‘ರಾಸಾಯನಿಕಯುಕ್ತ ಆಹಾರ ಸೇವನೆ ಬದಲಾದ ಜೀವನಶೈಲಿ ವಾಯು ಹಾಗೂ ಜಲ ಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿವೆ. ರೋಗಕ್ಕೆ ಚಿಕಿತ್ಸೆ ನೀಡುವ ಜತೆಗೆ ರೋಗ ಬರದಂತೆ ತಡೆಯುವುದು ಮುಖ್ಯ. ಆದ್ದರಿಂದ ರೋಗ ಪತ್ತೆ ಸಂಬಂಧ ತಪಾಸಣೆಗೆ ಆದ್ಯತೆ ನೀಡಲಾಗುತ್ತಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾದಲ್ಲಿ ಚಿಕಿತ್ಸೆಯೂ ಸುಲಭವಾಗುತ್ತದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು. ‘ನೊವೊ ನಾರ್ಡಿಸ್ಕ್ ಎಜುಕೇಷನ್ ಫೌಂಡೇಶನ್ ಜತೆಗಿನ ಒಪ್ಪಂದದ ಪ್ರಕಾರ ಮಧುಮೇಹ ಪತ್ತೆಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ‘ಸಮುದಾಯ ಮಧುಮೇಹ ಕೇಂದ್ರ’ (ಸಿಡಿಸಿ) ಆರಂಭಿಸಲಾಗುವುದು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರ ದಕ್ಷಿಣ ಕನ್ನಡ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ’ ಎಂದರು.