ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ತಪ್ಪಿಸಿಕೊಂಡಿದ್ದ ಆರೋಪಿಯ ಜೈಲು ಶಿಕ್ಷೆ ಕಾಯಂ

Published 8 ಮೇ 2024, 15:59 IST
Last Updated 8 ಮೇ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಗುಂಪುಗಳ ನಡುವಿನ ಗಲಾಟೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳು ಕಠಿಣ ಜೈಲು ಶಿಕ್ಷೆ ಹಾಗೂ ₹1 ಸಾವಿರ ದಂಡವನ್ನು ಹೈಕೋರ್ಟ್ ಕಾಯಂಗೊಳಿಸಿದೆ.

ಈ ಸಂಬಂಧ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಬಾಗೇಪಲ್ಲಿಯ ಸೋಮಶೇಖರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರು ಸಹಾಯಕ ಸಬ್ ಇನ್‌ಸ್ಪೆಕ್ಟರ್ ಅವರನ್ನು ಉದ್ದೇಶ ಪೂರ್ವಕವಾಗಿ ತಳ್ಳಿ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದಾರೆ. ಅದನ್ನು ಪ್ರಾಸಿಕ್ಯೂಷನ್‌ ಸಾಕ್ಷಿಗಳೂ ದೃಢೀಕರಿಸಿದ್ದಾರೆ. ಹೀಗಾಗಿ, ಶಿಕ್ಷೆ ರದ್ದುಗೊಳಿಸಲಾಗದು’ ಎಂದು ನ್ಯಾಯಪೀಠ ಅದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?: ಹೊಸಹುಡ್ಯ ಗ್ರಾಮದಲ್ಲಿ 2012ರ ಏಪ್ರಿಲ್ 7ರಂದು ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ವಿಷಯ ತಿಳಿದು ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸಾದಪ್ಪ ಮತ್ತು ಪೊಲೀಸರು ಗ್ರಾಮಕ್ಕೆ ತೆರಳಿದ್ದರು. ಆ ವೇಳೆ ಸೋಮಶೇಖರ್‌ ಮತ್ತು ವೆಂಕಟೇಶ್ ಅವರನ್ನು ಬಂಧಿಸಲಾಗಿತ್ತು ಮತ್ತು ಅವರ ವಿರುದ್ಧ ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.

‘ಆರೋಪಿಗಳನ್ನು ಪಾತಪಾಳ್ಯ ಪೊಲೀಸ್ ಠಾಣೆಗೆ ಕರೆ ತಂದಾಗ ಜೀಪ್‌ನಿಂದ ಕೆಳಗೆ ಇಳಿಯುವ ವೇಳೆ ಸೋಮಶೇಖರ್, ಸಾದಪ್ಪನವರನ್ನು ತಳ್ಳಿ ತಪ್ಪಿಸಿಕೊಂಡು ಓಡಿದ್ದ’ ಎಂಬ ಆರೋಪಡಿ ಬಾಗೇಪಲ್ಲಿ ಜೆಎಂಎಫ್‌ಸಿ ನ್ಯಾಯಾಲಯ 2014ರ ಜೂನ್ 9ರಂದು 6 ತಿಂಗಳು ಕಠಿಣ ಜೈಲು ಶಿಕ್ಷೆ ಮತ್ತು ₹1 ಸಾವಿರ ದಂಡ ವಿಧಿಸಿದ್ದರು. ಇದನ್ನು ಚಿಕ್ಕಬಳ್ಳಾಪುರ ಸೆಷನ್ಸ್ ನ್ಯಾಯಾಲಯ 2016ರ ಡಿಸೆಂಬರ್ 31ರಂದು ಎತ್ತಿ ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT