ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ಸಾವಿರ ಮನೆ ಬಡವರಿಗೆ ಹಸ್ತಾಂತರಿಸಿ: ಇಂಡಿಯನ್‌ ಫ್ರೀಡಂ ಪ್ಯಾಂಥರ್ಸ್‌

Published : 2 ಡಿಸೆಂಬರ್ 2023, 15:34 IST
Last Updated : 2 ಡಿಸೆಂಬರ್ 2023, 15:34 IST
ಫಾಲೋ ಮಾಡಿ
Comments

ಬೆಂಗಳೂರು: ಬಡ ಫಲಾನುಭವಿಗಳಿಗೆ 50 ಸಾವಿರ ಮನೆಗಳನ್ನು ನಿರ್ಮಿಸಿ, ಉಚಿತವಾಗಿ ನೀಡುವ ಕಾಂಗ್ರೆಸ್‌ನ 6ನೇ ಗ್ಯಾರಂಟಿ ಕೂಡಲೇ ಜಾರಿಗೊಳಿಸುವಂತೆ ಇಂಡಿಯನ್‌ ಫ್ರೀಡಂ ಪ್ಯಾಂಥರ್ಸ್‌ ಸಂಘಟನೆ ಆಗ್ರಹಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಅರುಣ ಕುಮಾರ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಜಮೀರ್ ಅಹಮದ್‌ ಖಾನ್ ಅವರು ರಾಜ್ಯ ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಸರ್ಕಾರ ಬಂದು ಆರು ತಿಂಗಳಾದರೂ ಈ ಬಗ್ಗೆ ಮಾತನಾಡುತ್ತಿಲ್ಲ’ ಎಂದರು.

‘ಸರ್ಕಾರಕ್ಕೆ ಮನೆಗಳನ್ನು ಉಚಿವಾಗಿ ನೀಡಲು ಸಾಧ್ಯವಾಗದಿದ್ದರೆ, ಕೇಂದ್ರ–ರಾಜ್ಯ ಸರ್ಕಾರಗಳ ಸಬ್ಸಿಡಿ ಹೊರತುಪಡಿಸಿ, ಫಲಾನುಭವಿಗಳ ಪಾಲಿನ ₹3 ಲಕ್ಷ ವಂತಿಗೆಯನ್ನು ಕಡಿಮೆ ಬಡ್ಡಿ ದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲದ ಮೂಲಕ ಒದಗಿಸಿ, ಮನೆಗಳನ್ನು ಹಸ್ತಾಂತರಿಸಬೇಕು. 25 ವರ್ಷಗಳ ಹಿಂದಿನ ಸಬ್ಸಿಡಿ ಪದ್ಧತಿಯನ್ನು ಪರಿಷ್ಕೃತಗೊಳಿಸಿ ₹ 5 ಲಕ್ಷಕ್ಕೆ ಹೆಚ್ಚಿಸಬೇಕು. 2024ರ ಮಾರ್ಚ್‌ ಒಳಗೆ ಕಾಮಗಾರಿ ಮುಗಿಸಿ ಬಡವರಿಗೆ ಮನೆಗಳನ್ನು ಹಸ್ತಾಂತರ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಹಿರಿಯ ನಾಗರಿಕ, ಅಂಗವಿಕಲ ಮತ್ತು ವಿಧವಾ ವಸತಿ ಅರ್ಜಿದಾರರಿಗೆ ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸುತ್ತವೆ. ಆದ್ದರಿಂದ, ಈ ಫಲಾನುಭವಿಗಳ ವಂತಿಗೆಯನ್ನು ಸರ್ಕಾರವೇ ಭರಿಸಬೇಕು. ಫಲಾನುಭವಿಗಳೆಲ್ಲ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಯಾವುದೇ ಆರ್ಥಕ ಭದ್ರತೆ ಇಲ್ಲದ ಕಾರಣ ಬ್ಯಾಂಕುಗಳು ಯಾವುದೇ ಗ್ರಾಹಕ ಮಾನದಂಡಗಳನ್ನು ವಿಧಿಸಬಾರದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT