ಸೋಮವಾರ, ಮಾರ್ಚ್ 1, 2021
19 °C
‘ರಾಷ್ಟ್ರೀಯ ತೋಟಗಾರಿಕೆ ಮೇಳ’ದಲ್ಲಿ ‘ಅರ್ಕಾ ಶಾಮ್’ ಹೆಸರಿನ ತಳಿಯ ಪ್ರದರ್ಶನ

ಬೀಜೋತ್ಪಾದನೆಗೆ ದೇಶಿ ತಳಿಯ ಕಲ್ಲಂಗಡಿ

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಲ್ಲಂಗಡಿ ಬೆಳೆಗಾರರು ಪ್ರತಿ ವರ್ಷ ಬೀಜಕ್ಕಾಗಿ ಹೈಬ್ರಿಡ್ ತಳಿಗಳ ಮೊರೆ ಹೋಗುತ್ತಿದ್ದು, ತಾವೇ ಬೆಳೆದ ಕಲ್ಲಂಗಡಿಯಿಂದ ಬೀಜಗಳನ್ನು ಉತ್ಪಾದಿಸಿಕೊಳ್ಳಬಹುದಾದ ‘ಅರ್ಕಾ ಶಾಮ್’ ಹೆಸರಿನ ದೇಶಿ ತಳಿಯ ಕಲ್ಲಂಗಡಿಯನ್ನು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಅಭಿವೃದ್ಧಿಪಡಿಸಿದೆ.

ಸಂಸ್ಥೆಯ ಆವರಣದಲ್ಲಿ ಫೆ.8ರಿಂದ 12ರವರೆಗೆ ನಡೆಯಲಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕಾಗಿ ಈ ತಳಿಯ ಕಲ್ಲಂಗಡಿ ಬೆಳೆಯ ಪ್ರಾತ್ಯಕ್ಷಿಕೆ ಸಿದ್ಧಗೊಂಡಿದ್ದು, ರೈತರು ಸ್ಥಳದಲ್ಲಿಯೇ ತಳಿಯ ಮಾಹಿತಿ ಪಡೆಯಬಹುದು.

‘ದೇಶದಲ್ಲಿ ಹೈಬ್ರಿಡ್‌ ತಳಿ ಕಲ್ಲಂಗಡಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ರೈತರು ವಿದೇಶಿ ತಳಿಯ ಕಲ್ಲಂಗಡಿ ಮೇಲೆ ಹೆಚ್ಚು ವಲಂಬಿತರಾಗಿದ್ದಾರೆ. ಪ್ರತಿ ವರ್ಷವೂ ಹೈಬ್ರಿಡ್ ತಳಿಯ ಬೀಜಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳು
ತ್ತಿದ್ದು, ಬೀಜದ ಸಮಸ್ಯೆಗೆ ಈ ತಳಿ ಪರ್ಯಾಯ ಮಾರ್ಗವಾಗಿದೆ’ ಎಂದು ಐಐಎಚ್‌ಆರ್‌ನ ತರಕಾರಿ ಬೆಳೆಗಳ ವಿಭಾಗದ ಪ್ರಧಾನ ವಿಜ್ಞಾನಿ ಇ.ಶ್ರೀನಿವಾಸ್ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರು ಈಗ ಬೆಳೆಯುತ್ತಿರುವ ಕಲ್ಲಂಗಡಿಯಂತೆಯೇ ಈ ತಳಿ ಕಂಡರೂ, ಕೆಲವು ವಿಶೇಷ ಲಕ್ಷಣಗಳಿವೆ. ಇದು, ದೊಡ್ಡ ಗಾತ್ರದಲ್ಲಿ ಬೆಳೆಯುವುದಿಲ್ಲ. ಐಸ್‌ ಬಾಕ್ಸ್‌ವೊಂದರಲ್ಲಿ ಇಡಬಹುದಾದ ಉದ್ದನೆಯ ಗಾತ್ರದಲ್ಲಿ ಇರುತ್ತವೆ. ಹೆಚ್ಚೆಂದರೆ ಒಂದು ಹಣ್ಣು ಗರಿಷ್ಠ 3 ಕೆ.ಜಿ ತೂಗಬಲ್ಲದು. 75 ದಿನಗಳಲ್ಲಿ ಫಲ ಕಟಾವಿಗೆ ಬರಲಿದೆ’ ಎಂದು ವಿವರಿಸಿದರು.

ಶೇ 75ರಷ್ಟು ಬೀಜ ಆಮದು

‘ಹೈಬ್ರಿಡ್‌ ತಳಿಯ ಕಲ್ಲಂಗಡಿ ಬೀಜಗಳನ್ನು ರಫ್ತು ಮಾಡುವಲ್ಲಿ ಥೈಲ್ಯಾಂಡ್‌, ಚೀನಾ ಹಾಗೂ ತೈವಾನ್‌ ಮುಂಚೂಣಿಯಲ್ಲಿವೆ. ಉತ್ತರಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಕಲ್ಲಂಗಡಿ ಬೆಳೆಯಯಲಿದ್ದು, ಹೈಬ್ರಿಡ್‌ ಕಲ್ಲಂಗಡಿ ಬೀಜಗಳ ಶೇ 75ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದು ಶ್ರೀನಿವಾಸ್‌ ರಾವ್ ವಿವರಿಸಿದರುರು.

‘ನ್ಯಾಷನಲ್ ಸೀಡ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಎಸ್‌ಎಐ) ಮೂಲಗಳ ಪ್ರಕಾರ 110 ಟನ್‌ಗಳಷ್ಟು ಹೈಬ್ರಿಡ್‌ ಕಲ್ಲಂಗಡಿ ಬೀಜಗಳು ದೇಶದಾದ್ಯಂತ ಪ್ರತಿ ವರ್ಷ ಮಾರಾಟ ಆಗುತ್ತಿವೆ. 79 ಟನ್‌ನಷ್ಟು ಬೀಜ ವಿದೇಶಗಳಿಂದ ಬರುತ್ತಿದ್ದು, ಇದರ ಮೌಲ್ಯ ಅಂದಾಜು ₹200 ಕೋಟಿ’.

‘ಒಂದು ಎಕರೆಯಲ್ಲಿ ಕೃಷಿಗೆ 280 ಗ್ರಾಂ ಬೀಜ ಅಗತ್ಯ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಕಲ್ಲಂಗಡಿ ಬೀಜದ ದರ ₹40 ಸಾವಿರವರೆಗೆ ಇದೆ. ಈ ತಳಿ ಬೆಳೆಯುವುದರಿಂದ ಮುಂದಿನ ಬೆಳೆಗೆ ತಾವೇ ಬೀಜಗಳನ್ನು ಉತ್ಪಾದಿಸಿಕೊಳ್ಳಬಹುದು’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು