ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕರಿಸಿದ ನೀರಿಗೆ ಬೆಂಗಳೂರಿನಲ್ಲಿ ಹೆಚ್ಚಿದ ಬೇಡಿಕೆ

ನಗರದಲ್ಲಿ 2 ಲಕ್ಷ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ: ಜಲಮಂಡಳಿ
Published 12 ಏಪ್ರಿಲ್ 2024, 16:07 IST
Last Updated 12 ಏಪ್ರಿಲ್ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಬಳಸುವವರಿಂದ (ಬಲ್ಕ್‌ ಬಳಕೆದಾರರು) ಸಂಸ್ಕರಿಸಿದ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

ಪ್ರತಿ ತಿಂಗಳು 10 ಲಕ್ಷ ಲೀಟರ್‌ಗೂ ಹೆಚ್ಚು ನೀರು ಬಳಸುವ 714 ಬಲ್ಕ್‌ ಬಳಕೆದಾರರಲ್ಲಿ, 127 ಬಲ್ಕ್‌ ಬಳಕೆದಾರರು ಸಂಸ್ಕರಿಸಿದ ನೀರಿಗೆ ಬೇಡಿಕೆ ಸಲ್ಲಿಸಿದ್ದಾರೆ. ಅವರ ಪ್ರದೇಶಗಳಿಗೆ ಸಮೀಪದ ಜಲಮಂಡಳಿ ಎಸ್‌ಟಿಪಿಗಳು ಹಾಗೂ ಖಾಸಗಿ ಎಸ್‌ಟಿಪಿಗಳಿಂದ ಸಂಸ್ಕರಿಸಿದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜಲಮಂಡಳಿ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದರು.

ಸಂಸ್ಕರಿಸಿದ ನೀರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯಿಡುವ ಉದ್ದಿಮೆಗಳು ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಸಂಸ್ಕರಿಸಿದ ನೀರಿನ ದರದಲ್ಲಿ ಇನ್ನಷ್ಟು ರಿಯಾಯಿತಿ ನೀಡಲು ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ನಗರದಲ್ಲಿ ಏರಿಯೇಟರ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಿದ ನಂತರ 2,86,114 ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸಲಾಗಿದೆ. 714 ಬಲ್ಕ್ ಗ್ರಾಹಕರಲ್ಲಿ 481 ಬಲ್ಕ್ ಗ್ರಾಹಕರು ಈಗಾಗಲೇ‌ ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಏರಿಯೇಟರ್‌ ಅಳವಡಿಸಿಕೊಂಡಿದ್ದಾರೆ ಎಂದರು.

ಸಭೆಯಲ್ಲಿ ಮುಖ್ಯ ಎಂಜನಿಯರ್‌ಗಳಾದ ಎಲ್. ಕುಮಾರನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ್ ಕೆ.ಎನ್., ಗಂಗಾಧರ್ ಬಿ.ಸಿ., ದೇವರಾಜು ಎಂ., ಜಯಶಂಕರ್ ಉಪಸ್ಥಿತರಿದ್ದರು.

ಕೊಳವೆಬಾವಿ ಕೊರೆಯಲು ಸೂಚನೆ: ಬೆಂಗಳೂರು ಪೂರ್ವಭಾಗದಲ್ಲಿ ನೀರಿನ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಬೇಕು ಹಾಗೂ ಕೊಳವೆ ಬಾವಿಗಳ ಪುನಶ್ಚೇತನ ಮಾಡಬೇಕು ಎಂದು ರಾಮ್‌ಪ್ರಸಾತ್‌ ಮನೋಹರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರು ಆಲಿಸಿ ಅವರು ಅಧಿಕಾರಿಗಳೊಂದಿಗೆ ಮಾತನಾಡಿದರು.

ಪೂರ್ವ ಭಾಗದಲ್ಲಿ 30 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಇನ್ನೂ 20 ‌ಕೊರೆಸಲು ಸೂಚಿಸಿದರು.

ಬಿಎಎಫ್‌ ಜೊತೆ ಒಪ್ಪಂದ

ಅಪಾರ್ಟ್‌ಮೆಂಟ್‌ಗಳಲ್ಲಿ ಸಂಸ್ಕರಿಸಿದ ನೀರನ್ನು ಗ್ರಾಹಕರಿಗೆ ಜಲಮಂಡಳಿ ವತಿಯಿಂದ ಸರಬರಾಜು ಮಾಡಲು ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌‌ನೊಂದಿಗೆ(ಬಿಎಎಫ್‌) ಜಲಮಂಡಳಿ ಒಪ್ಪಂದ ಮಾಡಿಕೊಂಡಿದೆ. ಅಪಾರ್ಟ್‌ಮೆಂಟ್‌ಗಳಿಂದ ಸಂಸ್ಕರಿಸಿದ ನೀರನ್ನು ಟ್ಯಾಂಕರ್‌ಳ ಮೂಲಕ ಜಲಮಂಡಳಿ ಸರಬರಾಜು ಮಾಡಲಿದೆ. ಮುಂದಿನ ಹಂತದಲ್ಲಿ ಸತತವಾಗಿ ಬೇಡಿಕೆ ಇರುವ ಗ್ರಾಹಕರಿಗೆ ಪೈಪ್‌ಲೈನ್‌ ಮೂಲಕವೂ ಸಂಸ್ಕರಿಸಿದ ನೀರು ಪೂರೈಸಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್‌ ತಿಳಿಸಿದರು. ಅಪಾರ್ಟ್‌ಮೆಂಟ್‌ಗಳಲ್ಲಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡಿದ ನಂತರವೂ ಉಳಿಯುತ್ತಿದೆ. ಅದನ್ನು ಅನಿವಾರ್ಯವಾಗಿ ನಾಲೆಗಳಿಗೆ ಬಿಡಲಾಗುತ್ತಿತ್ತು. ಇದನ್ನು ತಡೆಯಲು ಮೂರನೇ ವ್ಯಕ್ತಿಗೆ ಸಂಸ್ಕರಿಸಿದ ನೀರು ಮಾರಾಟ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದನ್ನು ಪೂರೈಸುವ ಸಂಸ್ಥೆಯ ಕೊರತೆ ಎದುರಾಗಿತ್ತು. ಆದ್ದರಿಂದ ಬಿಎಎಫ್‌ ಮತ್ತು ಬಳಕೆದಾರರ ನಡುವೆ ಜಲಮಂಡಳಿ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು. ಬಿಎಎಫ್‌ ಅಧ್ಯಕ್ಷ ವಿಕ್ರಮ್‌ ಪದಾಧಿಕಾರಿಗಳಾದ ಅರುಣ್ ಕುಮಾರ್ ಸತೀಶ್ ಮಲ್ಯ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT