ಶುಕ್ರವಾರ, ಏಪ್ರಿಲ್ 3, 2020
19 °C
ಬಿ.ಜೆ. ಪುಟ್ಟಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ

ಮಾಹಿತಿ ಹಕ್ಕು ಕಾರ್ಯಕರ್ತ ಎನ್‌. ಹನುಮೇಗೌಡಗೆ ₹25 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರ್ವಜನಿಕ ಆಸ್ತಿ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ (ಪಿಐಎಲ್‌) ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಹನುಮೇಗೌಡ ಅವರಿಗೆ ಹೈಕೋರ್ಟ್, ₹ 25 ಸಾವಿರ ದಂಡ ವಿಧಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ಈ ಕುರಿತಂತೆ ಆದೇಶಿಸಿದೆ. ಅಂತೆಯೇ, ಈ ಪ್ರಕರಣದಲ್ಲಿ ಸಾರ್ವಜನಿಕ ಸ್ಥಿರಾಸ್ತಿ ದುರುಪಯೋಗದ ಆರೋಪ ಇರುವುದರಿಂದ ಇದನ್ನು ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ಆಗಿ ದಾಖಲಿಸಿಕೊಂಡಿದೆ.

ಯಾಕೆ ದಂಡ?: ಪುಟ್ಟಸ್ವಾಮಿ ಅವರು ಹನುಮೇಗೌಡರ ವಿರುದ್ಧ ದಾಖಲಿಸಿದ್ದ ಮಾನನಷ್ಟ ದಾವೆಯಲ್ಲಿ ಹನುಮೇಗೌಡ ಶಿಕ್ಷೆಗೆ ಒಳಗಾಗಿರುವ ಸಂಗತಿಯನ್ನು ಮುಚ್ಚಿಟ್ಟ ಕಾರಣಕ್ಕೆ ನ್ಯಾಯಪೀಠ ಈ ದಂಡ ವಿಧಿಸಿದೆ.

‘ವಿಶ್ವ ಗಾಣಿಗ ಸಮುದಾಯ ಟ್ರಸ್ಟ್‌ಗೆ ಕಾನೂನು ಬಾಹಿರವಾಗಿ ಸರ್ಕಾರದ ವತಿಯಿಂದ 8 ಎಕರೆ ಜಮೀನು ಪಡೆಯಲಾಗಿದೆ’ ಎಂದು ಹನುಮೇಗೌಡ ಕಾನೂನು ಸಮರ ನಡೆಸಿದ್ದರು. ಈ ದೂರನ್ನು ಆಕ್ಷೇಪಿಸಿ ಟ್ರಸ್ಟ್‌ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು, ಹನುಮೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿ ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ತೀರ್ಪು ನೀಡಿದ್ದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ಆರೋಪ ಸಾಬೀತಾದ ಕಾರಣ ಹನುಮೇಗೌಡ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ₹ 25 ಸಾವಿರ ದಂಡ ವಿಧಿಸಿದ್ದರು. ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿ ಎರಡು ತಿಂಗಳ ಜೈಲು ಶಿಕ್ಷೆ ಮತ್ತು ₹ 10 ಸಾವಿರ ಭದ್ರತೆ ನೀಡುವಂತೆ ಆದೇಶಿಸಿದ್ದರು.

ಪ್ರಕರಣವೇನು?: ‘ಗಾಣಿಗ ಜನಾಂಗದ ಗುರುಪೀಠಕ್ಕೆ 2011ರ ಫೆಬ್ರುವರಿಯಲ್ಲಿ ಬಜೆಟ್‌ನಲ್ಲಿ ₹ 5 ಕೋಟಿ ಮೀಸಲು ಇರಿಸಲಾಗಿತ್ತು. ಅಂತೆಯೇ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ನಗರೂರು ಗ್ರಾಮದ ಸರ್ವೇ ನಂಬರ್ 112ರಲ್ಲಿ ಗೋಮಾಳದ ಎಂಟು ಎಕರೆ ಜಮೀನನ್ನು ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಹೆಸರಿಗೆ ನೋಂದಣಿ ಮಾಡಿಕೊಡಲಾಗಿದೆ. ಈ ಟ್ರಸ್ಟ್‌ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದ ಬಿ.ಜೆ ಪುಟ್ಟಸ್ವಾಮಿ ಅಧ್ಯಕ್ಷರಾಗಿದ್ದರು. ಇವರು ತಮ್ಮ ಅಧಿಕಾರ ಬಳಸಿ ಈ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ. ಆದ್ದರಿಂದ ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಮತ್ತು ಭೂ ಮಂಜೂರಾತಿ ರದ್ದುಪಡಿಸಬೇಕು’ ಎಂದು ಹನುಮೇಗೌಡ ಕೋರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು