ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಶ್ಮೀರದಲ್ಲಿ ನಿಲ್ಲದ ಗುಂಡಿನ ಮೊರೆತ’

ಭೂಲೋಕದ ಸ್ವರ್ಗದಲ್ಲಿನ ನರಕ ಸ್ಥಿತಿ ತೆರೆದಿಟ್ಟ ಕಾಶ್ಮೀರಿ ಪತ್ರಕರ್ತರು
Last Updated 10 ಫೆಬ್ರುವರಿ 2020, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ನಂತರ ಕರಾಳ ಸ್ಥಿತಿ ನಿರ್ಮಾಣವಾಗಿದ್ದು, ಕರ್ಫ್ಯೂ ಹೇರಿಕೆ ಈಗಲೂ ಮುಂದುವರಿದಿದೆ. ಮದ್ದು–ಗುಂಡುಗಳ ಸದ್ದು ಇನ್ನೂ ನಿಂತಿಲ್ಲ. ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆ ಮಹಾಸುಳ್ಳು’ ಎಂದು ಕಾಶ್ಮೀರದ ಮಹಿಳಾ ಪತ್ರಕರ್ತರು ದೂರಿದರು.

ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ – ಬೆಂಗಳೂರು ಹಾಗೂ ನೆಟ್ ವರ್ಕ್ ಆಫ್ ವಿಮೆನ್ ಇನ್ ಮೀಡಿಯಾ’ (ಎನ್‌ಡಬ್ಲ್ಯೂಎಂಐ) ಜಂಟಿಯಾಗಿ ಸೋಮವಾರ ‘ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮ’ ಕುರಿತು ಕಾಶ್ಮೀರಿ ಪತ್ರಕರ್ತರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಅಲ್ಲಿನ ಪರಿಸ್ಥಿತಿ ಕುರಿತು ಮಾತನಾಡಿದ ಪತ್ರಕರ್ತರು, ತಮ್ಮ ಹೆಸರನ್ನು ಬಹಿರಂಗಪಡಿಸಲು ಬಯಸಲಿಲ್ಲ.

‘ಕಾಶ್ಮೀರದಲ್ಲಿನ ವಾಸ್ತವ ಸ್ಥಿತಿ–ಗತಿ ಕುರಿತು ದೇಶ ಮತ್ತು ಜಗತ್ತನ್ನು ಕತ್ತಲಲ್ಲಿ ಇಡಲಾಗಿದೆ. ಅಂತರ್ಜಾಲ ಸೇವೆ ನಿಷೇಧಗೊಳಿಸಿದ್ದರಿಂದ ಕಾಶ್ಮೀರದಲ್ಲಿ ಆಡಳಿತ ಸ್ತಬ್ಧವಾಗಿತ್ತು. ಸಕಾಲದಲ್ಲಿ ಆರೋಗ್ಯ ಸೇವೆ ಸಿಗದೆ ಅನೇಕರು ಪ್ರಾಣ ಕಳೆದುಕೊಂಡರು’ ಎಂದು ಹೇಳಿದರು.

‘ಪತ್ರಕರ್ತರ ಮೇಲೆ ನಿರಂತರ ದೌರ್ಜನ್ಯ ನಡೆಯಿತು. ವರದಿಗಾರಿಕೆ ನಿರ್ಬಂಧಿಸಲಾಗಿತ್ತು. ನಮ್ಮ ಕ್ಯಾಮೆರಾಗಳನ್ನು ಕಿತ್ತುಕೊಳ್ಳಲಾಯಿತು. ಸುದ್ದಿ ಕಳಿಸಲು ಸಾಧ್ಯವಾಗಲಿಲ್ಲ’ ಎಂದರು.

ಹಲವು ನಿರ್ಬಂಧಗಳಿಂದಾಗಿ ಸುಂದರ ಕಾಶ್ಮೀರ ಇಂದು ಅಕ್ಷರಶಃ ನರಕವಾಗಿ ಮಾರ್ಪಟ್ಟಿದೆ’ ಎಂದರು.

‘ಪತ್ರಿಕಾ ಸ್ವಾತಂತ್ರ್ಯ ದಮನ’

‘ಕಾಶ್ಮೀರದಲ್ಲಿ ಕರಾಳ ಸ್ಥಿತಿ ಈಗಲೂ ಮುಂದುವರಿದಿದೆ. ಅಂತರ್ಜಾಲ ಸೇವೆ ಪ್ರಾರಂಭವಾಗಿದ್ದರೂ, 2ಜಿ ನೆಟ್‌ವರ್ಕ್‌ ಮಾತ್ರ ಇದೆ. ಇದರಿಂದ ಸರ್ಕಾರಿ ಸೇವೆಗಳು ಜನರಿಗೆ ದೊರಕುತ್ತಿಲ್ಲ. ಮಾಧ್ಯಮಗಳು ಡಿಜಿಟಲ್‌ ತಂತ್ರಜ್ಞಾನದ ಮೇಲೆಯೇ ಅವಲಂಬಿತವಾಗಿರುವುದರಿಂದ, ಇಂಟರ್‌ನೆಟ್‌ ಸೌಲಭ್ಯ ಇಲ್ಲದೆ ಸುದ್ದಿಮನೆಗಳು ಖಾಲಿ ಆಗಿವೆ. ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿದೆ’ ಎಂದು ಪತ್ರಕರ್ತರು ದೂರಿದರು.

‘ಭೂಮಿ ಕಂಪನಿಗಳ ಪಾಲು’

‘ಕಾಶ್ಮೀರದ ಭೂಮಿಯನ್ನು ಕಾರ್ಪೊರೇಟ್‌ ಕಂಪನಿಗಳ ಧಣಿಗಳಿಗೆ ಪರಭಾರೆ ಮಾಡಲಾಗುತ್ತಿದೆ. ಸುಂದರ ಪರಿಸರವನ್ನು ನಾಶ ಮಾಡಿ ಹೋಟೆಲ್‌, ರೆಸಾರ್ಟ್‌, ಅಪಾರ್ಟ್‌ಮೆಂಟ್‌ ಸಮುಚ್ಛಯ ತಲೆ ಎತ್ತುವಂತೆ ಮಾಡಲಾಗುತ್ತದೆ. ಇದು ಅಭಿವೃದ್ಧಿಯೇ’ ಎಂದು ಪತ್ರಕರ್ತರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT