ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ, ಕೆನಡಾ ವಹಿವಾಟು ವೃದ್ಧಿ’

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ
Last Updated 6 ಅಕ್ಟೋಬರ್ 2022, 20:57 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಚಿತ್ರೋದ್ಯಮ ಭಾರತ ಮತ್ತು ಕೆನಡಾ ನಡುವಿನ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧವನ್ನು ಇನ್ನಷ್ಟು ವೃದ್ಧಿಸಬಹುದು’ ಎಂದು ಬೆಂಗಳೂರಿನ ಕೆನಡಾದ ರಾಯಭಾರ ಕಚೇರಿಯ ಮುಖ್ಯಸ್ಥ ಬೆನೋಯ್ಟ್‌ ಪ್ರಿಫಾಂಟೈನ್‌ ಅಭಿಪ್ರಾಯಪಟ್ಟರು.

ನಗರದ ಮಾರತಹಳ್ಳಿಯ ಇನ್ನೊವೇಟಿವ್‌ ಮಲ್ಟಿಪ್ಲೆಕ್ಸ್‌ನಲ್ಲಿ
ನಡೆಯುತ್ತಿರುವ ‘ಐದನೇ ಇನ್ನೋವೇಟಿವ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತ ಮತ್ತು ಕೆನಡಾ 2014ರಿಂದ ಚಲನಚಿತ್ರಗಳ ಸಹ-ನಿರ್ಮಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಕೆನಡಾದಲ್ಲಿ ಚಲನಚಿತ್ರ ಚಿತ್ರೀಕರಿಸಲು ಅನೇಕ ಭಾರತೀಯ ನಿರ್ಮಾಪಕರಿಗೆ ನೆರವಾಯಿತು. ಕೆನಡಾದಲ್ಲಿರುವ ಸುಮಾರು 14 ಲಕ್ಷ ಜನರು ಭಾರತೀಯ ಮೂಲದವರು. ಹಾಗಾಗಿ ಎರಡು ದೇಶಗಳ ನಡುವೆ ಬಲವಾದ ಸಂಪರ್ಕವಿದೆ. ಈ ನಿಟ್ಟಿನಲ್ಲಿ ಪ್ರಬಲವಾದ ಆರ್ಥಿಕತೆ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಅಗತ್ಯವಿದೆ. ಚಲನಚಿತ್ರ ಉದ್ಯಮ ಈ ನಿಟ್ಟಿನಲ್ಲಿ ಎರಡೂ ದೇಶಗಳ ಜನರನ್ನು ಹತ್ತಿರಕ್ಕೆ ತರುವ ಆಧಾರ ಸ್ತಂಭವಾಗಬಲ್ಲದು’ ಎಂದರು.

ಅಬುಧಾಬಿ ಫಿಲ್ಮ್ ಕಮಿಷನ್‌ನ ಆಯುಕ್ತ ಹ್ಯಾನ್ಸ್ ಫ್ರೈಕಿನ್ ಮಾತನಾಡಿ, ‘ಭಾರತದ ಚಿತ್ರ ನಿರ್ಮಾಪಕರಿಗೆ ಚಿತ್ರೀಕರಣಕ್ಕೆ ಸಂಬಂಧಿಸಿ ಅಬುಧಾಬಿಯು ಅತಿದೊಡ್ಡ ಪಾಲುದಾರ. ಈ ಸಹಯೋಗದಿಂದಾಗಿ ಚಿತ್ರೋದ್ಯಮದಲ್ಲಿ ಸುಮಾರು 6 ಸಾವಿರ ಕೋಟಿ ಡಾಲರ್‌ಗಳಷ್ಟು ವ್ಯವಹಾರ ನಡೆಯಿತು. ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯ ಶಾಖೆಯನ್ನು ಅಬುಧಾಬಿಯಲ್ಲಿ ತೆರೆಯಲಾಗಿದೆ’ ಎಂದರು.

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ ಮಾತನಾಡಿ, ‘ದಕ್ಷಿಣ ಭಾರತದಿಂದ ನಿರ್ಮಾಣಗೊಂಡ ಪ್ಯಾನ್ ಇಂಡಿಯಾ ಚಲನಚಿತ್ರಗಳ ಇತ್ತೀಚಿನ ಸರಣಿ ಯಶಸ್ಸನ್ನು ಗಮನಿಸಿದರೆ ಚಲನಚಿತ್ರ ನಿರ್ಮಾಪಕರು ದಕ್ಷಿಣದತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದು ಹೇಳಿದರು.

‘ಭಾರತದಲ್ಲಿ ಏಕತೆರೆಯ ಚಿತ್ರಮಂದಿರಗಳ ಸಂಖ್ಯೆ 12 ಸಾವಿರದಿಂದ 8 ಸಾವಿರಕ್ಕೆ ಇಳಿದಿದೆ. ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಬೇಕು. ಹೀಗಾದಾಗ ಗ್ರಾಮೀಣ ಭಾರತದ ಪ್ರೇಕ್ಷಕರು ಹೆಚ್ಚು ಪ್ರಮಾಣದಲ್ಲಿ ಚಿತ್ರಗಳನ್ನು ವೀಕ್ಷಿಸಬಹುದು’ ಎಂದರು.

ಕೇಂದ್ರವು ಚಲನಚಿತ್ರೋದ್ಯಮವನ್ನು ಆದ್ಯತೆಯ ಕ್ಷೇತ್ರವೆಂದು ಪರಿಗಣಿಸಿದೆ. ಚಲನಚಿತ್ರ ನಿರ್ಮಾಪಕರಿಗೆ ಪ್ರೋತ್ಸಾಹಧನ ನೀಡಲು ₹ 450 ಕೋಟಿ ಮೀಸಲಿಟ್ಟಿದೆ. ಒಟ್ಟು ಯೋಜನಾ ವೆಚ್ಚದ ಸುಮಾರು ಶೇ 40 ಅಥವಾ ₹ 2.50 ಕೋಟಿಯನ್ನು ವಿದೇಶದಲ್ಲಿ ಚಿತ್ರೀಕರಿಸುವ ಚಲನಚಿತ್ರ ಉದ್ಯಮಗಳ ಸಹಯೋಗಕ್ಕಾಗಿ ಪ್ರೋತ್ಸಾಹಧನವಾಗಿ ನೀಡಲಾಗಿದೆ. ಸರ್ಕಾರವು ಈಗಾಗಲೇ 15 ಸಹನಿರ್ಮಾಣ ಒಪ್ಪಂದಗಳಿಗೆ ಸಹಿ ಹಾಕಿದೆ. ಹೆಚ್ಚಿನ ಒಪ್ಪಂದಗಳಿಗೆ ಸಹಿ ಹಾಕಲು ಮುಂದಿನ ವಾರ ನವದೆಹಲಿಯಲ್ಲಿ ಸಭೆ ನಡೆಯಲಿದೆ ಎಂದರು.

ದಕ್ಷಿಣ ಭಾರತದ ಇಸ್ರೇಲ್‌ನ ದಕ್ಷಿಣ ಭಾರತದ ದೂತಾವಾಸದ ಮುಖ್ಯಸ್ಥ ಕಾನ್ಸುಲ್ ಜನರಲ್ ಟಾಮಿ ಬೆನ್ ಹೈಮ್, ನಿರ್ದೇಶಕ ಸಬ್ಬಾಸ್‌ ಜೋಸೆಫ್‌, ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಮಾತನಾಡಿದರು.

ಈ ಚಿತ್ರೋತ್ಸವದಲ್ಲಿ 40 ದೇಶಗಳ 30 ಭಾಷೆಗಳ 150 ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಪರಿಣತರೊಂದಿಗೆ ಸಂವಾದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT