ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಹೈಕೋರ್ಟ್‌ಗೆ ಸರ್ಕಾರದ ಪ್ರಮಾಣ ಪತ್ರ

ಅಂತರ ಇಲಾಖೆ ವರ್ಗಾವಣೆ: ವೇತನ ಭರ್ತಿಗೆ ಕ್ರಮ
Last Updated 12 ಫೆಬ್ರುವರಿ 2020, 20:28 IST
ಅಕ್ಷರ ಗಾತ್ರ

ಬೆಂಗಳೂರು: ‘1998ನೇ ಸಾಲಿನ ಕೆಎಎಸ್ ಅಕ್ರಮ ನೇಮಕ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಆದೇಶದಂತೆ ಅಂತರ ಇಲಾಖೆಗೆ ವರ್ಗಾವಣೆಗೊಂಡ ಎಲ್ಲ ಅಧಿಕಾರಿಗಳ ಬ್ಯಾಂಕ್ ಖಾತೆಗೆ ವೇತನ ಭರ್ತಿ ಮಾಡಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠವು 2016ರ ಜೂನ್‌ 21ರಂದು ನೀಡಿರುವ ತೀರ್ಪು ಜಾರಿ ಕೋರಿ ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಗಳನ್ನು ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ವಿಶೇಷ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಧ್ಯಾನ್‌ ಚಿನ್ನಪ್ಪ ಈ ಕುರಿತಂತೆ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು. ಆದರೆ, ಈ ಪ್ರಮಾಣ ಪತ್ರಕ್ಕೆ ಆಕ್ಷೇಪಣೆ ಸಲ್ಲಿಸಿದ ಅರ್ಜಿದಾರರ ಪರ ವಕೀಲ ಡಿ.ಆರ್.ರವಿಶಂಕರ್‌, ‘ನಮ್ಮ ಕಕ್ಷಿದಾರರಿಗೆ ವೇತನ ನಿಗದಿಪಡಿಸಿಲ್ಲ ಮತ್ತು ಸೇವಾ ಹಿರಿತನವನ್ನೂ ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿದರು.

ಧ್ಯಾನ್‌ ಚಿನ್ನಪ್ಪ, ‘ಕೆಲವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ಅರ್ಜಿ ಹಾಕಿಕೊಂಡಿದ್ದಾರೆ. ಆದ್ದರಿಂದ, ವೇತನ ನಿಗದಿ ಮತ್ತು ಸೇವಾ ಹಿರಿತನ ನೀಡಿಲ್ಲ. ಆದರೆ, ಕಾನೂನುಬದ್ಧವಾಗಿ ಅವರಿಗೆ ಸಲ್ಲಬೇಕಾದ ಸವಲತ್ತುಗಳನ್ನು ಕ್ರಮೇಣ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ನ್ಯಾಯಪೀಠ, ‘ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ನಂತರವೂ ತೀರ್ಪು ಅನುಷ್ಠಾನದಲ್ಲಿ ಮೀನಮೇಷ ಎಣಿಸಲಾಗುತ್ತಿದೆ. ಯಾರಿಗೂ ಈ ಪ್ರಕ್ರಿಯೆಗೆ ಅಂತ್ಯ ಹಾಡಲು ಇಷ್ಟವಿಲ್ಲ ಎನಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿ, ‘ಕಳೆದ ವಾರ ಜಾರಿಗಳಿಸಿರುವ ನ್ಯಾಯಾಂಗ ನಿಂದನೆ ಷೋಕಾಸ್ ನೋಟಿಸ್ ವಾಪಸ್ ಪಡೆಯುವುದಿಲ್ಲ’ ಎಂದು ವಿಚಾರಣೆಯನ್ನು ಮಾರ್ಚ್‌ 27ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT