ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಗುಂಡಿ ಇದ್ದರೆ ಎಂಜಿನಿಯರ್‌ ವೇತನ ಕಡಿತ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಎಚ್ಚರಿಕೆ
Last Updated 19 ಡಿಸೆಂಬರ್ 2022, 15:35 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ನಾಗರಿಕರು ಅಥವಾ ಯಾವುದೇ ಸಂಸ್ಥೆಯವರು ರಸ್ತೆ ಅಗೆದರೆ ಅದನ್ನು ಸರಿಪಡಿಸಬೇಕಾದ ಜವಾಬ್ದಾರಿ ವಾರ್ಡ್‌ ಎಂಜಿನಿಯರ್‌ ಅವರದ್ದು. ಆ ಕೆಲಸವನ್ನು ಮಾಡದಿದ್ದರೆ ಅವರ ವೇತನವನ್ನು ಕಡಿತ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಸಿದ್ದಾರೆ.

‘ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ ಸೇರಿ ಯಾವುದೇ ಏಜೆನ್ಸಿ ಮಾಡಿರುವ ಕೆಲಸದಿಂದ ರಸ್ತೆ ಹದಗೆಟ್ಟಿದ್ದರೆ ಅದನ್ನು ಅವರಿಂದ ಸರಿಪಡಿಸಬೇಕಾದ ಜವಾಬ್ದಾರಿ ವಾರ್ಡ್‌ ಎಂಜಿನಿಯರ್ ಅವರದ್ದು. ಕೆಲಸ ನಾವು ಮಾಡಿಲ್ಲ ಎಂದು ಸುಮ್ಮನಿರುವಂತಿಲ್ಲ. ವಾರ್ಡ್‌ ರಸ್ತೆ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕಾದ ಜವಾಬ್ದಾರಿ ವಾರ್ಡ್‌ ಎಂಜಿನಿಯರ್‌ ಅವರದ್ದೇ’ ಎಂದು ತಿಳಿಸಿದರು.

ವಾರ್ಡ್‌ ರಸ್ತೆಗಳಲ್ಲಿ ಗುಂಡಿಗಳಿಲ್ಲದಂತೆ ನೋಡಿಕೊಳ್ಳುವುದು ವಾರ್ಡ್‌ ಎಂಜಿನಿಯರ್‌ ಅವರ ಜವಾಬ್ದಾರಿ. ಅದನ್ನು ನಿರ್ವಹಿಸದಿದ್ದರೆ ವೇತನ ಕಡಿತ ಹಾಗೂ ಇತರೆ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದರು.

ಮುಖ್ಯ ಹಾಗೂ ಉಪ ಮುಖ್ಯರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ರಸ್ತೆ ಮೂಲಸೌಕರ್ಯದ ಎಂಜಿನಿಯರ್‌ಗಳಿಗೆ ಸೂಚಿಸಿದರು.

ರಾಜಾಜಿನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಮನೆಮನೆ ಪರಿಶೀಲನೆ ಕಾರ್ಯ ನಡೆಸಿ ಅವರು ಮಾತನಾಡಿದರು.

ರಾಜಾಜಿನಗರ ವಾರಿಯರ್ ಬೇಕರಿ ಬಳಿ ‘ಬ್ರಿಡ್ಜ್ ಸ್ಟೋನ್’ ಟೈರ್‌ ಮಾರಾಟ ಮಳಿಗೆಯಿಂದ ಪಾದಚಾರಿ ಮಾರ್ಗ ಒತ್ತುವರಿಯಾಗಿರುವುದನ್ನು ಗಮನಿಸಿ ಅದನ್ನು ತೆರವುಗೊಳಿಸಲು ಮಾಲೀಕರಿಗೆ ಸೂಚನೆ ನೀಡಿದರು.

53ನೇ ಬಿ ಅಡ್ಡರಸ್ತೆ, 3ನೇ ಬ್ಲಾಕ್ ರಸ್ತೆ,ಶಿವನಗರ ರಸ್ತೆ, ಮಾಗಡಿ ಮುಖ್ಯರಸ್ತೆಯಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಿದ್ದು, ಅದನ್ನು ಕೂಡಲೆ ತೆರವುಗೊಳಿಸಿ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೇರೋಹಳ್ಳಿ ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಕೆಲ ರಸ್ತೆಗಳಿಗೆ ಈಗಾಗಲೇ ಜೆಲ್ಲಿಯನ್ನು ಹಾಕಲಾಗಿದೆ. ಈ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಶ್ಚಿಮ ವಲಯ ಜಂಟಿ ಆಯುಕ್ತ ಯೋಗೇಶ್, ರಾಜರಾಜೇಶ್ವರಿ ನಗರ ವಲಯ ಜಂಟಿ ಆಯುಕ್ತ ನಾಗರಾಜ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ಉಮೇಶ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT