ಭಾನುವಾರ, ಸೆಪ್ಟೆಂಬರ್ 27, 2020
27 °C
ಗಲಭೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮ * ಪಥಸಂಚಲನ ನಡೆಸಿದ ಪೊಲೀಸರು

ಪೂರ್ವ, ಪಶ್ಚಿಮ ವಿಭಾಗದಲ್ಲಿ ಬಿಗಿ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ಭೈರಸಂದ್ರದಲ್ಲಿ ಉಂಟಾಗಿದ್ದ ಗಲಭೆ ಬೇರೆ ಕಡೆಗಳಲ್ಲಿ ಮರುಕಳಿಸಬಾರದೆಂಬ ಕಾರಣಕ್ಕೆ ನಗರದಾದ್ಯಂತ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.

ಮಂಗಳವಾರ ರಾತ್ರಿ ನಡೆದ ಗಲಭೆ ವೇಳೆ ಮನೆಗಳು ಹಾಗೂ ವಾಹನಗಳನ್ನು ಕಿಡಿಗೇಡಿಗಳು ಸುಟ್ಟಿದ್ದಾರೆ. ಠಾಣೆಗಳ ಮೇಲೂ ದಾಳಿ ನಡೆದು, ಗಾಜುಗಳನ್ನು ಒಡೆದಿದ್ದಾರೆ. ಕೆಲ ಸಂಘಟನೆಗಳು ಶುಕ್ರವಾರ ನಗರದ ಹಲವೆಡೆ ಪ್ರತಿಭಟನೆ ನಡೆಸಲು ಸಜ್ಜಾಗಿವೆ.

ಈ ವೇಳೆ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು, ಸೂಕ್ಷ್ಮ ಪ್ರದೇಶಗಳು ಹೆಚ್ಚಿರುವ ಪೂರ್ವ ಹಾಗೂ ಪಶ್ಚಿಮ ವಿಭಾಗದಲ್ಲಿ ಬಿಗಿ ಭದ್ರತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಹೈದರಾಬಾದ್‌ನ ಕ್ಷಿಪ್ರ ಕಾರ್ಯಪಡೆಯ (ಆರ್‌ಎಎಫ್‌) ಪುರುಷರು ಹಾಗೂ ಮಹಿಳಾ ಸಿಬ್ಬಂದಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ. ನಗರ ಪೊಲೀಸರ ಜೊತೆಯಲ್ಲೇ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್‌ಆರ್‌ಪಿ) ಹಾಗೂ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಸಿಬ್ಬಂದಿಯೂ ಗಸ್ತು ತಿರುಗಲಿದ್ದಾರೆ.

ಪೂರ್ವ ವಿಭಾಗದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಫ್ರೇಜರ್‌ಟೌನ್, ಕಮರ್ಷಿಯಲ್ ಸ್ಟ್ರೀಟ್‌ ಹಾಗೂ ಸುತ್ತಮುತ್ತಲ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿಯಿಂದ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ. ಶುಕ್ರವಾರ ಈ ಭಾಗದ ಮಸೀದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಭದ್ರತೆಗೆ ಮತ್ತಷ್ಟು ಒತ್ತು ನೀಡಲಾಗಿದೆ. ಈ ಭಾಗದಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ.

ಪಶ್ಚಿಮ ವಿಭಾಗದ ಜೆ.ಜೆ.ನಗರ, ಚಾಮರಾಜಪೇಟೆ, ಬ್ಯಾಟರಾಯನಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಕ್ಷಿಪ್ರ ಕಾರ್ಯಪಡೆಯ ಯೋಧರು, ಜೆ.ಜೆ. ನಗರ ಹಾಗೂ ಬ್ಯಾಟರಾಯನಪುರ ವ್ಯಾಪ್ತಿ
ಯಲ್ಲಿ ಗುರುವಾರ ಬೆಳಿಗ್ಗೆ ಪಥಸಂಚಲನ ನಡೆಸಿ ಎಚ್ಚರಿಕ ಸಂದೇಶ ರವಾನಿಸಿದರು.

‘ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳು ನಮ್ಮ ವ್ಯಾಪ್ತಿಯಲ್ಲಿವೆ. ಪ್ರತಿಯೊಂದು ಪ್ರದೇಶಗಳ ಮೇಲೆ ಕಣ್ಣಿಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶುಕ್ರವಾರ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತದೆ ಎಂದು ನಂಬಿದ್ದೇವೆ. ಆದರೂ ಪ್ರತಿ ವಿಭಾಗದಲ್ಲಿ ಭದ್ರತೆಗೆ ಹೆಚ್ಚಿನ ಗಮನ ಹರಿಸಲಾಗಿದೆ. ಭದ್ರತೆ ಜವಾಬ್ದಾರಿಯನ್ನು ಆಯಾ ಡಿಸಿಪಿಗಳಿಗೆ ನೀಡಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಭದ್ರತೆಗೆ ಹೆಚ್ಚುವರಿ ಪೊಲೀಸರು

ಆರ್‌ಎಎಫ್‌ – 2 ಕಂಪನಿ

ಕೆಎಸ್‌ಆರ್‌ಪಿ – 15 ತುಕಡಿ

ಸಿಎಎಆರ್‌ – 10 ತುಕಡಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು