ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಹೋಟೆಲ್ ಆರೈಕೆ ಸ್ಥಗಿತ

ಸುರಕ್ಷಾ ಕ್ರಮಗಳೊಂದಿಗೆ ಆತಿಥ್ಯ ಸೇವೆಗೆ ಪುನಃ ಸಜ್ಜಾದ ಹೋಟೆಲ್‌ಗಳು
Last Updated 17 ಜೂನ್ 2021, 18:32 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ಹೊಸ ಪ್ರಕರಣಗಳು ಇಳಿಕೆಯಾಗಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಮೀಸಲಿರಿಸಿದ ಹಾಸಿಗೆಗಳಲ್ಲಿ ಶೇ 85ಕ್ಕೂ ಅಧಿಕ ಹಾಸಿಗೆಗಳು ಖಾಲಿಯಿವೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳು ಪ್ರಾರಂಭಿಸಿದ ಹೋಟೆಲ್ ಆರೈಕೆ ಕೇಂದ್ರಗಳು ಒಂದೂವರೆ ತಿಂಗಳಲ್ಲೇ ಸ್ಥಗಿತಗೊಂಡಿವೆ.

ಈ ವರ್ಷದ ಮಾರ್ಚ್‌ ಬಳಿಕ ಸೋಂಕಿತರ ಸಂಖ್ಯೆ ಏರುಗತಿಯಾಗಿದ್ದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಮೇ ತಿಂಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷದ ಆಸುಪಾಸಿಗೆ ಏರಿಕೆಯಾಗಿತ್ತು. ಸರ್ಕಾರಿ ಹಾಗೂ ಖಾಸಗಿ ವ್ಯವಸ್ಥೆಯಡಿ ಆಸ್ಪತ್ರೆಗಳಲ್ಲಿನ ಬಹುತೇಕ ಎಲ್ಲ ಹಾಸಿಗೆಗಳು ಭರ್ತಿಯಾಗಿದ್ದವು. ಇದರಿಂದಾಗಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ, ಹೋಟೆಲ್‌ಗಳಲ್ಲಿ ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣಗಳು ಇರುವವರಿಗೆ ಚಿಕಿತ್ಸೆ ಒದಗಿಸಲು ಹಾಸಿಗೆಗಳನ್ನು ಸಜ್ಜುಗೊಳಿಸುವಂತೆ ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿತ್ತು.

ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ಹೋಟೆಲ್ ಉದ್ಯಮ ಕುಸಿತ ಕಂಡಿದ್ದರಿಂದ ಆತಿಥ್ಯ ಕೇಂದ್ರಗಳು ಕೂಡ ಆರೈಕೆ ಕೇಂದ್ರಗಳ ಆರಂಭಕ್ಕೆ ಒಲವು ತೋರಿದ್ದವು. ಸುಗುಣ, ಮಣಿಪಾಲ್, ಪೀಪಲ್ ಟ್ರೀ, ಅಪೋಲೊ, ಕೊಲಂಬಿಯಾ ಏಷ್ಯಾ, ಮಲ್ಲಿಗೆ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳು 32 ಹೋಟೆಲ್‌ಗಳನ್ನು ಗುರುತಿಸಿ, 1,281 ಹಾಸಿಗೆಗಳನ್ನು ಸಜ್ಜುಗೊಳಿಸಿದ್ದವು. ಈ ಸೇವೆಯು ಮನೆ ಆರೈಕೆಗೆ ವ್ಯವಸ್ಥೆ ಇಲ್ಲದವರಿಗೆ, ಅನ್ಯ ರಾಜ್ಯಗಳಿಂದ ಬಂದು ಸೋಂಕಿತರಾದವರಿಗೆ, ಆಸ್ಪತ್ರೆ ಚಿಕಿತ್ಸೆ ಅಗತ್ಯ ಇಲ್ಲದವರಿಗೆ ಸಹಕಾರಿಯಾಗಿದ್ದವು. ಈಗ ಆಸ್ಪತ್ರೆಗಳಲ್ಲಿಯೇ ಹಾಸಿಗೆಗಳು ಖಾಲಿ ಇರುವುದರಿಂದ ಹೋಟೆಲ್ ಆರೈಕೆ ಸೇವೆಯನ್ನು ಆಸ್ಪತ್ರೆಗಳು ಸ್ಥಗಿತ ಮಾಡಿವೆ.

ಪುನಃ ಆತಿಥ್ಯ: ‘ಖಾಸಗಿ ಆಸ್ಪತ್ರೆಗಳ ಜತೆಗೆ ಒಪ್ಪಂದ ಮಾಡಿಕೊಂಡು, ಚಿಕಿತ್ಸೆ ಒದಗಿಸಲು ಕೆಲ ತಾರಾ ಹೋಟೆಲ್‌ಗಳನ್ನು ನೀಡಲಾಗಿತ್ತು. ಇದು ಲಾಭದಾಯಕ ಅಲ್ಲದಿದ್ದರೂ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವುದು ನಮ್ಮ ಆಶಯವಾಗಿತ್ತು. ಈಗ ಆಸ್ಪತ್ರೆಗಳಲ್ಲಿಯೇ ಬಹಳಷ್ಟು ಹಾಸಿಗೆಗಳು ಖಾಲಿ ಉಳಿದಿವೆ’ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘಟನೆಯ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದರು.

‘ಕೋವಿಡ್‌ ಸೇವೆ ನೀಡುತ್ತಿದ್ದ ಎಲ್ಲ ಹೋಟೆಲ್‌ಗಳಲ್ಲಿ ಸೋಂಕು ನಿವಾರಕ ದ್ರಾವಣದಿಂದ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಊರುಗಳಿಗೆ ತೆರಳಿದ್ದ ಸಿಬ್ಬಂದಿಗೆ ವಾಪಸ್ ಬರಲು ಸೂಚಿಸಲಾಗಿದೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಆತಿಥ್ಯ ಸೇವೆ ನೀಡಲಾಗುತ್ತದೆ’ ಎಂದರು.

ಸರ್ಕಾರಿ ಕೋಟಾದಡಿ ಆಸ್ಪತ್ರೆಗಳಲ್ಲಿ ಹಾಸಿಗೆ ವಿವರ (ಜೂ.17)

ವಿಧ; ಮೀಸಲು; ಭರ್ತಿ; ಖಾಲಿ

ಸಾಮಾನ್ಯ ಹಾಸಿಗೆ; 7,172; 407; 6,765

ಐಸಿಯು ಹಾಸಿಗೆ; 570; 234; 336

ಎಚ್‌ಡಿಯು ಹಾಸಿಗೆ; 4,913; 712; 4,201

ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ; 643; 370; 273

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT