ಭಾನುವಾರ, ಆಗಸ್ಟ್ 14, 2022
22 °C
ಹೊಸ ವರ್ಷಾಚರಣೆಗೆ ಎರಡು ದಿನಗಳಲ್ಲಿ ಮಾರ್ಗಸೂಚಿ ಪ್ರಕಟ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌

ವಿಧಾನ ಮಂಡಲದಲ್ಲಿ: ಹೆಚ್ಚು ಹಣ ವಸೂಲಿ; 122 ದೂರು ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚು ಹಣ ವಸೂಲು ಮಾಡಿದ ಮತ್ತು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಈವರೆಗೆ 122 ದೂರುಗಳು ದಾಖಲಾಗಿವೆ. ಅವುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಅವರು, ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ವಿವಿಧ ವಿಷಯಗಳ ಬಗ್ಗೆ ಪರಸ್ಪರ ದೂರು, ಕುಂದುಕೊರತೆಗಳನ್ನು ನೋಂದಣಿಗೆ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ’ ಎಂದರು.

ಕೋವಿಡ್‌ ಎರಡನೇ ಅಲೆಯ ಬಗ್ಗೆ ಸದಸ್ಯರು ವ್ಯಕ್ತಪಡಿಸಿದ ಆತಂಕಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ‘ಹೊಸ ವರ್ಷಾಚರಣೆಗೆ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿ, ಒಂದೆರಡು ದಿನಗಳಲ್ಲಿ ವಿವರವಾದ ಮಾರ್ಗಸೂಚಿ ಹೊರಡಿಸಲಾಗುವುದು’ ಎಂದರು. ಅಲ್ಲದೆ, ‘ಸಂಭವನೀಯ ಎರಡನೇ ಅಲೆ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ’ ಎಂದೂ ಹೇಳಿದರು.

ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಂದ ಹೆಚ್ಚು ಹಣ ವಸೂಲು ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ, ‘ಕೆಲವು ಆಸ್ಪತ್ರೆಗಳು ಹಣ ಕಟ್ಟುವರೆಗೆ ಮೃತದೇಹವನ್ನೂ ಹಸ್ತಾಂತರಿಸಿಲ್ಲ’ ಎಂದರು. ಮೂಡುಬಿದಿರೆಯಲ್ಲಿ ಶಿಕ್ಷಕಿ ಪದ್ಮಾಕ್ಷಿ ಅವರು ಕೋವಿಡ್‌ನಿಂದ ಮೃತಪಟ್ಟ ಘಟನೆಯನ್ನು ನೆನಪಿಸಿದ ಅವರು, ‘ಪದ್ಮಾಕ್ಷಿಯ ಚಿಕಿತ್ಸಾ ವೆಚ್ಚ ₹ 6.50 ಲಕ್ಷವನ್ನು ಮರು ಪಾವತಿಸುವುದಾಗಿ ಹೇಳಿದ್ದ ಸರ್ಕಾರ, ಈವರೆಗೂ ಭರವಸೆ ಈಡೇರಿಸಿಲ್ಲ’ ಎಂದರು.

‘ಸರ್ಕಾರಿ ಆಸ್ಪತ್ರೆಯ ಶಿಫಾರಸು ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋದ ಕೋವಿಡ್‌ ರೋಗಿಗಳಿಂದ ಹೆಚ್ಚು
ಹಣ ವಸೂಲು ಮಾಡಿದ ದೂರುಗಳಿವೆ. ಅಂತಹ ದೂರುಗಳ ಬಗ್ಗೆ ಪರಿಶೀಲಿಸಿ ಕ್ರಮಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪದ್ಮಾಕ್ಷಿ ಪ್ರಕರಣದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿಸಲು ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.

ಹೊಸದಾಗಿ ನೇಮಕ: ಕಾಂಗ್ರೆಸ್‌ನ ಆರ್‌.ಪ್ರಸನ್ನಕುಮಾರ್‌ ಅವರ ಪ್ರಶ್ನೆಗೆ ಸಚಿವರು, ‘ಗುತ್ತಿಗೆ ಆಧಾರದಲ್ಲಿ ನೇಮಕವಾದ ವೈದ್ಯಕೀಯ ಸಿಬ್ಬಂದಿ ಸೇವೆಯನ್ನು ಮೂರು ಅಥವಾ ಆರು ತಿಂಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ಗುತ್ತಿಗೆ ಸಿಬ್ಬಂದಿಯಷ್ಟೆ ಅಲ್ಲದೆ, 2,155 ಹೊಸ ಹುದ್ದೆಗಳನ್ನು ಸೃಜಿಸಲಾಗಿದೆ. ಈ ಪೈಕಿ 1,246
ವೈದ್ಯಾಧಿಕಾರಿಗಳು, 88 ದಂತ ವೈದ್ಯರು ಮತ್ತು 824 ಇತರ ವೈದ್ಯಕೀಯ ಸಿಬ್ಬಂದಿ. ಜನವರಿ ಅಂತ್ಯದೊಳಗೆ ನೇಮಕಾತಿ ನಡೆಯಲಿದೆ’ ಎಂದರು.

ಟ್ವೀಟ್‌ಗೆ ಸಭಾಪತಿ ಉತ್ತರ: ಚರ್ಚೆಗೆ ಗ್ರಾಸ

ಬೆಂಗಳೂರು: ಕಳೆದ ಅಧಿವೇಶನದಲ್ಲಿ ತಡರಾತ್ರಿವರೆಗೂ ಕಲಾಪ ನಡೆಸಿ, ದಿಢೀರ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವ ಸಭಾಪತಿಯ ನಿರ್ಧಾರ ಕುರಿತು ಸಚಿವ ಎಸ್‌. ಸುರೇಶ್ ಕುಮಾರ್ ಟ್ವೀಟ್‌ ಮೂಲಕ ಅಸಮಾಧಾನ ಹೊರಹಾಕಿರುವುದಕ್ಕೆ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಪರಿಷತ್‌ನಲ್ಲಿ ಸೋಮವಾರ ನೀಡಿದ ಉತ್ತರ ಕೆಲಹೊತ್ತು ಚರ್ಚೆಗೆ ಗ್ರಾಸವಾಯಿತು.

ಕಲಾಪದ ಆರಂಭದಲ್ಲಿ ಟ್ವೀಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ, ‘ಪೀಠದ ಲ್ಲಿರುವಾಗ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲಾಗುತ್ತಿದೆ. ಇದು ಸರಿಯಲ್ಲ’ ಎಂದರು.
ಸಭಾಪತಿಯ ನಡೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ಎನ್. ರವಿಕುಮಾರ್, ‘ಈ ರೀತಿ ಆಕ್ಷೇಪ ವ್ಯಕ್ತಪಡಿಸುವುದಕ್ಕೆ ಯಾವ ನಿಯಮದಲ್ಲಿ ಅವಕಾಶವಿದೆ. ಸದನದ ಹೊರಗೆ ವ್ಯಕ್ತವಾದ ಅಭಿಪ್ರಾಯಕ್ಕೆ ಸದನದಲ್ಲಿ ಉತ್ತರ ನೀಡಿ ಸಭಾಪತಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ’ ಎಂದರು.

ಆಗ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮಧ್ಯಪ್ರವೇಶಿಸಿ, ‘ಸಭಾಪತಿ ನಿಯಮವನ್ನು ಮೀರಿ ಅಧಿಕಾರ ಚಲಾಯಿಸಬಹುದು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ’ ಎಂದರು.

ಆಗ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಸಭಾಪತಿಗಳ ನಿರ್ಧಾರವೇ ಅಂತಿಮ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಸರ್ಕಾರ ತರುವ ಕಾಯ್ದೆಗಳಿಗೆ ಅವಿಶ್ವಾಸ ವ್ಯಕ್ತಪಡಿಸುತ್ತಾ ಹೋದರೆ, ಆಡಳಿತ ನಡೆಸುವುದು ಸಾಧ್ಯವಿಲ್ಲ ಎನ್ನುವುದನ್ನು ವಿರೋಧ ಪಕ್ಷ ಕೂಡಾ ಅರ್ಥ ಮಾಡಿಕೊಳ್ಳಬೇಕು’ ಎಂದರು. ನಂತರ ಸಭಾಪತಿಯವರು ಗದ್ದಲಕ್ಕೆ ತೆರೆ ಎಳೆದರು.

ಪಿಂಚಣಿ ಹಣ ತಕ್ಷಣ ಬಿಡುಗಡೆ: ಬಿಎಸ್‌ವೈ ಭರವಸೆ

ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ ಸೇರಿ ಎಲ್ಲ ರೀತಿಯ ಪಿಂಚಣಿಯ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಯಡಿಯೂರಪ್ಪ ವಿಧಾನಸಭೆಯಲ್ಲಿ ಭರವಸೆ ನೀಡಿದರು.

‘ಸುಮಾರು ಆರು ತಿಂಗಳಿಂದ ವೃದ್ಧಾಪ್ಯ ವೇತನವೂ ಸೇರಿ ಯಾವುದೇ ಪಿಂಚಣಿ ಬಿಡುಗಡೆ ಆಗದೇ ವೃದ್ಧರು, ವಿಧವೆಯರು, ಅಂಗವಿಕಲರು ಸಂಕಷ್ಟದಲ್ಲಿದ್ದಾರೆ’ ಎಂದು ರವೀಂದ್ರ ಗಮನಸೆಳೆದಿದ್ದರು.
ಕಂದಾಯ ಸಚಿವರ ಪರವಾಗಿ ಉತ್ತರಿಸಿದ ವಸತಿ ಸಚಿವ ವಿ.ಸೋಮಣ್ಣ, ‘ಒಟ್ಟು 67 ಲಕ್ಷ ಪಿಂಚಣಿದಾರರಲ್ಲಿ 7.56 ಲಕ್ಷ ಜನರಿಗೆ ಬಾಕಿ ಉಳಿದಿದೆ. ಇವರ ಪೈಕಿ 3.2 ಲಕ್ಷ ಜನರ ಮಾಹಿತಿ, ಆಧಾರ್ ಸಂಖ್ಯೆ ಸರಿ ಇಲ್ಲ.ಪರಿಶೀಲಿಸಬೇಕಿದೆ’ ಎಂದರು.

ಸಮರ್ಪಕ ಆಡಳಿತವಲ್ಲ

‘ಲಕ್ಷಾಂತರ ಜನರಿಗೆ ಪಿಂಚಣಿ ತಲುಪಿಲ್ಲ ಎಂದರೆ, ಅಧಿಕಾರಿಗಳು ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎಂದಾಗುತ್ತದೆ. ಸಂಬಂಧಪಟ್ಟ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಒಟ್ಟಾರೆ ವ್ಯವಸ್ಥೆಯಲ್ಲಿ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸುಮಾರು ಏಳು– ಎಂಟು ತಿಂಗಳಿಂದ ಪಿಂಚಣಿ ಹಣ ಸಂದಾಯವಾಗಿಲ್ಲ. ಸರ್ಕಾರ ನೀಡುವ ಅಲ್ಪ ಮೊತ್ತದ ಹಣವನ್ನೇ ನೆಚ್ಚಿಕೊಂಡಿರುತ್ತಾರೆ. ಇವರ ಆರೋಗ್ಯ ರಕ್ಷಣೆಗೆ ಹಣ ಇಲ್ಲದಂತೆ ಆಗುತ್ತದೆ ಎಂದು ಹೇಳಿದರು.

ಜಿಎಸ್‌ಟಿ ಪಾಲು ಪಡೆದೇ ತೀರುತ್ತೇವೆ: ಸಚಿವ ಬೊಮ್ಮಾಯಿ

ಬೆಂಗಳೂರು: ‘ಜಿಎಸ್‌ಟಿ ಪರಿಹಾರವಾಗಲಿ, ಬಾಕಿ ಕೇಳುವಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ರಾಜೀ ಆಗಲಿಲ್ಲ. ನಮ್ಮ ಪಾಲನ್ನು ಪಡೆದೇ ತೀರುತ್ತೇವೆ. ಈ ಬಗ್ಗೆ ಯಾವುದೇ ಸಂಶಯ ಬೇಡ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. 

ವಿಧಾನಸಭೆಯಲ್ಲಿ ಪ್ರವಾಹ ಸಂತ್ರಸ್ತರ ಪರಿಹಾರ ವಿಷಯ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪವನ್ನು ತಳ್ಳಿ ಹಾಕಿದ ಅವರು, ‘ಜಿಎಸ್‌ಟಿ ಸಭೆಯಲ್ಲಿ ಎಂದೂ ರಾಜ್ಯ ಹಿತವನ್ನು ಕಡೆಗಣಿಸಿಲ್ಲ. ನಮಗೆ ಬರಬೇಕಾಗಿರುವ ಬಾಕಿಯ ಬಗ್ಗೆ ದಿಟ್ಟವಾಗಿಯೇ ಪ್ರಸ್ತಾಪಿಸಿದ್ದೇನೆ. ಮುಂದೆಯೂ ಒತ್ತಡ ಹೇರುತ್ತೇವೆ’ ಎಂದು ಅವರು ಹೇಳಿದರು.

‘ಜೆಎಸ್‌ಟಿ ಮಂಡಳಿ ಸಾಲ ಪಡೆಯುವಂತೆ ನೀಡಿರುವ ಸಲಹೆ ಒಪ್ಪಿದ್ದೇವೆ. ಸಾಲ ಪಡೆಯುವುದರಿಂದ ರಾಜ್ಯದ ಬೊಕ್ಕಸಕ್ಕೆ ಯಾವುದೇ ಹೊರೆ ಆಗುವುದಿಲ್ಲ ಎಂಬುದು ಮನವರಿಕೆ ಆದ ಬಳಿಕವೇ ಒಪ್ಪಿಕೊಂಡಿದ್ದೇವೆ’ ಎಂದು ತಿಳಿಸಿದರು.

ನೇಮಕಾತಿಯೇ ಅಕ್ರಮ– ಸಕ್ರಮ ಅಸಾಧ್ಯ: ಡಾ.ಅಶ್ವತ್ಥನಾರಾಯಣ

ಬೆಂಗಳೂರು: ‘ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ 136 ಸಿಬ್ಬಂದಿಯನ್ನು ಕಾನೂನುಬಾಹಿರವಾಗಿ ನೇಮಕ ಮಾಡಲಾಗಿದ್ದು, ಅವರನ್ನು ಯಾವುದೇ ಕಾರಣಕ್ಕೂ ಹುದ್ದೆಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಈ ನೇಮಕಾತಿ ಪ್ರಕ್ರಿಯೆ ನಡೆಸಿದ ಅಧಿಕಾರಿ ವಿರುದ್ಧವೂ ತನಿಖೆಯಾಗಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಿಬ್ಬಂದಿ ನೇಮಕಾತಿ ಕುರಿತು ಬಸವರಾಜ ಹೊರಟ್ಟಿಯವರ ಪರವಾಗಿ ಜೆಡಿಎಸ್‌ನ ಅಪ್ಪಾಜಿಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕ್ಲಸ್ಟರ್‌ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯಾಗಿದ್ದವರು ಸರ್ಕಾರದ ಅನುಮತಿ ಪಡೆಯದೆ 136 ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಮಾಡಿದ್ದಾರೆ. ಹೊಸದಾಗಿ ನೇಮಕಗೊಂಡಿರುವ ಕುಲಪತಿ ಅಕ್ರಮವಾಗಿ ನೇಮಕಗೊಂಡಿರುವ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ತೆರವುಗೊಳಿಸಿದ್ದಾಾರೆ. ಅವರಿಗೆ 10 ತಿಂಗಳ ವೇತನ ನೀಡಲು ಬಾಕಿಯಿದ್ದು, ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ವೇತನ ನೀಡಲಾಗುವುದು’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಶ್ರೀಕಂಠೇಗೌಡ, ‘136 ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಏಕಾಏಕಿ ವಜಾಗೊಳಿಸಿರುವುದು ಸರಿಯಲ್ಲ. ಅವರನ್ನು ಮುಂದುವರಿಸಬೇಕು. ಈ ಬಗ್ಗೆ ಸಚಿವರಿಂದ ಸ್ಪಷ್ಟ ಉತ್ತರ ಸಿಗುವವರೆಗೂ ಬಿಡುವುದಿಲ್ಲ’ ಎಂದು ಸಭಾಪತಿ ಪೀಠದ ಬಳಿ ಪ್ರತಿಭಟನೆಗೆ ಮುಂದಾದರು.

‌ಆಗ ಪ್ರತಿಕ್ರಿಯಿಸಿದ ಸಚಿವರು, ‘136 ಮಂದಿಯನ್ನು ಮುಂದುವರಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಅವರಿಗೆ ನೀಡಬೇಕಾದ ವೇತನವನ್ನು ಸರ್ಕಾರ ನೀಡಲಿದೆ. ಈ ಬಗ್ಗೆ ನಿಮ್ಮ ಜತೆ ವೈಯಕ್ತಿಕವಾಗಿ ಮಾತನಾಡುತ್ತೇನೆ’ ಎಂದು ಹೇಳಿದರು.

ಆಗ ಶ್ರೀಕಂಠೇಗೌಡರು ತಮ್ಮ ಆಸನಕ್ಕೆ ಬಂದು ಕುಳಿತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು