ಗುರುವಾರ , ನವೆಂಬರ್ 26, 2020
22 °C

ಬೆಂಗಳೂರಿನಲ್ಲಿ ಸುರಿದ ಮಳೆಗೆ ತುಂಬಿ ಹರಿದ ರಾಜಕಾಲುವೆ: ಪರದಾಡಿದ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಜೋರು ಮಳೆ ಆಗುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ವರುಣ ಅರ್ಭಟಿಸಿ ಸುರಿಯುತ್ತಿದ್ದಾನೆ.

ರಾಜಾಜಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ಶಾಂತಿನಗರ, ಮೆಜೆಸ್ಟಿಕ್, ಗಾಂಧಿನಗರ, ಬಸವನಗುಡಿ, ಆರ್.ಟಿ.ನಗರ, ಹೆಬ್ಬಾಳ, ಮಡಿವಾಳ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ ಹಾಗೂ ಸುತ್ತಮುತ್ತ ಮಳೆ ಜೋರಾಗಿದೆ.

ಬೆಳಿಗ್ಗೆಯಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಹಲವೆಡೆ ಜೋರಾಗಿ ಮಳೆ ಆರಂಭವಾಗಿದೆ. ಸಂಜೆಯೂ ಮಳೆ ಪ್ರಮಾಣ ಹೆಚ್ಚಿದ್ದರಿಂದ, ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು.

ಹಲವು ಕೆಳ ಸೇತುವೆಗಳಲ್ಲಿ ನೀರು ಹರಿಯುತ್ತಿದ್ದು, ಅದರಲ್ಲಿ ವಾಹನಗಳು ಸಂಚರಿಸುತ್ತಿವೆ. ಕೆಲ ವಾಹನಗಳು ಕೆಟ್ಟಿದ್ದು, ಅವುಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದೆ. ಅದರಿಂದ ದಟ್ಟಣೆಯೂ ಉಂಟಾಗಿದೆ.

'ನಗರದಲ್ಲಿ ಜೋರು ಮಳೆ ಇದೆ. ದಕ್ಷಿಣ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ರಸ್ತೆಯಲ್ಲಿ ನೀರು ನಿಂತಿರುವ ದೂರುಗಳು ಬಂದಿವೆ. ಮಳೆ ಕಡಿಮೆಯಾದ ನಂತರ ಹಾನಿ ಬಗ್ಗೆ ಮತ್ತಷ್ಟು ದೂರು ಬರಬಹುದು' ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದರು.

ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದೆ. ಸಂಜೆ ಸುರಿದ ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

ಮೂರು ಗಂಟೆ ನಿರಂತರ ಮಳೆ: ಗಾಂಧಿ ಬಜಾರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಹಬ್ಬದ ವ್ಯಾಪಾರಕ್ಕಾಗಿ ಹೂವು, ಹಣ್ಣು, ಬಾಳೆ ಮಾರಾಟಕ್ಕೆ ಬಂದಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ಬಸವನಗುಡಿ ಸುತ್ತಮುತ್ತ ಟ್ರಾಫಿಕ್ ಜಾಮ್‌ ಆಗಿದೆ, ರಸ್ತೆ ತುಂಬೆಲ್ಲ ಮಣ್ಣು–ಕಲ್ಲು ತುಂಬಿದೆ.


ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ ಕಾಲೇಜು ಸಮೀಪ ಶುಕ್ರವಾರ ಸಂಜೆ ಕಂಡು ಬಂದ ದೃಶ್ಯ

ರಾಮನಗರದಲ್ಲೂ ಮಳೆ

ರಾಮನಗರದಲ್ಲಿ ಸಂಜೆ ಕೆಲ ಹೊತ್ತು ಉತ್ತಮ ಮಳೆ ಸುರಿಯಿತು. ಮೋಡಗಳು ಕವಿದಿದ್ದು ಮತ್ತೆ  ಮಳೆ ಆಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸತತವಾಗಿ ವರ್ಷಧಾರೆ ಆಗುತ್ತಿದೆ. ಇದರಿಂದ ಸೊಪ್ಪು, ತರಕಾರಿ, ವೀಳ್ಯದೆಲೆ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ.


ಮಳೆಯಿಂದಾಗಿ ಮಂಚನಬೆಲೆ ಜಲಾಶಯ ಭರ್ತಿ ಆಗಿದ್ದು, ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದಾಗಿ‌ ರಾಮನಗರ ಬಳಿ ಅರ್ಕಾವತಿ ಮೈದುಂಬಿ ಹರಿಯುತ್ತಿದೆ


ಮಳೆಯಿಂದಾಗಿ ಮಾಗಡಿಯಲ್ಲಿ ಹುರುಳಿ ಬೆಳೆ ಜಲಾವೃತಗೊಂಡಿದೆ

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ರಾಜಕಾಲುವೆ

ಬೆಂಗಳೂರಿನ ಬನಶಂಕರಿ 6ನೇ ಹಂತದಲ್ಲಿ ಮಧ್ಯಾಹ್ನ 3.45ರಿಂದ ಆರಂಭವಾದ ಬಿರುಸಿನ ಮಳೆ  ಸುಮಾರು ಮೂರು ಗಂಟೆಗಳಕಾಲ ಸತತವಾಗಿ ಸುರಿದಿದೆ.

ಪರಿಣಾಮವಾಗಿ ಬಡಾವಣೆಯಲ್ಲಿದ್ದ ರಾಜಕಾಲುವೆಗಳಲ್ಲ ಭರ್ತಿಯಾಗಿವೆ. ಆರನೇ ಹಂತದಲ್ಲಿರುವ ಮುಖ್ಯ ರಾಜಕಾಲುವೆ ಅಪಾಯಮಟ್ಟದಲ್ಲಿ ತುಂಬಿ ಹರಿದಿದೆ.

ರಾಜಕಾಲುವೆಯಿಂದ ಹರಿದ ನೀರು ಇದೇ ಬಡಾವಣೆಯಲ್ಲಿರುವ ಐದು ಎಕರೆ ವಿಸ್ತೀರ್ಣದ ಬಿಡಿಎ ಉದ್ಯಾನದೊಳಗೆ (ಶಿಲ್ಪೋದ್ಯಾನ) ನುಗಿದೆ. ಪರಿಣಾಮವಾಗಿ ಇಡೀ ಉದ್ಯಾನ ನೀರಿನಲ್ಲಿ ಮುಳುಗಿದೆ. ಸಂಜೆ 6.30ಗಂಟೆಗೆ ಮಳೆ ಬಿಡುವುಕೊಟ್ಟಿದೆ.


ಬೆಂಗಳೂರಿನ ಬನಶಂಕರಿ ಆರನೇ ಹಂತದಲ್ಲಿರುವ ರಾಜಕಾಲುವೆ ತುಂಬಿ ಹರಿಯುತ್ತಿರುವ ದೃಶ್ಯ.


ಮಳೆ ನೀರಿನಿಂದ ಭರ್ತಿಯಾಗಿರುಬ ಬನಶಂಕರಿ 6ನೇ ಹಂತದಲ್ಲಿರುವ ಬಿಡಿಎ ಪಾರ್ಕ್ (ಶಿಲ್ಪೋದ್ಯಾನ)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು