ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೈವಿಕ ಕ್ರಾಂತಿ–2’ಗೆ ಬೆಂಗಳೂರು ಸಿದ್ಧ

2030ಕ್ಕೆ 300 ಶತಕೋಟಿ ಡಾಲರ್‌ ವಹಿವಾಟು ನಡೆಯುವ ಸಾಧ್ಯತೆ
Last Updated 9 ನವೆಂಬರ್ 2022, 20:54 IST
ಅಕ್ಷರ ಗಾತ್ರ

ಬೆಂಗಳೂರು: ಜೀವ ವಿಜ್ಞಾನ ಅದರಲ್ಲೂ ವಂಶವಾಹಿ ಕ್ಷೇತ್ರದ ವಿಷಯಗಳಿಗೆ ಸಂಬಂಧಿಸಿದ (ಜಿನೋಮಿಕ್‌–02 ) ಎರಡನೇ ಕ್ರಾಂತಿಗೆ (ಜೈವಿಕ ಕ್ರಾಂತಿ–2) ಉದ್ಯಾನ ನಗರಿ ಬೆಂಗಳೂರು ವೇದಿಕೆಯಾಗಲಿದೆ!

ಸದ್ದಿಲ್ಲದೇ ನಡೆಯುತ್ತಿರುವ ಈ ಜೈವಿಕ ತಂತ್ರಜ್ಞಾನದ ಕ್ರಾಂತಿಯ ಪರಿಣಾಮ ವಿಶ್ವದ ಹಲವು ಜೈವಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜ್ಞಾನ ನಗರಿಯೂ ಆಗಲಿದೆ.

ಮಾನವನನ್ನು ಹಿಂಡಿ ಹಾಕುವ ಕ್ಯಾನ್ಸರ್‌, ಅಲ್ಝಿಮರ್ಸ್, ಥಲಸ್ಸೆಮಿಯಾ ಸೇರಿದಂತೆ ಹಲವು ಗಂಭೀರ ಸ್ವರೂಪದ ಕಾಯಿಲೆಗಳಿಗೆ ಜೀನ್‌ ಎಡಿಟಿಂಗ್‌, ಇಮ್ಯುನೋ ಥೆರಪಿ, ಜೀನ್‌ ಥೆರಪಿಯಂತಹ ಮುಂದುವರಿದ ವಿಧಾನಗಳು ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ. ಕೃಷಿ ಕ್ಷೇತ್ರದಲ್ಲಿ ಕೀಟ ಬಾಧೆ, ಇಳುವರಿ ಕೊರತೆ, ಸರ್ವ ಋತುಗಳನ್ನು ಸಹಿಸಬಲ್ಲ ವಂಶವಾಹಿ ತಿದ್ದಿದ (ಜೀನ್ ಎಡಿಟಿಂಗ್) ತಳಿಗಳ ಅಭಿವೃದ್ಧಿ, ಫಾರ್ಮಸಿ, ಜೈವಿಕ ಇಂಧನ, ರೋಗಗಳನ್ನು ಸುಲಭವಾಗಿ ಪತ್ತೆ ಮಾಡಬಲ್ಲ ವೈದ್ಯಕೀಯ ಕಿಟ್‌ಗಳು... ಹೀಗೆ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಹತ್ತು ಹಲವು ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆ ಬೆಂಗಳೂರಿನಲ್ಲಿ ನಡೆಯಲಿದ್ದು, ಇದನ್ನೇ ‘ಜಿನೋಮಿಕ್‌–2’ ಎರಡನೇ ಕ್ರಾಂತಿ ಎಂದೂವಿಜ್ಞಾನಿಗಳು ಬಣ್ಣಿಸುತ್ತಾರೆ.

‘ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಂತೆ ಜೈವಿಕ ತಂತ್ರಜ್ಞಾನದ ‘ರಾಜಧಾನಿ’ ಬೆಂಗಳೂರು ಆಗಲಿದ್ದು, 2023ಕ್ಕೆ ಈ ಕ್ಷೇತ್ರದ ಆರ್ಥಿಕತೆ 100 ಶತಕೋಟಿ ಡಾಲರ್ ಗುರಿ ಮುಟ್ಟಲಿದೆ. 2025 ಕ್ಕೆ ಈ ಗುರಿ ನಿಗದಿ ಮಾಡಲಾಗಿದ್ದು, ಎರಡು ವರ್ಷ ಮೊದಲೇ ಈ ಗುರಿ ತಲುಪಲಾಗುತ್ತಿದೆ. 2030 ಕ್ಕೆ 300 ಶತಕೋಟಿ ಡಾಲರ್‌ಗಳಿಗೆ ತಲುಪುವುದು ನಿಶ್ಚಿತ’ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ‘ಸೆಂಟರ್‌ಫಾರ್‌ ಬಯೋಸಿಸ್ಟಮ್‌ ಸೈನ್ಸ್‌, ಎಂಜಿನಿಯರಿಂಗ್’ ವಿಭಾಗದ ಪ್ರೊಫೆಸರ್‌ ವಿಜಯ್ ಚಂದ್ರು. ಇವರು ಬೆಂಗಳೂರು ಟೆಕ್ ಸಮ್ಮಿಟ್‌ನ ಜೀವ ವಿಜ್ಞಾನ ವಿಭಾಗದ ಅಧ್ಯಕ್ಷರೂ ಆಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಇವೆಲ್ಲವನ್ನೂ ಸೇರಿ ಜೈವಿಕ ಅರ್ಥವ್ಯವಸ್ಥೆ (ಬಯೋಎಕಾನಮಿ) ಎನ್ನುತ್ತೇವೆ. ಕೃಷಿ, ಆರೋಗ್ಯ, ಉದ್ಯಮ, ಔಷಧ, ಕಾರಕ (ರೀಏಜೆಂಟ್) ತಂತ್ರಜ್ಞಾನ, ನವೀಕರಿಸಬಹುದಾದ ಜೈವಿಕ ತಂತ್ರಜ್ಞಾನ ಕ್ಷೇತ್ರ, ಸಿಂಥೆಟಿಕ್‌ ಬಯಾಲಜಿ, ಸ್ಮಾರ್ಟ್‌ ಪ್ರೋಟೀನ್ ಕ್ಷೇತ್ರದಲ್ಲೂ ದೊಡ್ಡ ಮಟ್ಟದಲ್ಲಿ ಸಂಶೋಧನೆ ಅಭಿವೃದ್ಧಿ ನಡೆಯುತ್ತಿವೆ ಮತ್ತು ಅವುಗಳ ಅನ್ವಯವೂ ಆಗುತ್ತಿದೆ. ಈ ಕ್ಷೇತ್ರಗಳಲ್ಲಿ ದೇಶಿ ಕಂಪನಿಗಳೇ ಆಳವಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ’ ಎಂದು ಹೇಳಿದರು.

‘ಕ್ಯಾನ್ಸರ್‌, ಥಲಸ್ಸೆಮಿಯಾ, ಸ್ವಯಂ ನಿರೋಧಕ ಶಕ್ತಿಯನ್ನು (ಆಟೋ ಇಮ್ಯೂನ್ ಡಿಸೀಸ್‌) ಕಳೆದುಕೊಂಡ ಕಾಯಿಲೆಗಳಿಗೂ ಅತ್ಯಾಧುನಿಕ ಇಮ್ಯುನೋಥೆರಪಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರು ಜೈವಿಕ ತಂತ್ರಜ್ಞಾನದ ‘ಪ್ರಸ್ಥಭೂಮಿ’ ಆಗಲು ಇಲ್ಲಿರುವ ವಿಜ್ಞಾನದ ಶೈಕ್ಷಣಿಕ ಸಂಸ್ಥೆಗಳು, ವಿಜ್ಞಾನದ ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮಗಳು ಮುಖ್ಯ ಕಾರಣ. ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲೂ ವ್ಯಾಪಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆ, ಎನ್‌ಸಿಬಿಎಸ್‌, ಜೆಎನ್‌ಸಿಎಎಸ್‌ಆರ್‌, ಬ್ರೈನ್‌ ರೀಸರ್ಚ್‌ ಸೆಂಟರ್, ನಿಮ್ಹಾನ್ಸ್‌ ಸೇರಿ ಹಲವು ಸಂಸ್ಥೆಗಳು, ನವೋದ್ಯಮಗಳು ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ’ ಎಂದು ವಿಜಯ್ ಚಂದ್ರು ಅವರು ಹೇಳಿದರು.

‘ಕ್ರಾಂತಿ’ಯಿಂದ ದರವೂ ಇಳಿಕೆ
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಕ್ರಾಂತಿಯ ಪರಿಣಾಮ ಔಷಧಗಳು, ಚಿಕಿತ್ಸೆಗಳು, ಬಿತ್ತನೆ ಬೀಜಗಳು, ಜೈವಿಕ ಇಂಧನ ಬೆಲೆಯೂ ಕಡಿಮೆ ಆಗಲಿದೆ. ಹಿಂದೆ ವಂಶವಾಹಿ ಅನುಕ್ರಮಣಿಕೆಯ ವೆಚ್ಚ ತುಂಬಾ ದುಬಾರಿ ಆಗಿತ್ತು. ಈಗ ಸುಮಾರು 100 ಡಾಲರ್‌ಗಳಿಗೆ ಇಳಿಕೆಯಾಗಿದೆ. ಅದೇ ರೀತಿಯಲ್ಲಿ ಕೈಗೆಟಕುವ ದರದಲ್ಲಿ ಸೇವೆಗಳು ಲಭ್ಯವಾಗಲಿವೆ ಎಂದು ವಿಜಯ್‌ ಚಂದ್ರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT