‌ರೂಂ ಬಾಗಿಲು ಮುರಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT