ಗುರುವಾರ , ಜೂನ್ 30, 2022
27 °C

13 ವರ್ಷಗಳ ಜೈಲುವಾಸಕ್ಕೆ ಮೋಕ್ಷ; ಕೊಲೆ ಆರೋಪಿ ಬಿಡುಗಡೆಗೆ ಆದೇಶ

acquittal Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಧ್ಯ ವಯಸ್ಸಿನ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ 13 ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ವ್ಯಕ್ತಿಗೆ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿರುವ ಹೈಕೋರ್ಟ್‌, ಆತನನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಈ ಸಂಬಂಧ ಬೆಂಗಳೂರಿನ ಶಿವಪ್ರಸಾದ್ ಸಲ್ಲಿಸಿದ್ದ ಮೇಲ್ಮನವಿ ಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಅಮಾಯಕರು ಶಿಕ್ಷೆಗೆ ಗುರಿಯಾಗಬಾರದು. ನ್ಯಾಯಾಲಯಗಳ ಪರಮೋಚ್ಛ ಗುರಿ ನ್ಯಾಯದಾನ ಹಳಿ ತಪ್ಪದಂತೆ ನೋಡಿಕೊಳ್ಳುವುದಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಆರೋಪಿ ಲಾಭದ ಉದ್ದೇಶ ದಿಂದ ಕೊಲೆ ಮಾಡಿದ್ದಾನೆ ಎಂಬು ದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಈಗಾಗಲೇ ಐಪಿಸಿ ಕಲಂ 392 ಮತ್ತು 397ರ ಅಡಿಯಲ್ಲಿ ಹೊರಿಸಲಾದ ಆರೋಪಗಳಿಂದ ಆತ ಖುಲಾಸೆಗೊಂಡಿದ್ದು, ಐಪಿಸಿ ಕಲಂ 302ರ ಅಡಿಯಲ್ಲಿ ಶಿಕ್ಷೆ ವಿಧಿಸಿರುವುದು ಸರಿಯಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ನಗರದ ಎಚ್‌ಆರ್‌ ಬಿಆರ್‌ ಬಡಾವಣೆಯಲ್ಲಿ 46 ವರ್ಷದ ತುಳಸಿ ಎಂಬ ಮಹಿಳೆಯ ಮನೆ ಪಕ್ಕದ ನಿವಾಸಿಯಾಗಿದ್ದ ಆರೋಪಿ ಶಿವಪ್ರಸಾದ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ. ತುಳಸಿ ಪತಿ ದುಬೈನಲ್ಲಿದ್ದು, ಅವರ ಪುತ್ರಿಯ ಜೊತೆ ಬೆಂಗಳೂರಿನಲ್ಲೇ ನೆಲೆಸಿದ್ದರು. ತುಳಸಿಯವರ ಪರಿಚಯ ಸಂಪಾದಿಸಿದ್ದ ಶಿವಪ್ರಸಾದ್‌ ಆಗಾಗ್ಗೆ ಅವರ ಮನೆಗೆ ಹೋಗಿ ಬರುತ್ತಿದ್ದ. 

‘ಶಿವಪ್ರಸಾದ್‌ 2008ರ ಜೂನ್‌ 27ರಂದು ತುಳಸಿ ಅವರನ್ನು ಕೊಲೆ ಮಾಡಿ ಒಡವೆ ದೋಚಿದ್ದಾನೆ‘ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಬಾಣಸವಾಡಿ ಪೊಲೀಸರು ಶಿವಕುಮಾರ್‌ ಮೇಲೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2017ರಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ದರೋಡೆ ಪ್ರಕರಣದಿಂದ ಮುಕ್ತಿಗೊಳಿಸಿ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಶಿವಪ್ರಸಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು