ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಚರಕನಹಳ್ಳಿ ಗುಡಿಸಿಲು ಬೆಂಕಿ: ಪರಿಹಾರ ಮೊತ್ತ ಹೆಚ್ಚಳ

Last Updated 1 ಸೆಪ್ಟೆಂಬರ್ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಚರಕನಹಳ್ಳಿಕೊಳೆಗೇರಿ ಪ್ರದೇಶದಲ್ಲಿದ್ದ ವಲಸೆ ಕಾರ್ಮಿಕರ ಗುಡಿಸಿಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ತಲಾ ₹14,100ಕ್ಕೆ ಹೆಚ್ಚಿಸಲಾಗಿದೆ’ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಈ ಹಿಂದೆ ನಿಗದಿ ಮಾಡಿದ್ದ ₹6,100 ಪರಿಹಾರವನ್ನು ಹೆಚ್ಚಳ ಮಾಡಬೇಕು’ ಎಂದು ಸರ್ಕಾರಕ್ಕೆಆದೇಶ ನೀಡಿತ್ತು.

ಇದೇ ಪ್ರಕರಣದ ಸಂಬಂಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿದಾರರ ಪರ ಹಾಜರಾಗಿದ್ದ ವಕೀಲರು, ‘1 ಎಕರೆ 6 ಗುಂಟೆ ಭೂಮಿಯನ್ನು ಕೊಳೆಗೇರಿ ಎಂದು ಘೋಷಿಸಲಾಗಿದೆ. 1 ಎಕರೆ 6 ಗುಂಟೆ ಜಾಗ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಕೊಳಚೆ ನಿರ್ಮೂಲನಾ ಮಂಡಳಿ 2016ರಲ್ಲೇ ಮನವಿ ಸಲ್ಲಿಸಿದೆ. ಭೂಮಿ ಹಸ್ತಾಂತರವಾದರೆ ಸಮಸ್ಯೆ ಇತ್ಯರ್ಥವಾಗಲಿದೆ. ಗುಡಿಸಿಲು ನಾಶ ಘಟನೆಯ ತನಿಖೆಯ ಮೇಲ್ವಿಚಾರಣೆಯನ್ನೂ ನ್ಯಾಯಾಲಯ ಮಾಡಬೇಕು’ ಎಂದು ಕೋರಿದರು.

‘ಕೊಳಚೆ ನಿರ್ಮೂಲನಾ ಮಂಡಳಿ ಕೇಳಿರುವ ಭೂಮಿ ಹಸ್ತಾಂತರದ ಪ್ರಕ್ರಿಯೆಯ ಸದ್ಯದ ಸ್ಥಿತಿ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು. ಈವರೆಗೆ ನಿರ್ಧಾರ ಕೈಗೊಳ್ಳದೆ ಇದ್ದರೆ ಕೂಡಲೇ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು. ಗುಡಿಸಿಲು ನಾಶದ ಕುರಿತ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು’ ಎಂದು ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು.

‘ಗುಡಿಸಿಲು ನಾಶದಿಂದ 170 ಕುಟುಂಬಗಳು ತೊಂದರೆಗೆ ಸಿಲುಕಿವೆ. ಅದರಲ್ಲಿ 119 ಕುಟುಂಬಗಳು ಅದೇ ಜಾಗದಲ್ಲಿ ಮತ್ತೆ ಗುಡಿಸಿಲು ನಿರ್ಮಿಸಿಕೊಂಡಿವೆ‍’ ಎಂದು ಸರ್ಕಾರ ತಿಳಿಸಿದೆ.

ಪೊಲೀಸರ ಅಫಿಡವಿಟ್ ಪ್ರಕಾರ, ಕಲ್ಯಾಣ ಮಂಟಪ ಹೊಂದಿರುವ ಇಬ್ಬರು ಲಾಕ್‌ಡೌನ್ ಅವಧಿ ಬಳಸಿಕೊಂಡು ಗುಡಿಸಿಲು ನಾಶಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT