ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀತಂ ಗೌಡ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

Published 28 ಜೂನ್ 2024, 16:25 IST
Last Updated 28 ಜೂನ್ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ ಹಂಚಿಕೆ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ಈ ಕುರಿತಂತೆ ಪ್ರೀತಂ ಗೌಡ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರು ಶುಕ್ರವಾರ ವಿಚಾರಣೆ ನಡೆಸಿ, ‘ತನಿಖಾಧಿಕಾರಿಗಳು ತಮ್ಮ ವಿವೇಚನೆಗೆ ಅನುಗುಣವಾಗಿ ಪ್ರಕರಣದ ತನಿಖೆ ನಡೆಸಬಹುದು. ಆದರೆ, ಆರೋಪಿ ಪ್ರೀತಂ ಗೌಡ ಅವರನ್ನು ಬಂಧಿಸುವಂತಿಲ್ಲ’ ಎಂದು ಆದೇಶಿಸಿತು.

‘ಪೊಲೀಸರು ಆರೋಪಿಯನ್ನು ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆ ತನಕ ವಿಚಾರಣೆ ನಡೆಸಬಹುದು. ವಿಚಾರಣಾಧಿಕಾರಿ ಕರೆದಾಗಲೆಲ್ಲ ಅವರು ವಿಚಾರಣೆಗೆ ಹಾಜರಾಗಬೇಕು. ಈ ವೇಳೆ ಅವರನ್ನು ಬಂಧಿಸುವಂತಿಲ್ಲ, ವಶಕ್ಕೆ ಪಡೆದುಕೊಳ್ಳುವಂತಿಲ್ಲ. ಆದರೆ, ತನಿಖೆಗೆ ಅಗತ್ಯ ಎನಿಸಿದರೆ ಆರೋಪಿಯ ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಬಹುದು’ ಎಂದು ನಿರ್ದೇಶಿಸಿತು. 

ಕಾವೇರಿದ ವಾದ: ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಅಶ್ಲೀಲ ಫೋಟೊ ಹಾಗೂ ವಿಡಿಯೊಗಳನ್ನು ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವೈರಲ್ ಮಾಡಿಸುತ್ತಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸಂತ್ರಸ್ತೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಿರ್ದಿಷ್ಟವಾಗಿ ಅರ್ಜಿದಾರರರೇ ಈ ಕೃತ್ಯ ಮಾಡಿದ್ದಾರೆ ಎಂದು ಎಲ್ಲೂ ನೇರವಾಗಿ ಹೇಳಿಲ್ಲ’ ಎಂದರು.

‘ಈ ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿಲ್ಲ, ಅವರು ಭಾಗಿಯೂ ಇಲ್ಲ. ಇದೊಂದು ರಾಜಕೀಯ ಸೇಡಿನ ಪ್ರತೀಕಾರ ಕ್ರಮವಾಗಿದ್ದು, ಅರ್ಜಿದಾರರನ್ನು ರಾಜಕೀಯವಾಗಿ ಬೇಟೆಯಾಡಲು ಈ ಪ್ರಕರಣ ಬಳಸಿಕೊಳ್ಳಲಾಗಿದೆ. ಎಲ್ಲದಕ್ಕೂ ಒಂದು ಮಿತಿ ಇರಬೇಕು, ಇಂತಹುದಕ್ಕೆಲ್ಲಾ ಕಡಿವಾಣ ಹಾಕಬೇಕು. ಪ್ರಕರಣ ರದ್ದುಪಡಿಸಬೇಕು’ ಎಂದು ಬಲವಾಗಿ ಪ್ರತಿಪಾದಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಆದ ಹಿರಿಯ ವಕೀಲ ರವಿವರ್ಮ ಕುಮಾರ್, ‘ಅರ್ಜಿದಾರರ ಪರ ವಕೀಲರು ಈಗಷ್ಟೇ ನಮಗೆ ಪ್ರಕರಣದ ದಾಖಲೆಗಳನ್ನು ಒದಗಿಸಿದ್ದಾರೆ. ಇದಕ್ಕೆ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದು ಆಕ್ಷೇಪಣೆ ಸಲ್ಲಿಸಬೇಕಿದೆ. ಮೊದಲಿಗೆ ಪ್ರಕರಣದ ಪ್ರತಿವಾದಿಗಳಾದ ನಮಗೆ ನೋಟಿಸ್ ಜಾರಿಯಾಗಲಿ’ ಎಂದರು.

ಅಂತೆಯೇ, ‘ಇದು ರಾಜಕೀಯ ಸೇಡು ಎಂದು ಅರ್ಜಿದಾರರ ಪರ ವಕೀಲರು ಆರೋಪಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ರಾಜಕೀಯ ಸೇಡಿನ ಪ್ರಶ್ನೆ ಎಲ್ಲಿಂದ ಬರುತ್ತದೆ? ಪ್ರಕರಣದ ತನಿಖೆ ನಡೆಯಬೇಕಿದೆ. ಹಾಗಾಗಿ, ಪ್ರಕರಣ ರದ್ದುಪಡಿಸುವುದಾಗಲಿ, ತಡೆ ನೀಡುವುದನ್ನಾಗಲೀ ನ್ಯಾಯಪೀಠ ಮಾಡಬಾರದು’ ಎಂದು ಮನವಿ ಮಾಡಿದರು.

ಇದಕ್ಕೆ ನ್ಯಾಯಪೀಠ, ‘ಪ್ರಕರಣದ ಆರೋಪಿಗಳನ್ನು ಬಂಧಿಸಿಯೇ ವಿಚಾರಣೆಗೆ ‍ಒಳಪಡಿಸಬೇಕು’ ಎಂಬ ಪ್ರಾಸಿಕ್ಯೂಷನ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‘ಬಂಧಿಸಿಯೇ ವಿಚಾರಣೆಗೆ ಒಳಪಡಿಸಬೇಕು ಎಂಬ ಹಟ ಏಕೆ? ಹೀಗೆ ಎಲ್ಲಾ ಪ್ರಕರಣಗಳಲ್ಲಿ ಎಲ್ಲರನ್ನೂ ಬಂಧಿಸುತ್ತಾ ಹೋದರೆ ಹೇಗೆ? ನೀವೇನು ಪೊಲೀಸ್ ರಾಜ್ಯ ಮಾಡಲು ಹೊರಟಿದ್ದೀರಾ’ ಎಂದು ಪ್ರಶ್ನಿಸಿತು.

ಇದಕ್ಕೆ ಪ್ರತಿ ಆಕ್ಷೇಪ ವ್ಯಕ್ತಪಡಿಸಿದ ರವಿವರ್ಮ ಕುಮಾರ್, ‘ತನಿಖೆ ಮತ್ತು ವಿಚಾರಣೆಯನ್ನು ಹೇಗೆ ನಡೆಸಬೇಕು ಎನ್ನುವುದು ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟ ವಿಚಾರ. ಯಾರನ್ನೂ ಬಂಧಿಸಬಾರದು ಎಂದು ನ್ಯಾಯಾಲಯ ಹೇಳುತ್ತಾ ಹೋದರೆ, ತನಿಖೆ ನಡೆಸುವುದಾದರೂ ಹೇಗೆ, ನ್ಯಾಯಾಲಯದ ಈ ರೀತಿಯ ಮಧ್ಯಪ್ರವೇಶ ಉಚಿತವಲ್ಲ‘ ಎಂದರು.  

ಸರ್ಕಾರದಲ್ಲಿದ್ದವರೇ ಹಂಚಿದ್ದಾರೆ?: ಒಂದು ಹಂತದಲ್ಲಿ ಸಿ.ವಿ.ನಾಗೇಶ್, ‘ರಾಜ್ಯ ಸರ್ಕಾರದಲ್ಲಿ ಇರುವವರೇ 3 ಲಕ್ಷ ಪೆನ್‌ ಡ್ರೈವ್‌ಗಳನ್ನು ಖರೀದಿಸಿ ಅವುಗಳನ್ನು ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಂಚಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗೆಂದು, ಸರ್ಕಾರದಲ್ಲಿ ಇದ್ದವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳುವ ಛಾತಿ ಇದೆಯಾ’ ಎಂದು ರವಿವರ್ಮ ಕುಮಾರ್ ಅವರನ್ನು ಪ್ರಶ್ನಿಸಿದರು. ಪ್ರಕರಣದ ದೂರುದಾರರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT