ಮಂಗಳವಾರ, ಸೆಪ್ಟೆಂಬರ್ 27, 2022
27 °C
ಬಿಎಂಟಿಸಿ ನಿಲ್ದಾಣಗಳಲ್ಲಿ ಕಾದು ನಿಂತಿದ್ದ ಪ್ರಯಾಣಿಕರು

ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ: ಬಸ್‌ಗಳಲ್ಲೂ ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಎಂಟಿಸಿ ರಜತ ಮಹೋತ್ಸವದ ಅಂಗವಾಗಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಪ್ರಯಾಣಿಕರು ಎಲ್ಲೆಡೆ ಬಸ್‌ಗಾಗಿ ಕಾದು ನಿಲ್ಲುವಂತಾಗಿತ್ತು.

ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಮತ್ತು ಬಿಎಂಟಿಸಿ ರಜತ ಮಹೋತ್ಸವ ಒಂದೇ ದಿನ ಇದ್ದಿದ್ದರಿಂದ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಣ ಪಡೆದು ಟಿಕೆಟ್ ಕೊಡುವ ಕೆಲಸ ಇಲ್ಲದಿದ್ದರೂ ನಿರ್ವಾಹಕರು, ಜನರನ್ನು ಹತ್ತಿಸಿಕೊಂಡು ಎಷ್ಟು ಜನ ಪ್ರಯಾಣ ಮಾಡಿದರು, ಯಾವ ನಿಲ್ದಾಣದಲ್ಲಿ ಹತ್ತಿದರು, ಯಾವ ನಿಲ್ದಾಣದಲ್ಲಿ ಇಳಿದರು, ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಎಷ್ಟು ಎಂಬುದನ್ನು ನಮೂದಿಸಿಕೊಂಡರು.

ಉಚಿತ ಪ್ರಯಾಣದ ಅರಿವಿಲ್ಲದೆ ಕೆಲವರು ಟಿಕೆಟ್ ಪಡೆಯಲು ಹಣ ನೀಡಲೂ ಮುಂದಾದರು. ಆದರೆ, ನಿರ್ವಾಹಕರು ರಜತ ಮಹೋತ್ಸವದ ಬಗ್ಗೆ ವಿವರಿಸಿ ಉಚಿತವಾಗಿ ಪ್ರಯಾಣಿಸಲು ತಿಳಿಸಿದರು.

ಬೆಳಿಗ್ಗೆ ಸಾಮಾನ್ಯವಾಗಿದ್ದ ಬಸ್ ಸಂಚಾರ ಮಧ್ಯಾಹ್ನದ ಬಳಿಕ ಕೊಂಚ ಕಡಿಮೆ ಆದಂತೆ ಕಾಣಿಸಿತು. ಮೆಜೆಸ್ಟಿಕ್ ಸೇರಿ ಎಲ್ಲಾ ನಿಲ್ದಾಣಗಳಲ್ಲೂ ಬಸ್‌ಗಾಗಿ ಜನರು ಕಾದು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೆಜೆಸ್ಟಿಕ್‌ ನಿಲ್ದಾಣದಲ್ಲಂತೂ ಬಸ್ ಬಂದರೆ ಅದರ ಹಿಂದೆ ಮುಗಿಬಿದ್ದು, ಓಡಿ ಹತ್ತಿಕೊಳ್ಳುತ್ತಿದ್ದರು. ಅದರಲ್ಲೂ ವೋಲ್ವೊ ಬಸ್‌ಗಳನ್ನು ಹತ್ತಲು ಪೈಪೋಟಿ ಇತ್ತು. ಬಹುತೇಕ ಬಸ್‌ಗಳಲ್ಲಿ ಭರ್ತಿಯಾಗಿ ಜನ ಪ್ರಯಾಣಿಸಿದರು.

‘ಬಿಎಂಟಿಸಿ ಬಸ್ ಪ್ರಯಾಣ ಉಚಿತ, ರಸ್ತೆಯಲ್ಲಿ ಬಸ್‌ಗಳೇ ಇಲ್ಲ’ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ಈ ಆರೋಪವನ್ನು ಅಲ್ಲಗಳೆದಿರುವ ಬಿಎಂಟಿಸಿ ಅಧಿಕಾರಿಗಳು, ‘ಫಲಪುಷ್ಪ ಪ್ರದರ್ಶನ ಮತ್ತು ಕಾಂಗ್ರೆಸ್‌ನಿಂದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮ ಇದ್ದುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಸಾಮಾನ್ಯವಾಗಿ 27 ಲಕ್ಷ ಜನ ಪ್ರಯಾಣಿಸುತ್ತಾರೆ, ಸೋಮವಾರ ಪ್ರಯಾಣಿಕರ ಸಂಖ್ಯೆ 35 ಲಕ್ಷಕ್ಕೆ ಏರಿಕೆಯಾಗಿತ್ತು. ಬಸ್‌ಗಳ ಸಂಖ್ಯೆ ಕಡಿಮೆ ಮಾಡಿಲ್ಲ. ಎಂದಿನಂತೆ 5,260 ಬಸ್‌ಗಳು ಕಾರ್ಯಾಚರಣೆ ಮಾಡಿವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು