ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ವಾರದ ನಂತರ ತಂಪೆರೆದ ಭಾರಿ ಮಳೆ

Published 1 ಜೂನ್ 2024, 23:33 IST
Last Updated 1 ಜೂನ್ 2024, 23:33 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ದಿನಗಳ ವಿರಾಮದ ಬಳಿಕ ನಗರದಲ್ಲಿ ಶನಿವಾರ ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಮಳೆಯಾಗಿದೆ.

ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಅನೇಕ ಕಡೆಗಳಲ್ಲಿ ರಸ್ತೆಯೇ ಕಾಲುವೆಯಂತಾಯಿತು. ಇದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು. ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಪೀಣ್ಯ ಕೈಗಾರಿಕಾ ವಲಯ, ದೊಡ್ಡನೆಕುಂದಿ, ವಿದ್ಯಾಪೀಠ, ರಾಜಾಜಿನಗರ, ಎಚ್‌ಎಎಲ್‌, ಹೊರಮಾವು, ಎಂ.ಜಿ. ರಸ್ತೆ, ಸುಬ್ರಹ್ಮಣ್ಯ ನಗರ, ಶಿವಾಜಿನಗರ, ಆರ್‌.ಟಿ.ನಗರ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ಮಧ್ಯರಾತ್ರಿಯವರಗೂ ಮಳೆ ಮುಂದುವರಿದಿತ್ತು.

ಹೆಬ್ಬಾಳ ಪಿ.ಎಸ್‌ ಬಳಿ ವಾಹನ ರಸ್ತೆಗೆ ಉರುಳಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಹೆಬ್ಬಾಳದ ಮೇಲಿನ ರ‍್ಯಾಂಪ್‌ನಲ್ಲಿ ನೀರು ನಿಂತು ಸಮಸ್ಯೆ ಉಂಟಾಯಿತು. ಇಲ್ಲಿನ ಪಾದಚಾರಿ ಅಂಡರ್‌ಪಾಸ್‌ ನಲ್ಲಿಯೂ ನೀರು ನಿಂತಿತ್ತು. ಇಲ್ಲಿನ ಸಮಸ್ಯೆಗಳಿಂದಾಗಿ ವಿಮಾನ ನಿಲ್ದಾಣ ಕಡೆಗೆ ಹೋಗುವ ವಾಹನಗಳು, ವೀರಣ್ಣ ಪಾಳ್ಯ ಕಡೆಗೆ ಸಂಚರಿಸುವ ವಾಹನಗಳು ಪರದಾಡುವಂತಾಯಿತು. ಕೆಂಪಾಪುರ ಬಳಿ ರಸ್ತೆಯಲ್ಲಿಯೇ ನೀರು ನಿಂತಿದ್ದರಿಂದ ವಾಹನಗಳು ನಿಧಾನವಾಗಿ ಚಲಿಸಿದವು.

ಗೊರಗುಂಟೆಪಾಳ್ಯ ಸುತ್ತಮುತ್ತ ಭಾರಿ ಮಳೆಯಾಗಿದ್ದರಿಂದ ತುಮಕೂರು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಕೆಲವು ಗಂಟೆಗಳಷ್ಟು ಹೊತ್ತು ಸಂಚಾರ ದಟ್ಟಣೆ ಉಂಟಾಯಿತು. 

ವೀರಸಂದ್ರ ಜಂಕ್ಷನ್‌ನಿಂದ ಹೊಸೂರು ಕಡೆಗೆ, ಹುಣಸೇಮಾರನ ಹಳ್ಳಿಯಿಂದ ವಿಮಾನ ನಿಲ್ದಾಣ ರಸ್ತೆ ಕಡೆಗೆ, ರೈನ್‌ಬೊ ಜಂಕ್ಷನ್‌ನಿಂದ ಕಾರ್ತಿ ಕನಗರದ ಕಡೆಗೆ, ವಿಂಡ್ಸರ್ ಮ್ಯಾನರ್ ಜಂಕ್ಷನ್‌ನಿಂದ ಪ್ಯಾಲೇಸ್ ಗುಟ್ಟಹಳ್ಳಿ ಕಡೆಗೆ ಹೋಗುವ ವಾಹನಗಳು ನಿಧಾನವಾಗಿ ಚಲಿಸಿದವು.

ಪಣತ್ತೂರು ರೈಲ್ವೆ ಸೇತುವೆ ಜಲಾವೃತ ವಾಗಿದ್ದು, ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಕೆಂಗೇರಿಯಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ಗೋಪಾಲನ್‌ ಮಾಲ್‌ ಕಡೆಗೆ ಹೋಗುವ ವಾಹನಗಳಿಗೆ ತೊಂದರೆಯಾಯಿತು. ಬಿಇಎಲ್‌ ಸರ್ಕಲ್‌ನಲ್ಲಿ ರಸ್ತೆಯಲ್ಲಿ ನೀರು ನಿಂತು ಕೊಳದಂತಾಗಿತ್ತು. ಬಿನ್ನಿಮಿಲ್ ಜಂಕ್ಷನ್‌ನಲ್ಲಿ ನೀರು ನಿಂತಿದ್ದರಿಂದ ಮಾಗಡಿ ರಸ್ತೆ ಕಡೆಗೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು.

ಚೂಡಸಂದ್ರ ಸಿಗ್ನಲ್ ಬಳಿ ಮರದ ಕೊಂಬೆ ಬಿದ್ದ ಕಾರಣ ರಾಯಸಂದ್ರ ಸಿಗ್ನಲ್‌ನಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ರಾಜೀವ್‌ಗಾಂಧಿ ವೃತ್ತದ ಬಳಿ ನೀರು ನಿಂತಿದ್ದರಿಂದ ಮಂತ್ರಿಮಾಲ್‌ ಕಡೆಗೆ ವಾಹನಗಳು ಸಂಚರಿಸಲು ಕಷ್ಟಪಟ್ಟವು. ಬನ್ನೇರುಘಟ್ಟದ ರಸ್ತೆಯಲ್ಲಿಯೂ ನೀರು ರಸ್ತೆಯಲ್ಲಿಯೇ ಹರಿಯಿತು. 

ಒಂಬತ್ತು ಮರಗಳು ಧರೆಗೆ

ನಗರದಲ್ಲಿ ಶನಿವಾರ ಮಧ್ಯಾಹ್ನದಿಂದ ಸುರಿದ ಭಾರಿ ಮಳೆಗೆ ಹಲವು ಪ್ರದೇಶಗಳಲ್ಲಿ ಒಂಬತ್ತು ಮರಗಳು ಧರೆಗುರುಳಿವೆ. 32 ಸ್ಥಳಗಳಲ್ಲಿ ಮರದ ಕೊಂಬೆಗಳು ಉರುಳಿವೆ.

ರಾಜರಾಜೇಶ್ವರಿನಗರ, ದಕ್ಷಿಣ ಹಾಗೂ ಪೂರ್ವ ವಲಯದಲ್ಲಿ ತಲಾ ಎರಡು ಮರಗಳು ಉರುಳಿ ಬಿದ್ದಿದ್ದರೆ, ದಕ್ಷಿಣ, ದಾಸರಹಳ್ಳಿ, ಮಹದೇವಪುರದಲ್ಲಿ ತಲಾ ಒಂದು ಮರ ಧರೆಗುರುಳಿದೆ.

ಮನೆಗಳಿಗೆ ನೀರು: ಬೊಮ್ಮನಹಳ್ಳಿ ವಲಯದ ಸಾರಕ್ಕಿ ಸಿಗ್ನಲ್ ರಾಮಕೃಷ್ಣನಗರದ ಬಳಿ ಜಲಮಂಡಳಿ ಪೈಪ್ ಲೈನ್ ಕಾಮಗಾರಿಯಿಂದಾಗಿ ಕಲ್ವರ್ಟ್ ಬ್ಲಾಕ್ ಆಗಿದ್ದ ಪರಿಣಾಮ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದೆ.

ಪೂರ್ವಸಿದ್ಧತೆ ಮಾಡಿಕೊಳ್ಳದ ಬಿಬಿಎಂಪಿ

ಈ ವರ್ಷ ಮಳೆಗಾಲದಲ್ಲಿ ಅನಾಹುತವಾಗದಂತೆ ಕ್ರಮ ವಹಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಪದೇ ಪದೇ ಹೇಳಿದ್ದರೂ, ಮಳೆ ಬಂದಾಗ ಸಮಸ್ಯೆಗಳು ಮುಂದುವರಿದಿವೆ.

ರಸ್ತೆಗಳಲ್ಲಿ ಮಳೆನೀರು ನಿಲ್ಲದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳುತ್ತಲೇ ಇದ್ದಾರೆ. ಆದರೆ, ಶನಿವಾರ ಮಧ್ಯಾಹ್ನದಿಂದ ರಾತ್ರಿವರೆಗೆ ನಗರದ ರಸ್ತೆಗಳು ಮಳೆ ನೀರಿನಿಂದ ತುಂಬಿಹೋಗಿದ್ದವು.

ಚರಂಡಿಗಳಲ್ಲಿ ನೀರು ಹರಿಯುವ ಬದಲು ಬಹುತೇಕ ಕಡೆಗಳಲ್ಲಿ ರಸ್ತೆಯಲ್ಲಿಯೇ ನೀರು ಹರಿಯುತ್ತಿದೆ. ರಾಮಕೃಷ್ಣ ನಗರ ಸಹಿತ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಿಬಿಎಂಪಿ ಸರಿಯಾದ ಕ್ರಮ ವಹಿಸದೇ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT