ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನಲ್ಲಿ ಅಮೂಲ್‌ vs ಚೀನಾ!

ಅಕ್ಷರ ಗಾತ್ರ

ಅಮೂಲ್‌ ಟ್ವಿಟರ್‌ ಖಾತೆ ಸ್ಥಗಿತಗೊಂಡು, ಮರು ಚಾಲನೆಗೊಂಡ ವಿಷಯ ಶನಿವಾರವಿಡೀ ಟ್ವಿಟರ್‌ನಲ್ಲಿ ಚರ್ಚೆಯಾದ ಬೆನ್ನಿಗೇ ಭಾನುವಾರ #AmulVsChina ಎಂಬ ಹ್ಯಾಷ್‌ಟ್ಯಾಂಗ್‌ ಟ್ರೆಂಡ್‌ ಆಗಿದೆ.

#AmulVsChina ಹ್ಯಾಷ್‌ ಟ್ಯಾಗ್‌ನ ಜೊತೆಗೇ, #ISupportAmul , #BoycottChineseProduct, #BoycottMadeInChina ಎಂಬ ಟ್ಯಾಗ್‌ಗಳೂ ಟ್ರೆಂಡ್‌ ಆಗುತ್ತಿವೆ. ಚೀನಾ ಮತ್ತು ಅದರ ಉತ್ಪನ್ನಗಳ ವಿರುದ್ಧ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರ ಜೊತೆಗೇ, ಅಮೂಲ್‌ಗೆ ಬೆಂಬಲ ವ್ಯಕ್ತವಾಗಿದೆ.

ಅಮೂಲ್‌ನ ಟ್ವಿಟರ್‌ ಖಾತೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಿದ್ದ ಟ್ವಿಟರ್‌ ಸಂಸ್ಥೆಯ ನಡೆಗೆ ಖಂಡನೆಯೂ ವ್ಯಕ್ತವಾಗುತ್ತಿದೆ. ‘ಟ್ವಿಟರ್‌ ಅನ್ನು ಭಾರತದ ವಿರುದ್ಧದ ಅಸ್ತ್ರವಾಗಿ ಚೀನಾ ಬಳಸಿಕೊಳ್ಳುತ್ತಿದೆ,’ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.

‘ನಮ್ಮದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅಭಿಪ್ರಾಯಗಳನ್ನು ತಿಳಿಸಲು ನಮಗೆ ಸ್ವಾತಂತ್ರ್ಯವಿದೆ. ಅಮೂಲ್‌ ಟ್ವಿಟರ್‌ ಅನ್ನು ಸ್ಥಗಿತಗೊಳಿಸಿದ ಟ್ವಿಟರ್‌ ನಡೆ ನಾಚಿಕ್ಕೇಡಿನದ್ದು,’ ಎಂದೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೂಲ್‌ ಹಂಚಿಕೊಂಡಿದ್ದ ಪೋಸ್ಟರ್‌ ಮೇರೆಗೇ ಹಲವರು ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಜೂನ್‌ 4ರ ಸಂಜೆ ಅಮೂಲ್‌ನ ಟ್ವಿಟರ್ ಖಾತೆ‌ ಸ್ಥಗಿತಗೊಂಡಿತ್ತು. ಮರುದಿನ ಬೆಳಗ್ಗೆ ಅದು ಮರುಚಾಲನೆಗೊಂಡಿದೆ. ಜೂನ್‌ 3ರಂದು ಅಮೂಲ್‌ ತನ್ನ ಟ್ವಿಟರ್‌ ಖಾತೆಯಲ್ಲಿ ‘ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಕುರಿತು’ ಎಂಬ ಒಕ್ಕಣೆಯೊಂದಿಗೆ, ‘ಎಕ್ಸಿಟ್‌ ಡ್ರ್ಯಾಗನ್‌’ ಎಂಬ ಹೆಸರಿನಲ್ಲಿ ಜಾಹೀರಾತನ್ನು ಹಂಚಿಕೊಂಡಿತ್ತು. ‘ಅಮೂಲ್‌: ಮೇಡ್‌ ಇನ್‌ ಇಂಡಿಯಾ’ ಎಂದೂ ಆ ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಕಾರಣಕ್ಕೆ ಅಮೂಲ್‌ನ ಟ್ವಿಟರ್ ಖಾತೆ ಬಂದ್‌ ಆಗಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಟ್ವಿಟರ್‌ ಸ್ಪಷ್ಟನೆ: ‘ಸುರಕ್ಷತಾ ಕಾರಣಗಳಿಂದಾಗಿ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು’ ಎಂದು ಟ್ವಿಟರ್‌ ಶನಿವಾರ ಹೇಳಿದೆ. ಆದರೆ, ಚೀನಾ ವಿರುದ್ಧದ ಪೋಸ್ಟ್‌ ಕುರಿತ ಅಂಶಗಳನ್ನು ಅದು ಉಲ್ಲೇಖಿಸಿಲ್ಲ.

‘ಖಾತೆಗಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ. ಕೆಲವೊಮ್ಮೆ ಖಾತೆಗೆ ಸಂಬಂಧಿಸಿದಂತೆ ಅದರ ಮಾಲೀಕರಿಗೆ ಸರಳ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನಾವು ತಿಳಿಸುತ್ತೇವೆ. ಅಧಿಕೃತ ಖಾತೆ ಮಾಲೀಕರಿಗೆ ಇದು ಕಷ್ಟವಲ್ಲ. ಸ್ಪ್ಯಾಮ್‌ ಅಥವಾ ದುರುದ್ದೇಶಪೂರಿತ ಖಾತೆ ಮಾಲೀಕರಿಗೆ ಅದು ಕಷ್ಟವಾಗಬಹುದು. ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಖಾತೆ ಎಂದಿನಂತೇ ಆಗಲಿದೆ. ಖಾತೆಗಳನ್ನು ರಕ್ಷಿಸಲು, ಲಾಗಿನ್‌ಗಾಗಿ ನಾವು ಈ ಪರಿಶೀಲನೆಗಳನ್ನು ಖಾತೆ ಮಾಲೀಕರಿಂದ ವಾಡಿಕೆಯಂತೆ ಬಯಸುತ್ತೇವೆ,’ ಎಂದು ಟ್ವಿಟರ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೂಲ್‌ನ ಟ್ವಿಟರ್ ಖಾತೆ ಸ್ಥಗಿತ ಮತ್ತು ಮರುಚಾಲನೆ ವಿಚಾರದದಲ್ಲಿ ಟ್ವಿಟರ್‌ ನಡೆಗೆ ಭಾರಿ ಖಂಡನೆ ವ್ಯಕ್ತವಾಗಿತ್ತು. ಅದು, #AmulVsChina ನೊಂದಿಗೆ ಭಾನುವಾರವೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT