ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತರಾಜ ವರದಿ ಜಾರಿಗೆ ಕರ್ನಾಟಕ ರಾಜ್ಯ ಮಡಿವಾಳ ಸಂಘ ಒತ್ತಾಯ

Published 19 ಡಿಸೆಂಬರ್ 2023, 14:46 IST
Last Updated 19 ಡಿಸೆಂಬರ್ 2023, 14:46 IST
ಅಕ್ಷರ ಗಾತ್ರ

ಬೆಂಗಳೂರು: ‘ಎಚ್‌. ಕಾಂತರಾಜ ನೇತೃತ್ವದಲ್ಲಿ ನಡೆದ ಹಿಂದುಳಿದ ವರ್ಗಗಳ ಸಮೀಕ್ಷಾ ವರದಿಯನ್ನು ಕೂಡಲೇ ಸ್ವೀಕರಿಸಿ, ಅದನ್ನು ಜಾರಿಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ಮಡಿವಾಳ ಸಂಘ ಆಗ್ರಹಿಸಿದೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ. ನಂಜಪ್ಪ, ‘ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ಕೌಟುಂಬಿಕ ಸೇರಿದಂತೆ 55 ಅಂಶಗಳ ಮಾಹಿತಿಗಳನ್ನು ಕಾಂತರಾಜ ಆಯೋಗ ನಡೆಸಿರುವ ಸಮೀಕ್ಷೆಯಲ್ಲಿ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿರುವ ಎಲ್ಲ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಸೌಲಭ್ಯಗಳನ್ನು ಹಂಚಿಕೆ ಮಾಡಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕೆ ಒಂದು ಅರ್ಥ ಸಿಗಲಿದೆ’ ಎಂದು ಹೇಳಿದರು. 

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ವರದಿ ಸ್ವೀಕರಿಸಿ ಅದನ್ನು ಬಹಿರಂಗಗೊಳಿಸಬೇಕು. ನಂತರ ಅದನ್ನು ಸಾರ್ವಜನಿಕರ ಚರ್ಚೆಗೊಳಪಡಿಸಿ, ಸಾದಕ–ಬಾಧಕಗಳನ್ನು ಪರಾಮರ್ಶಿಸಿ ನಂತರ ಅದನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಕಾಂತರಾಜ ಆಯೋಗದ ವರದಿಯ ಬಗ್ಗೆ ಕೆಲ ಸಮುದಾಯಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಆ ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ವರದಿ ಬಹಿರಂಗಗೊಂಡ ಮೇಲೆ, ಅದನ್ನು ಓದಿದ ನಂತರ ಆಕ್ಷೇಪಗಳನ್ನು ವ್ಯಕ್ತಪಡಿಸಲಿ’ ಎಂದು ಹೇಳಿದರು.

‘ಮುಂದಿನ 15 ದಿನಗಳಲ್ಲಿ ವರದಿ ಸ್ವೀಕರಿಸುವ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕಾರ್ಯದರ್ಶಿ ಬಿ.ಆರ್.ಪ್ರಕಾಶ್, ಹಿಂದುಳಿದ ಆಯೋಗದ ಮಾಜಿ ಸದಸ್ಯ ಜಿ.ಡಿ. ಗೋಪಾಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT