ಶನಿವಾರ, ಜುಲೈ 24, 2021
27 °C
ಬಾಗಲಗುಂಟೆ ಪೊಲೀಸರಿಂದ ನಾಲ್ವರ ಬಂಧನ

ಗಂಡನನ್ನು ಅಪಹರಿಸಲು ಪತ್ನಿಯಿಂದಲೇ ಸುಫಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡನೇ ಮದುವೆಯಾದರೆಂಬ ಕಾರಣಕ್ಕೆ ತಮ್ಮ ಗಂಡನನ್ನೇ ಅಪಹರಿಸಲು ಮೊದಲ ಪತ್ನಿ ಸುಫಾರಿ ನೀಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬಾಗಲಗುಂಟೆ ಪೊಲೀಸರು, ಆ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

ಹೆಸರುಘಟ್ಟದ ಅಭಿಷೇಕ್ (26), ಬಾಗಲಗುಂಟೆಯ ಭರತ್ (25), ಜೆ.ಪಿ.ನಗರದ ಪ್ರಕಾಶ್ (22) ಹಾಗೂ ಚಲುವಮೂರ್ತಿ (22) ಬಂಧಿತರು.

‘ಸಿಡೇದಹಳ್ಳಿ ಮುಖ್ಯರಸ್ತೆಯ ವಿಶ್ವೇಶ್ವರಯ್ಯ ಲೇಔಟ್ ನಿವಾಸಿ ಶಾಹೀದ್ ಷೇಕ್ (31) ಎಂಬುವರು ಎರಡನೇ ಪತ್ನಿ ರತ್ನ ಕಾತುಮ್ ಜೊತೆ ಜೂನ್ 7ರಂದು ಎಂ.ಇ.ಐ ಬಡಾವಣೆಯ ಆರ್ಚ್‌ ಬಳಿ ತರಕಾರಿ ತರಲು ಹೋಗಿದ್ದರು. ಕಾರಿನಲ್ಲಿ ಬಂದಿದ್ದ ಆರೋಪಿಗಳು, ಶಾಹೀದ್‌ ಅವರನ್ನು ಅಪಹರಿಸಿಕೊಂಡು ಹೋಗಿದ್ದರು. ಈ ಸಂಬಂಧ ಪತ್ನಿ ರತ್ನ, ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಜೂನ್ 8ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿ.ಜಿ.ಎಸ್ ಟೋಲ್ ಹತ್ತಿರ  ಆರೋಪಿಗಳನ್ನು ಬಂಧಿಸಲಾಗಿತ್ತು’ ಎಂದೂ ತಿಳಿಸಿದರು.

‘ರೋಮಾ ಷೇಕ್ ಎಂಬುವರನ್ನು ಮದುವೆಯಾಗಿದ್ದ ಶಾಹೀದ್, ಅವರಿಂದ ದೂರವಾಗಿದ್ದರು. ಇತ್ತೀಚೆಗಷ್ಟೇ ರತ್ನ ಕಾತುಮ್ ಅವರನ್ನು ಎರಡನೇ ಮದುವೆ ಆಗಿದ್ದರು. ಅದರಿಂದ ಕೋಪಗೊಂಡ ರೋಮಾ, ಗಂಡನನ್ನು ಅಪಹರಿಸುವಂತೆ ಪರಿಚಯಸ್ಥ ಸಲ್ಮಾನ್ ಎಂಬುವರಿಗೆ ಸುಫಾರಿ ನೀಡಿದ್ದರು.’

‘ಗಂಡನನ್ನು ಅಪಹರಿಸಿ ತಮ್ಮ ಬಳಿ ತಂದು ಬಿಡುವಂತೆ ರೋಮಾ ಹೇಳಿದ್ದರು. ಆದರೆ, ಆರೋಪಿಗಳು ಶಾಹೀದ್‌ನನ್ನು ಬೇರೆಡೆ ಕರೆದೊಯ್ದು ₹ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊಲೆಗೂ ಯತ್ನಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ. ಅವರ ಪತ್ತೆಗೆ ತನಿಖೆ ಮುಂದುವರಿದಿದೆ’ ಎಂದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು