ಮಂಗಳವಾರ, ಆಗಸ್ಟ್ 3, 2021
22 °C
ರಸ್ತೆ ಅಭಿವೃದ್ಧಿಗಾಗಿ ಕೆಆರ್‌ಡಿಸಿಎಲ್‌ ಕ್ರಮ l ಪರಿಸರ ತಜ್ಞರ ಅಧ್ಯಯನ ವರದಿ ಎಚ್ಚರಿಕೆ

ಹಳೆಯ ಮರ ಕಡಿದರೆ ಭಾರಿ ಹಾನಿ

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಹೊರವಲಯದ ಆರು ರಸ್ತೆ ಕಾರಿಡಾರ್‌ಗಳ ಅಭಿವೃದ್ಧಿಗಾಗಿ ಭಾರಿ ಪ್ರಮಾಣದಲ್ಲಿ ಮರಗಳನ್ನು ಕಡಿಯುವುದನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ನೂರಾರು ವರ್ಷ ಹಳೆಯ ಹಾಗೂ ಪಾರಂಪರಿಕ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯಬಾರದು ಎಂದು ಪರಿಸರ ತಜ್ಞರ ಅಧ್ಯಯನ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ನಗರದ ಹೊರವಲಯದಲ್ಲಿಆರು ಕಾರಿಡಾರ್‌ಗಳಲ್ಲಿ ದ್ವಿಪಥ ಹೆದ್ದಾರಿಗಳನ್ನು ಚತುಷ್ಪಥಗೊಳಿಸುವ ಹಾಗೂ ಚತುಷ್ಫಥ ಹೆದ್ದಾರಿಗಳನ್ನು
ಆರು ಪಥಗಳನ್ನಾಗಿ ಪರಿವರ್ತಿಸುವ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಕೈಗೆತ್ತಿಕೊಂಡಿದೆ.

ಬೂದಿಗೆರೆ ಕ್ರಾಸ್‌ (ಹೊಸಕೋಟೆ)– ಮೈಲನಹಳ್ಳಿ (ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಳಿ), ನೆಲಮಂಗಲ– ಮದುರೆ, ಮದುರೆ– ದೇವನಹಳ್ಳಿ ರಸ್ತೆಯ ಎಸ್‌ಎಂವಿಐಟಿ ಕ್ರಾಸ್‌, ಕಂಚುಗಾರನಹಳ್ಳಿ–ಜಿಗಣಿ, ಬನ್ನೇರುಘಟ್ಟ– ಬೆಸ್ತಮಾನಹಳ್ಳಿ (ಆನೇಕಲ್‌ ಬಳಿ) ಹಾಗೂ ಬೆಸ್ತಮಾನಹಳ್ಳಿ– ಹೊಸಕೋಟೆ ರಸ್ತೆಗಳನ್ನು ವಿಸ್ತರಿಸಲಾಗುತ್ತಿದೆ. ಈ ಕಾಮಗಾರಿಗಳಿಗೆ 8,561 ಮರಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಕೆಆರ್‌ಡಿಸಿಎಲ್‌ ಅಂದಾಜಿಸಿತ್ತು. ಈಗಾಗಲೇ ಅನೇಕ ಕಡೆ ರಸ್ತೆ ಕಾಮಗಾರಿ ಆರಂಭವಾಗಿದೆ. 51 ಮರಗಳನ್ನು ಈಗಾಗಲೇ ಕಡಿಯಲಾಗಿದೆ. 

ಈ ಕಾಮಗಾರಿ ನಡೆಯುವ ಸ್ಥಳಗಳಲ್ಲಿನ ಮರಗಳನ್ನು ಕಡಿಯುವುದರಿಂದ ಪರಿಸರ ವ್ಯವಸ್ಥೆ ಮೇಲೆ ಹಾಗೂ ಜನಜೀವನದ ಮೇಲಾಗುವ ಹಾನಿ ಬಗ್ಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಸೀಮಾ ಮುಂಡೋಲಿ, ಹರಿಣಿ ನಾಗೇಂದ್ರ ಹಾಗೂ ಸಂಶೋಧಕಿ ರಂಜಿನಿ ಮುರಳಿ ಅವರು 2020ರ ಮಾರ್ಚ್‌ನಲ್ಲಿ ಅಧ್ಯಯನ ಕೈಗೊಂಡಿದ್ದರು. ಅದರ ಪ್ರಮುಖ ಅಂಶಗಳು ಇಂತಿವೆ.

ಭಾರಿ ಆಲ, ಅಶ್ವತ್ಥ ಮರಗಳಿಗೆ ಅಪಾಯ: ಈ ರಸ್ತೆಗಳ ಪಕ್ಕದಲ್ಲಿ ನೂರಾರು ವರ್ಷಗಳಷ್ಟು ಭಾರಿ ಗಾತ್ರದ ಆಲದ ಮರಗಳಿವೆ. ನೆಲಮಂಗಲ– ಮದುರೆ ಮಾರ್ಗದ ಪಕ್ಕದಲ್ಲಿರುವ ಕೆಲವು ಆಲದ ಮರಗಳು 14.9 ಮೀ 17.7 ಮೀ ಸುತ್ತಳತೆ ಹೊಂದಿವೆ. ಕೆಲವರು ಮರಗಳು 50 ಅಡಿಗಳಿಗೂ ಹೆಚ್ಚು ಎತ್ತರ ಬೆಳೆದಿವೆ. ಹೊಸಕೋಟೆ– ಬೆಸ್ತಮಾನಹಳ್ಳಿ ರಸ್ತೆಯಲ್ಲಿ ಒಂದು 10 ಮೀ ಸುತ್ತಳತೆಯ ಆಲದ ಮರವಿದೆ. ನೇರಳೆ, ಹುಣಸೆ, ಮಳೆ ಮರ, ಸಾಗುವಾನಿ ಮುಂತಾದ ಪಾರಂಪರಿಕ ಮರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಪರಿಸರ ವ್ಯವಸ್ಥೆಗೆ ಭಾರಿ ಹಾನಿ ಉಂಟಾಗಲಿದೆ. ಕಾಮಗಾರಿಗಾಗಿ 15 ಅಶ್ವತ್ಥಮರಗಳನ್ನು ಕಡಿಯಲು ಗುರುತು ಮಾಡಲಾಗಿದೆ. ಕೆಲವು ಮರಗಳು 5.8 ಮೀ, 4.3 ಮೀ ಹಾಗೂ 3.5 ಮೀ ಸುತ್ತಳತೆಯನ್ನು ಹೊಂದಿವೆ. ಕೆಲವು ಮರಗಳು ಅಶ್ವತ್ಥಕಟ್ಟೆಯನ್ನು ಹಾಗೂ ಪಕ್ಕದಲ್ಲಿ ಕಹಿಬೇವು ಮರಗಳನ್ನೂ ಹೊಂದಿವೆ.

ಕೆರೆಗಳಿಗೂ ಕುತ್ತು: ವರ್ತೂರು ಕೆರೆ (416 ಎಕರೆ), ಮದುರೆ ಕೆರೆ (568 ಎಕರೆ) ಸೇರಿದಂತೆ 14 ಕೆರೆಗಳು ಈ ರಸ್ತೆಗಳ ಸಮೀಪದಲ್ಲಿವೆ. ಕಾಮಗಾರಿಯಿಂದ ಈ ಜಲಕಾಯಗಳ ಜೀವ ವೈವಿಧ್ಯಕ್ಕೂ ಧಕ್ಕೆ ಉಂಟಾಗಲಿದೆ. ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆಯೂ ಇದೆ. ಹಸುವಿನ ಮೇವಿಗಾಗಿ ಹಾಗೂ ಮೀನುಗಾರಿಕೆಗಾಗಿ ಈಕೆರೆಗಳನ್ನು ನೆಚ್ಚಿಕೊಂಡಿರುವವರು ಸಮಸ್ಯೆ ಎದುರಿಸಬೇಕಾಗುತ್ತದೆ.

ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ 20 ವರ್ಷಗಳಲ್ಲಿ ನಗರದಲ್ಲಿ ವ್ಯಾಪಕವಾಗಿ ಮರಗಳನ್ನು ಕಡಿಯಲಾಗಿದೆ. ನಗರ ನಿವಾಸಿಗಳ ಆರೋಗ್ಯದ ಮೇಲೆ ಇದರಿಂದ ಭಾರಿ ದುಷ್ಪರಿಣಾಮಗಳಾಗುತ್ತಿವೆ. ಭವಿಷ್ಯದಲ್ಲಿ ನಗರದ ಉಷ್ಣಾಂಶ ಇನ್ನಷ್ಟು ಹೆಚ್ಚಲಿದ್ದು, ಹವಾಮಾನದಲ್ಲಿ ಅನಿಶ್ಚಿತತೆ ಎದುರಾಗಲಿದೆ. ಹಾಗಾಗಿ ಈಗ ಉಳಿದಿರುವ ಹಸಿರು ಕವಚವನ್ನಾದರೂ ರಕ್ಷಿಸಬೇಕಾಗಿದೆ.

ವರದಿಯ ಪ್ರಮುಖ ಅಂಶಗಳು

*ಈ ರಸ್ತೆ ವಿಸ್ತರಣೆ ಕಾಮಗಾರಿಗಳಿಂದ ವಾಯು ಮಾಲಿನ್ಯ ಹೆಚ್ಚಲಿದೆ

*ನಗರದಲ್ಲಿ ತಾಪಮಾನ ದ್ವೀಪಗಳು ಹೆಚ್ಚಲಿವೆ

*ಪಾರಂಪರಿಕ ಮರಗಳನ್ನು, ಧಾರ್ಮಿಕ ಸ್ಥಳಗಳನ್ನು ಕಳೆದುಕೊಳ್ಳಬೇಕಾಗುತ್ತದೆ

*ನಗರದ ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗಲಿದೆ

*ಅರಣ್ಯ ಪರಿಸರ ವ್ಯವಸ್ಥೆಗೆ ಹಾನಿಯಾಗಲಿದೆ

*ಇಂಗಾಲದ ಸ್ಥಿರೀಕರಣ ಕಡಿಮೆ ಆಗಲಿದೆ

*ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ

ಅಂದಾಜಿಗಿಂತ ಹೆಚ್ಚು ಮರಗಳಿಗೆ ಕುತ್ತು

ಒಟ್ಟು 152ಕಿ.ಮೀ ಉದ್ದದ ಈ ರಸ್ತೆ ಕಾಮಗಾರಿಗಳಿಗೆ 8,561 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಕೆಆರ್‌ಡಿಸಿಎಲ್‌ ಅಂದಾಜು ಮಾಡಿತ್ತು. ಆದರೆ ಇದಕ್ಕಿಂತ ಹೆಚ್ಚು ಮರಗಳಿಗೆ ಕುತ್ತು ಉಂಟಾಗಲಿವೆ ಎಂದು ಅಧ್ಯಯನ ವರದಿ ಹೇಳಿದೆ.

ಈ ಹಿಂದೆ ನೆಲಮಂಗಲ– ಮದುರೆ ರಸ್ತೆ (15 ಕಿ.ಮೀ) ಅಭಿವೃದ್ಧಿಗೆ 869 ಮರ ಕಡಿಯಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಸ್ಥಳದಲ್ಲಿ ಸರ್ವೆ ನಡೆಸಿದಾಗ ಇಲ್ಲಿ 929ಕ್ಕೂ ಹೆಚ್ಚು ಮರಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಕಂಚುಗಾರನಹಳ್ಳಿ–ಜಿಗಣಿ ರಸ್ತೆ (33.2 ಕಿ.ಮೀ) ವಿಸ್ತರಣೆಗೆ 184 ಮರಗಳನ್ನು ಕಡಿಯಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಸ್ಥಳ ಪರಿಶೀಲನೆ ನಡೆಸಿದಾಗ ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯುವುದಕ್ಕೆ ಗುರುತು ಹಾಕಿದ್ದು ಕಂಡುಬಂದಿದೆ. ಇನ್ನೂ ಗುರುತು ಮಾಡಿರದ ಕೆಲವು ಮರಗಳನ್ನು ರಸ್ತೆ ವಿಸ್ತರಣೆ ವೇಳೆ ಕಳೆದುಕೊಳ್ಳಬೇಕಾಗುತ್ತದೆ ಎಂದು ವರದಿ ಹೇಳಿದೆ.

ಅಪಾಯದಲ್ಲಿ ಕಾಡುಪಾಪ ಸಂತತಿ

ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಜುನ್ನಸಂದ್ರ ಕಿರು ಅರಣ್ಯ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಮೀಪದಲ್ಲಿರುವ ಆನೇಕಲ್‌ ಮೀಸಲು ಅರಣ್ಯ ಮೊದಲಾದ ಜೀವವೈವಿಧ್ಯ ತಾಣಗಳಿಗೆ, ಅನೇಕ ಪುಟ್ಟಕಾಡುಗಳಿಗೆ ಕುತ್ತು ಉಂಟಾಗಲಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿತ ಪಟ್ಟಿ–1ರಲ್ಲಿರುವ ಪ್ರಾಣಿಯಾದ ಕಾಡುಪಾಪ ಸಂತತಿ ಅಪಾಯಕ್ಕೆ ಸಿಲುಕಲಿದೆ. ಪುನುಗು ಬೆಕ್ಕು, ನರಿ, ಕಾಡುಮೊಲ ಮುಂತಾದ ಪ್ರಾಣಿಗಳೂ ಆಪತ್ತು ಎದುರಿಸಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

***

ಹಸಿರು ಕವಚ ನಶಿಸಿದ್ದರಿಂದ ನಗರದಲ್ಲಿ ಮಾಲಿನ್ಯ ವಿಪರೀತ ಹೆಚ್ಚಿದೆ. ಪರಿಸರಕ್ಕೆ ಮತ್ತಷ್ಟು ಹಾನಿ ಮಾಡುವ ಇಂತಹ ಯೋಜನೆಗಳ ಅಗತ್ಯವಾದರೂ ಏನು?

- ಸೀಮಾ ಮುಂಡೋಳಿ, ಅಧ್ಯಯನ ತಂಡದ ಸದಸ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು