ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ವಾಸ್ತುಶಾಸ್ತ್ರ ಆನ್‌ಲೈನ್ ತರಬೇತಿ: ಆಕ್ಷೇಪ

Last Updated 9 ನವೆಂಬರ್ 2022, 3:22 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಲೋಕೋಪಯೋಗಿ ಇಲಾಖೆಯು ಇದೇ 17ರಂದು ಹಮ್ಮಿಕೊಂಡಿರುವ ವಾಸ್ತುಶಾಸ್ತ್ರದ ಆನ್‌ಲೈನ್ ತರಬೇತಿ ಕಾರ್ಯಕ್ರಮಕ್ಕೆ ಇಂಡಿಯಾ ಮಾರ್ಚ್ ಫಾರ್ ಸೈನ್ಸ್ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ.

ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು, ಕಾರ್ಮಿಕರು ಸೇರಿ ಹಲವರಿಗೆ ಈ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ. ಪ್ರಾಚೀನ ಗ್ರಂಥಗಳ ಆಧಾರದಲ್ಲಿ ಕಟ್ಟಡಗಳ ವಿನ್ಯಾಸದಲ್ಲಿ ವಾಸ್ತುಶಾಸ್ತ್ರದ ಮಹತ್ವ ಸಾರುವುದು ಈ ಕೋರ್ಸ್‌ನ ಮುಖ್ಯ ಉದ್ದೇಶವಾಗಿದೆ.

‘ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ತರಬೇತಿ ಕಾರ್ಯಕ್ರಮ ನಡೆಸುತ್ತಿರುವುದು ಆಘಾತವನ್ನುಂಟು ಮಾಡಿದೆ. ಈ ಕ್ರಮವು ಹಿಮ್ಮುಖ ಹೆಜ್ಜೆಯಾಗಿದೆ. ನಾಗರಿಕತೆಯ ಆರಂಭಿಕ ದಿನಗಳಿಂದಲೂ ಜನರು ಗಾಳಿ–ಬೆಳಕಿನ ಅಗತ್ಯಾನುಸಾರ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಹಳ್ಳಿಗಳಲ್ಲಿನ ಸಾಮಾನ್ಯ ಜನರಿಗೂ ಈ ಬಗ್ಗೆ ತಿಳಿದಿದೆ. ಸಿವಿಲ್ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಲ್ಲಿ ವಾಸ್ತುಶಾಸ್ತ್ರದ ಯಾವುದೇ ಕುರುಹು ಇಲ್ಲದೇ, ಕಟ್ಟಡ ನಿರ್ಮಾಣದ ಬಗ್ಗೆ ತಿಳಿಸಿಕೊಡಲಾಗುತ್ತದೆ’ ಎಂದು ಸಂಘಟನೆಯ ಆನಂದ್ ರಾಜ್ ತಿಳಿಸಿದ್ದಾರೆ.

‘ವಾಸ್ತುಶಾಸ್ತ್ರವು ತತ್ವಶಾಸ್ತ್ರವೂ ಅಲ್ಲ, ವಿಜ್ಞಾನವೂ ಅಲ್ಲ. ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಇದನ್ನು ದುರುದ್ದೇಶದಿಂದ ಪ್ರಚಾರ ಮಾಡುತ್ತಿವೆ. ಮುಗ್ಧ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಪ್ರವೇಶದ್ವಾರ, ಕಿಟಕಿಗಳು ಸೇರಿ ಕೆಲವೊಮ್ಮೆ ಇಡೀ ಮನೆಯನ್ನು ಬದಲಾಯಿಸಲು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ. ವಾಸ್ತುಶಾಸ್ತ್ರವು ಅವೈಜ್ಞಾನಿಕ ಕಲ್ಪನೆಯಾಗಿದ್ದು, ಮನೆಯಲ್ಲಿನ ಪೀಠೋಪಕರಣಗಳ ಬದಲಾವಣೆಯಿಂದ ಅದೃಷ್ಟ ಬದಲಾಗುವುದಿಲ್ಲ’ ಎಂದು ಹೇಳಿದ್ದಾರೆ.

‘ಕೇಂದ್ರ ಸರ್ಕಾರದ ಇಲಾಖೆಯು ವಾಸ್ತುಶಾಸ್ತ್ರವನ್ನು ಪ್ರಚಾರ ಮಾಡುತ್ತಿರುವುದು ಖಂಡನೀಯ. ಈ ತರಬೇತಿ ಕಾರ್ಯಕ್ರಮವನ್ನು ರದ್ದು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT