ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ಪತ್ರೆ ಹಣ | ಜಮೆ ವಿಳಂಬವಾದಲ್ಲಿ ಕ್ರಮ: ಡಿ. ರಂದೀಪ್ ಎಚ್ಚರಿಕೆ

Published 20 ಜೂನ್ 2024, 16:13 IST
Last Updated 20 ಜೂನ್ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ರಕ್ಷಾ ಸಮಿತಿಯ (ಯೂಸರ್ಸ್ ಚಾರ್ಜ್) ಹಣವನ್ನು ಪ್ರತಿ ದಿನ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕು. ಹಣ ಜಮಾ ಮಾಡುವುದು ವಿಳಂಬವಾದಲ್ಲಿ ಅಥವಾ ದುರುಪಯೋಗ ಮಾಡಿಕೊಂಡಲ್ಲಿ ಕಾನೂನಿನ ಅಡಿ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಎಚ್ಚರಿಕೆ ನೀಡಿದ್ದಾರೆ. 

ತುಮಕೂರು ಜಿಲ್ಲಾ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯ ಹಣ ದುರುಪಯೋಗದಿಂದಾಗಿ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದ ಚೀಟಿ ಹಂಚುವ ಕಾರ್ಯವನ್ನು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಡಿಇಓಗಳಿಗೆ ವಹಿಸಲಾಗಿದೆ. ಇವರು ಸಂಗ್ರಹವಾಗುವ ಹಣವನ್ನು ಸಂಬಂಧಪಟ್ಟ ಆಡಳಿತ ವಿಭಾಗದ ಕಾಯಂ ನೌಕರರಿಗೆ ಒಪ್ಪಿಸಬೇಕು. ಅವರು ಇ–ಆಸ್ಪತ್ರೆಯಲ್ಲಿ ನಮೂದಾಗಿರುವ ಲೆಕ್ಕದ ಪ್ರಕಾರ ಹಣವನ್ನು ಮೇಲ್ವಿಚಾರಕ ಸಿಬ್ಬಂದಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು, ಬ್ಯಾಂಕ್ ಖಾತೆಗೆ ನಿಗದಿತ ಸಮಯದೊಳಗೆ ಜಮೆ ಮಾಡಬೇಕು ಎಂದು ಹೇಳಿದ್ದಾರೆ. 

ಸಂಗ್ರಹಿಸಿದ ಹಣವನ್ನು ಯಾವುದೇ ಸಂದರ್ಭದಲ್ಲಿ ಅನಗತ್ಯ ವಿಳಂಬವಿಲ್ಲದೆ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದಲ್ಲಿ, ಹಣ ದುರುಪಯೋಗವಾದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರು, ತಾಲ್ಲೂಕು ಮಟ್ಟದಲ್ಲಿ ಆಡಳಿತ ವೈದ್ಯಾಧಿಕಾರಿಗಳು ಮತ್ತು ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಅಧಿಕಾರಿ ವರ್ಗದವರು ನೇರವಾಗಿ ಹೊಣೆಯಾಗುತ್ತಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT