ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ನಗರದಾದ್ಯಂತ ಮತ್ತೆ ಗಾಳಿ, ಮಳೆ ಅಬ್ಬರ

Published 24 ಮೇ 2023, 4:04 IST
Last Updated 24 ಮೇ 2023, 4:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿಯೂ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಕೆಲವು ಭಾಗದಲ್ಲಿ ಮರಗಳು ಧರೆಗುರುಳಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾತ್ರಿ 7 ಗಂಟೆಯ ತನಕವೂ ಮಳೆ ಬರುವ ಮುನ್ಸೂಚನೆ ಇರಲಿಲ್ಲ. ರಾತ್ರಿ 8.30ರ ಸುಮಾರಿಗೆ ಧಾರಾಕಾರ ಮಳೆಯಾಗಿದೆ.

ಮೊದಲಿಗೆ ಜೋರು ಬಿರುಗಾಳಿ ಆರಂಭವಾಯಿತು. ಬಳಿಕ ಗುಡುಗು ಸಹಿತ ಮಳೆ ಸುರಿಯಿತು. ರಸ್ತೆಯಲ್ಲಿದ್ದ ಬೈಕ್‌ ಸವಾರರು ಹಾಗೂ ಕಾರು ಚಾಲಕರು ಗಾಳಿಯ ಅಬ್ಬರಕ್ಕೆ ಬೆಚ್ಚಿಬಿದ್ದರು. ಬೈಕ್‌ ಸವಾರರು ಗಾಳಿಗೆ ಹೆದರಿ ಬೈಕ್‌ಗಳನ್ನು ರಸ್ತೆ ಬದಿಗೆ ನಿಲ್ಲಿಸಿ ಬಸ್‌ ಶೆಲ್ಟರ್‌, ಮಳಿಗೆ ಎದುರು ಆಶ್ರಯ ಪಡೆದುಕೊಂಡರು.

ದಿಢೀರ್ ಸುರಿದ ಮಳೆಯಿಂದ ರಸ್ತೆಗಳು, ಚರಂಡಿಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಅಂಡರ್‌ ಪಾಸ್‌ಗಳಲ್ಲಿ ಮಂಗಳವಾರ ರಾತ್ರಿಯೂ ನೀರು ಸಂಗ್ರಹಗೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಚಾಮರಾಜಪೇಟೆ, ಅಶೋಕನಗರ, ಹಲಸೂರು, ದೊಡ್ಡಬೊಮ್ಮಸಂದ್ರ, ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಮೆಜೆಸ್ಟಿಕ್, ಗಾಂಧಿನಗರ, ದೀಪಾಂಜಲಿ ನಗರ, ಕಾಮಾಕ್ಷಿಪಾಳ್ಯ, ಮಲ್ಲೇಶ್ವರ, ವಿಜಯನಗರ, ಎಂ.ಜಿ. ರಸ್ತೆ, ಗಿರಿನಗರ, ಹನುಮಂತನಗರ, ಜಯನಗರ, ಬನಶಂಕರಿ, ಶಿವಾಜಿನಗರ, ಕೋರಮಂಗಲ, ವಿವೇಕನಗರ, ಇಂದಿರಾನಗರ, ವಸಂತನಗರ, ಸಂಪಂಗಿ ರಾಮನಗರ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ.

ಕಳೆದ ಮೂರು ದಿನಗಳಿಂದಲೂ ಈ ಭಾಗದಲ್ಲಿ ಮಳೆಯಾಗುತ್ತಿದೆ. ಮತ್ತಿಕೆರೆ, ವಿದ್ಯಾರಣ್ಯಪುರ, ಬಿಇಎಲ್‌ ವೃತ್ತದಲ್ಲಿ ಮರದ ಕೊಂಬೆಗಳು ಬಿದ್ದಿವೆ.

ನಾಗಸಂದ್ರ, ಜಾಲಹಳ್ಳಿ, ಪೀಣ್ಯ, ಪೀಣ್ಯ ಕೈಗಾರಿಕಾ ಪ್ರದೇಶ, ಸುಂಕದಕಟ್ಟೆ, ಬ್ಯಾಡರಹಳ್ಳಿ, ಸುಮನಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಕೆಂಗೇರಿ ಭಾಗದಲ್ಲೂ ಜೋರು ಮಳೆಯಾಗಿದೆ.

ಸೋಮವಾರ ರಾತ್ರಿಯೂ ರಾಜಧಾನಿ ಬಹುತೇಕ ಭಾಗದಲ್ಲಿ ಮಳೆಯಾಗಿತ್ತು. ಜಾಲಹಳ್ಳಿಯ ಎಸ್‌.ಎಂ. ರಸ್ತೆಯ ಪೆಟ್ರೋಲ್‌ ಬಂಕ್‌ ಸಮೀಪದ ಪುಸ್ತಕ ಅಂಗಡಿಯ ಮೇಲೆ ದೊಡ್ಡ ಮರವೊಂದು ಬಿದ್ದಿತ್ತು. ಬಿಬಿಎಂಪಿ ಅರಣ್ಯ ಸಂಚಾರ ಘಟಕದ ಸಿಬ್ಬಂದಿ ಸೋಮವಾರ ರಾತ್ರಿಯೇ ತೆರವುಗೊಳಿಸಿದ್ದರು.

ಅಂಡರ್ ಪಾಸ್‌:

ವರದಿ ಬಳಿಕ ನಿರ್ಧಾರ ಅಂಡರ್ ಪಾಸ್‌ಗಳ ಸ್ಥಿತಿಗತಿ ಮೌಲ್ಯಮಾಪನ ನಡೆಸಲಾಗುತ್ತಿದ್ದು ಅಪಾಯದಲ್ಲಿದ್ದರೆ ಅಂತಹ ಅಂಡರ್ ಪಾಸ್‌ಗಳಲ್ಲಿ ಸಂಚಾರ ನಿರ್ಬಂಧಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಅವರಿಂದ ವರದಿ ಕೇಳಲಾಗಿದೆ. ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಕೆ.ಆರ್.ರಸ್ತೆ ಅಂಡರ್ ಪಾಸ್‌ನಲ್ಲಿ ನೀರು ನಿಲ್ಲದಂತೆ ಕಾಮಗಾರಿ ಆರಂಭಿಸಲಾಗುತ್ತಿದೆ. ಸಂಚಾರ ಪೊಲೀಸರ ಸಲಹೆ ಮೇರೆಗೆ ರಾತ್ರಿ ವೇಳೆ ಕೆಲಸ ನಿರ್ವಹಿಸಲಾಗುವುದು. 15 ದಿನಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಎ ಖಾತಾ ಅಕ್ರಮ

ವರದಿ ಕೇಳಿದ ಮುಖ್ಯ ಆಯುಕ್ತ ನಗರದಲ್ಲಿ ನಡೆದಿರುವ ‘ಬಿ’ ಖಾತದಿಂದ ‘ಎ‌’ ಖಾತಾ ಬದಲಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು. ‘ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದೆ. ಮಹದೇವಪುರ ಸೇರಿ ಹೊರ ವಲಯದ ಪ್ರದೇಶಗಳಲ್ಲೇ ಹೆಚ್ಚಿನ ಆರೋಪವಿದೆ. ವರದಿ ಬಂದ ನಂತರ ಸತ್ಯ ತಿಳಿಯಲಿದೆ. ಯಾವುದೇ ಅಧಿಕಾರಿ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಮೈಕೊ ಲೇಔಟ್‌ನಲ್ಲಿ ಕುಸಿದ ರಸ್ತೆ

ಮೈಕೊ ಲೇಔಟ್‌ನಲ್ಲಿ ಇತ್ತೀಚೆಗೆ ನಿರ್ಮಾಣವಾಗಿದ್ದ ರಸ್ತೆ ಕುಸಿದಿದ್ದು ಬಿಬಿಎಂಪಿ ಅಧಿಕಾರಿಗಳು ದುರಸ್ತಿ ಮಾಡಿದರು. ಮೈಕೊ ಲೇಔಟ್ ಪೊಲೀಸ್ ಠಾಣೆ ಹಿಂಭಾಗದಲ್ಲಿ ಸೋಮವಾರ ರಾತ್ರಿ ಇದ್ದಕ್ಕಿಂದ್ದಂತೆ ಕುಸಿದಿದ್ದು ಮಳೆ ನೀರು ಹರಿದು ಸುರಂಗದ ರೀತಿಯಲ್ಲಿ ಕೊರೆದಿದೆ. ಮಂಗಳವಾರ ಬೆಳಿಗ್ಗೆ ಬಿಬಿಎಂಪಿ ಸಿಬ್ಬಂದಿ ಗುಂಡಿ ಮುಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT