ಬೆಂಗಳೂರು: ‘ವಯಸ್ಸಾದ ಗೋವುಗಳನ್ನು ಹತ್ಯೆ ಮಾಡಲು ಅವಕಾಶ ನೀಡುವ ಬದಲು, ಗೋವುಗಳು ಸತ್ತಾಗ ವಿಲೇವಾರಿ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟವು ಬುಧವಾರ ಹಮ್ಮಿಕೊಂಡಿದ್ದ ‘ಗೋಹತ್ಯೆ ನಿಷೇಧ ಕಾನೂನು ಉಳಿಯಲಿ, ಗೋವಿನ ಸಂತತಿ ಬೆಳೆಯಲಿ, ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದಲೇ ಭತ್ತ, ರಾಗಿ ಜೋಳ, ಸಿರಿಧಾನ್ಯ ಖರೀದಿಸಲಿ’ ಎನ್ನುವ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಹಸು, ಎತ್ತು ಸತ್ತಾಗ ಅದರ ವಿಲೇವಾರಿಗೆ ಬಹಳ ಖರ್ಚಾಗುತ್ತದೆ. ಹೀಗಾಗಿ, ಅವು ವಯಸ್ಸಾಗುತ್ತಿದ್ದಂತೆ ರೈತರು ಮಾರಾಟ ಮಾಡುತ್ತಾರೆ’ ಎಂದು ತಿಳಿಸಿದರು.
‘ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವುದು ಸರಿಯಲ್ಲ. ಕಾಯ್ದೆ ಬಗ್ಗೆ ಚರ್ಚೆ ಮಾಡಬೇಕು. ಈಗಲೂ ಗೋಸಾಗಾಟ ಮಾಡಿದವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಅದೇ ಕೆಲಸ ಮುಂದುವರಿಸುತ್ತಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಬಲಪಡಿಸಬೇಕು’ ಎಂದು ಒತ್ತಾಯಿಸಿದರು.
‘ಗೋಹತ್ಯೆ ನಿಷೇಧ ಕಾನೂನನ್ನು ಬಲಪಡಿಸಬೇಕು ಎಂದು ರಾಜ್ಯದ ಐದು ವಿಭಾಗಗಳಲ್ಲಿ ಐದು ಸಮಾವೇಶ ಮಾಡಿ ಸರ್ಕಾರವನ್ನು ಒತ್ತಾಯಿಸಲಾಗುವುದು. ಸರ್ಕಾರ ಮಣಿಯದೇ ಇದ್ದರೆ ಗೋವುಗಳ ಜತಗೆ ಬೆಂಗಳೂರಿಗೆ ಬಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ‘10 ಕೆ.ಜಿ. ಅಕ್ಕಿ ಕೊಡುವುದಾಗಿ ತಿಳಿಸಿರುವ ರಾಜ್ಯ ಸರ್ಕಾರ, ಈಗ ಕಮಿಷನ್‌ಗಾಗಿ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಮುಂದಾಗಿದೆ. 5 ಕೆ.ಜಿ. ರಾಜ್ಯದ ಬಾಸುಮತಿ ಅಕ್ಕಿಯನ್ನೇ ನೀಡಲಿ. ಉಳಿದ 5 ಕೆ.ಜಿ. ಅಕ್ಕಿಯ ಬದಲು ಯಾವ ಪ್ರಾಂತ್ಯದವರು ಯಾವುದನ್ನು ಬೆಳೆಯುತ್ತಾರೆ, ಯಾವುದನ್ನು ತಿನ್ನುತ್ತಾರೆ ಎಂಬುದನ್ನು ನೋಡಿ ಅದನ್ನು ನಮ್ಮ ರೈತರಿಂದಲೇ ಖರೀದಿಸಿ ನೀಡಬೇಕು’ ಎಂದು ಆಗ್ರಹಿಸಿದರು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ‘ರಾಜ್ಯದ ಶೇಕಡ 50ರಷ್ಟು ಮಹಿಳೆಯರು ರಕ್ತಹೀನತೆ ಮತ್ತು ಅಪೌಷ್ಟಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ಪ್ರತಿದಿನ 350-400 ಗ್ರಾಂಗಳಷ್ಟು ಆಹಾರ ಅವಶ್ಯ. ಆಯಾ ಭಾಗದಲ್ಲಿ ಉಪಯೋಗಿಸುವ ಧಾನ್ಯಗಳನ್ನು ವಿತರಿಸಬೇಕು. ರೈತರಿಂದ ಖರೀದಿಸುವ ಬೆಳೆಗಳಿಗೆ ಸ್ವಾಮಿನಾಥನ್ ವರದಿ ಪ್ರಕಾರ ಬೆಲೆ ನೀಡಬೇಕು. ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿರುವುದು ಮೂರ್ಖತನದ ನಿರ್ಧಾರ’ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.