ಭಾನುವಾರ, ಮಾರ್ಚ್ 29, 2020
19 °C
ಸರ್ಕಾರಿ ಶಾಲೆಯಿದ್ದ ಜಾಗ ಸ್ವಾಧೀನ ಬದಲು ನಿಲ್ದಾಣದ ವಿನ್ಯಾಸವನ್ನೇ ಬದಲಿಸಲು ಒಪ್ಪಿದ ಬಿಎಂಆರ್‌ಸಿಎಲ್

ಶಾಲೆ ಆತಂಕ ನೀಗಿಸಿದ ‘ನಮ್ಮ ಮೆಟ್ರೊ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಬ್ಬಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವರ್ಷದಿಂದ ಎದುರಿಸುತ್ತಿದ್ದ ಆತಂಕವನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ದೂರ ಮಾಡಿದೆ. 

ಬೆಂಗಳೂರು ದಕ್ಷಿಣ ವಲಯದಲ್ಲಿನ ಎಳ್ಳುಕುಂಟೆ ಕ್ಲಸ್ಟರ್‌ ವ್ಯಾಪ್ತಿಯಲ್ಲಿರುವ ಈ ಶಾಲೆ ಕಟ್ಟಡವಿದ್ದ ಜಾಗವನ್ನು ಮೆಟ್ರೊ ನಿಲ್ದಾಣ ಕಾಮಗಾರಿಗಾಗಿ ವಶಪಡಿಸಿಕೊಂಡು, ಕಟ್ಟಡ ನೆಲಸಮಗೊಳಿಸಲು ಉದ್ದೇಶಿಸಲಾಗಿತ್ತು.

ಆದರೆ, ಈ ಪ್ರದೇಶದ ಸುತ್ತ ಶಾಲೆಗೆ ಪರ್ಯಾಯ ಸ್ಥಳ ಸಿಗದ ಕಾರಣ, ಈಗಿರುವ ಕಟ್ಟಡದಲ್ಲೇ ಶಾಲೆ ಮುಂದು
ವರಿಸಲು ತೀರ್ಮಾನಿಸಲಾಗಿದೆ. ಪರಿಣಾಮ, ಇಬ್ಬಲೂರು ಮೆಟ್ರೊ ನಿಲ್ದಾಣದ ವಿನ್ಯಾಸದಲ್ಲಿಯೇ ಬದಲಾವಣೆ ಮಾಡಿಕೊಳ್ಳಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

‘ಕನ್ನಡ ಮಾಧ್ಯಮದ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗಿನ 189 ವಿದ್ಯಾರ್ಥಿಗಳಿದ್ದಾರೆ. ಒಡಿಶಾ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರ ಮಕ್ಕಳೇ ಇದ್ದಾರೆ’ ಎಂದು ಮುಖ್ಯಶಿಕ್ಷಕಿ ಸಿ.ಅನಸೂಯಾ ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಾಲ್ಕು ದಶಕಗಳಿಂದ ಶಾಲೆ ನಡೆಯುತ್ತಿದೆ. ಮೆಟ್ರೊ ಮಾರ್ಗಕ್ಕಾಗಿ ಶಾಲೆ ಕಟ್ಟಡ ನೆಲಸಮಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಘೋಷಿಸಿದಾಗ ಆತಂಕವಾಗಿತ್ತು. ಹಿಂದಿನ ಮುಖ್ಯ ಶಿಕ್ಷಕರು, ಕಟ್ಟಡ ನೆಲಸಮದಿಂದ ಆಗುವ ತೊಂದರೆಗಳ ಬಗ್ಗೆ ನಿಗಮದ ಅಧಿಕಾರಿಗಳ ಗಮನಕ್ಕೆ ತಂದಿದ್ದರು’ ಎಂದು ಹೇಳಿದರು. 

‘ಶಾಲೆ ಕಟ್ಟಡ ಧ್ವಂಸಗೊಳಿಸುವುದಾದರೆ, ಪರ್ಯಾಯ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಮತ್ತು ಶಾಲೆಯ ಶೈಕ್ಷಣಿಕ ಚಟುವಟಿಕೆಗೆ ಯಾವುದೇ ತೊಂದರೆಯಾಗಬಾರದು. ಈ ಕಾರ್ಯ ನಡೆಯದೆ ಇದ್ದರೆ, ಶಾಲೆಯನ್ನು ನೆಲಸಮಗೊಳಿಸದೆ ವಿನ್ಯಾಸ ಬದಲಿಸಬೇಕು ಎಂದು ಮನವಿ ಮಾಡಲಾಗಿತ್ತು. ಅಧಿಕಾರಿಗಳು ವಿನ್ಯಾಸ ಬದಲಿಸಲು ಒಪ್ಪಿಗೆ ನೀಡಿದರು’ ಎಂದು ಅವರು ತಿಳಿಸಿದರು. ಈಗ, ಶಾಲೆಯ ಕಟ್ಟಡಕ್ಕೆ ಸುಣ್ಣ–ಬಣ್ಣ ಬಳಿಯಲಾಗುತ್ತಿದೆ. 

‘ನಮ್ಮ ಮೆಟ್ರೊ’ ಮೂರನೇ ಹಂತದಲ್ಲಿ, ಸರ್ಜಾಪುರ ಲೇಔಟ್‌ನಿಂದ ಯಲಹಂಕದವರೆಗೆ 35 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣಗೊಳ್ಳಲಿದೆ. ಈ ಮಾರ್ಗದಲ್ಲಿ ಇಬ್ಬಲೂರಿನಲ್ಲಿಯೂ ಮೆಟ್ರೊ ನಿಲ್ದಾಣ ತಲೆ ಎತ್ತಲಿದೆ.

*
ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆ ಕಟ್ಟಡ ನೆಲಸಮಕೈಬಿಟ್ಟಿದ್ದೇವೆ. ಮೆಟ್ರೊ ನಿಲ್ದಾಣದ ವಿನ್ಯಾಸದಲ್ಲಿಯೇ ಬದಲಾವಣೆ ಮಾಡುತ್ತೇವೆ.
-ಅಜಯ್‌ ಸೇಠ್, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ, ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು