ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಯೊಬ್ಬರ ಅಕ್ರಮ ಬಂಧನ: ಇನ್‌ಸ್ಪೆಕ್ಟರ್ ವಿರುದ್ಧ ಡಿವೈಎಸ್ಪಿ ದಾಳಿ

Last Updated 20 ಜನವರಿ 2023, 22:13 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿಡಲಾಗಿದ್ದ ಶೇಷಾದ್ರಿಪುರ ಠಾಣೆ ಮೇಲೆ ರಾಜ್ಯ ಮಾನವ ಹಕ್ಕು ಆಯೋಗದ ಅಧಿಕಾರಿಗಳು ಶುಕ್ರವಾರ ಸಂಜೆ ದಾಳಿ ಮಾಡಿದ್ದು, ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಶೇಷಾದ್ರಿಪುರ ಠಾಣೆ ಇನ್‌ಸ್ಪೆಕ್ಟರ್ ಹೇಮಂತ್‌ ಕುಮಾರ್ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ (ಎಸ್‌ಎಚ್‌ಆರ್‌ಸಿ) ದಾಖಲಾಗಿದ್ದ ಪ್ರಕರಣದಲ್ಲಿ ಡಿವೈಎಸ್ಪಿ ಕೇಶವ್ ನೇತೃತ್ವದ ತಂಡ ಈ ದಾಳಿ ಮಾಡಿತು.

‘ಸ್ಥಳೀಯ ನಿವಾಸಿ ಆರ್. ಶ್ರೀಧರ್ ಎಂಬುವರನ್ನು ಪೊಲೀಸರು ಅಕ್ರಮ ಬಂಧನದಲ್ಲಿರಿಸಿದ್ದರು. ಯಾವುದೇ ದೂರು ಹಾಗೂ ಎಫ್‌ಐಆರ್ ಇಲ್ಲದಿದ್ದರೂ ಠಾಣೆಯಲ್ಲಿ ಕೂರಿಸಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಕುಟುಂಬಸ್ಥರಿಗೂ ಬೆದರಿಕೆಯೊಡ್ಡಿದ್ದರು. ಶ್ರೀಧರ್ ಅವರ ಅಕ್ರಮ ಬಂಧನ ಪ್ರಶ್ನಿಸಿದ್ದ ಮಗ ಚಂದರೇಶ್, ಆಯೋಗಕ್ಕೆ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.

‘ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗ, ತನಿಖೆ ನಡೆಸುವಂತೆ ಐಜಿಪಿ ಅವರಿಗೆ ಸೂಚಿಸಿತ್ತು. ಅದರಂತೆ, ಡಿವೈಎಸ್ಪಿ ನೇತೃತ್ವದ ತಂಡ ಠಾಣೆ ಮೇಲೆ ದಾಳಿ ಮಾಡಿತು’ ಎಂದು ಮೂಲಗಳು ತಿಳಿಸಿವೆ.

ದಾಳಿ ಸಂದರ್ಭದಲ್ಲಿ ಠಾಣೆಯಲ್ಲಿದ್ದ ಡೈರಿ, ಸಂದರ್ಶಕರ ಪುಸ್ತಕ ಸೇರಿದಂತೆ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ಪೂರ್ಣಗೊಳಿಸಿರುವ ತಂಡ, ಆಯೋಗಕ್ಕೆ ವರದಿ ಸಲ್ಲಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜ. 31ರಂದು ನಡೆಯಲಿದೆ.

ಹಣಕ್ಕೆ ಪೀಡಿಸಿದ್ದ ಪೊಲೀಸರು: ‘ಸಂತ್ರಸ್ತ ಶ್ರೀಧರ್ ಅವರನ್ನು ಬೆದರಿಸಿದ್ದ ಶೇಷಾದ್ರಿಪುರ ಠಾಣೆ ಪೊಲೀಸರು, ಹಣ ನೀಡುವಂತೆ ಪೀಡಿಸುತ್ತಿದ್ದರು. ಹಣ ನೀಡಲು ಶ್ರೀಧರ್ ಒಪ್ಪಿರಲಿಲ್ಲ. ಗುರುವಾರ (ಜ. 19) ಬೆಳಿಗ್ಗೆ 10.30ರ ಸುಮಾರಿಗೆ ಅವರನ್ನು ಹಿಡಿದುಕೊಂಡು ಠಾಣೆಗೆ ಕರೆದೊಯ್ದಿದ್ದರು. ಶುಕ್ರವಾರ ಸಂಜೆ 4 ಗಂಟೆಯವರೆಗೂ ಠಾಣೆಯಲ್ಲಿ ಕೂರಿಸಿದ್ದರು. ಹಣಕ್ಕಾಗಿ ಪುನಃ ಪೀಡಿಸಿ ಕಿರುಕುಳ ನೀಡಿದ್ದರು’ ಎಂದು ಮೂಲಗಳು ಹೇಳಿವೆ.

‘ಶುಕ್ರವಾರ ಸಂಜೆ ಠಾಣೆ ಮೇಲೆ ದಿಢೀರ್ ದಾಳಿ ಮಾಡಿದ ಡಿವೈಎಸ್ಪಿ ನೇತೃತ್ವದ ತಂಡ, ಶ್ರೀಧರ್ ಅವರನ್ನು ರಕ್ಷಿಸಿ ಬಿಡುಗಡೆಗೊಳಿಸಿತು. ಕರ್ತವ್ಯದಲ್ಲಿದ್ದ ಎಲ್ಲ ಸಿಬ್ಬಂದಿ ವಿವರ ದಾಖಲಿಸಿಕೊಂಡು, ಆಯೋಗಕ್ಕೆ ಸಲ್ಲಿಸಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT