ಬುಧವಾರ, ಆಗಸ್ಟ್ 4, 2021
22 °C

ಚಿನ್ನಕ್ಕಾಗಿ ಗೃಹಿಣಿಯ ಹತ್ಯೆ; ಮಹಿಳೆ ಸೇರಿ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನ ಸುಲಿಗೆ ಮಾಡಲು ಗೃಹಿಣಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

'ಇಂದಿರಮ್ಮ ಹಾಗೂ ರಾಜಶೇಖರ್ ಬಂಧಿತರು. ಅವರಿಂದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧ ಜಪ್ತಿ ಮಾಡಲಾಗಿದೆ' ಎಂದು ಪೊಲೀಸರು ಹೇಳಿದರು.

'ಬೀದರ್‌ನ ರಂಜಿತಾ ಎಂಬುವರು ಜ್ಞಾನಭಾರತಿ ಬಳಿಯ ಜ್ಞಾನಜ್ಯೋತಿ ಬಡಾವಣೆಯಲ್ಲಿ ಪತಿ ಹಾಗೂ ಮೈದುನನ ಜೊತೆ ವಾಸವಿದ್ದರು. ಅವರನ್ನು ಪರಿಚಯ ಮಾಡಿಕೊಂಡಿದ್ದ ಇಂದಿರಮ್ಮ, ಆಗಾಗ ಮನೆಗೆ ಹೋಗಿ ಬರುತ್ತಿದ್ದರು.'

'ರಂಜಿತಾ ಬಳಿ ಚಿನ್ನಾಭರಣ ಹಾಗೂ ನಗದು ಇರುವುದನ್ನು ಆರೋಪಿ ಗಮನಿಸಿದ್ದಳು. ಇತ್ತೀಚೆಗೆ ಲಾಕ್‌ಡೌನ್‌ನಿಂದಾಗಿ ಇಂದಿರಮ್ಮ ಕೆಲಸ ಹೋಗಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆರೋಪಿ, ಹಣ ಗಳಿಸುವ ಆಸೆಯಿಂದ ಪರಿಚಯಸ್ಥ ರಾಜಶೇಖರ್ ಜೊತೆ ಸೇರಿ ಸಂಚು ರೂಪಿಸಿದ್ದರು' ಎಂದೂ ಪೊಲೀಸರು ತಿಳಿಸಿದರು.

'ಪತಿ ಹಾಗೂ ಮೈದುನ ಇಲ್ಲದ‌ ವೇಳೆಯಲ್ಲಿ‌ ಮನೆಗೆ ಹೋಗಿದ್ದ ಆರೋಪಿಗಳು, ರಂಜಿತಾ ಅವರ ಕತ್ತು ಕೊಯ್ದು ಕೊಂದಿದ್ದರು. ನಂತರ, ಮೈ ಮೇಲಿನ ಚಿನ್ನಾಭರಣ ಸಮೇತ ಪರಾರಿಯಾಗಿದ್ದರು.'

'ಹತ್ಯೆ ಬಳಿಕ ಆರೋಪಿಗಳು, ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಮೃತರ ಬಲ ಅಂಗೈಯಲ್ಲಿಟ್ಟು ಹೋಗಿದ್ದರು. ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ' ಎಂದೂ ಪೊಲೀಸರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು