ಶನಿವಾರ, ಫೆಬ್ರವರಿ 29, 2020
19 °C
43ನೇ ಭಾರತೀಯ ಸಮಾಜ ವಿಜ್ಞಾನ ಕಾಂಗ್ರೆಸ್‌: ವಿಜ್ಞಾನಿ ರೊದ್ದಂ ನರಸಿಂಹ ಅಭಿಮತ

‘ಕಡಿಮೆ ವೆಚ್ಚದ ತಂತ್ರಜ್ಞಾನ ದೇಶದ ಹಿರಿಮೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಶೋಧನೆ, ತಾಂತ್ರಿಕ ಪ್ರಗತಿಯಲ್ಲಿ ಅಮೆರಿಕ, ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಹಿಂದೆ ಬಿದ್ದಿರಬಹುದು, ಆದರೆ ಇಲ್ಲೂ ಪ್ರತಿಭೆಗಳಿವೆ, ಕಡಿಮೆ ವೆಚ್ಚದ ತಂತ್ರಜ್ಞಾನದಿಂದಲೇ ಭಾರತ ಜಗತ್ತಿನ ಗಮನ ಸೆಳೆದಿದೆ ಎಂದು ಹಿರಿಯ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ಹೇಳಿದರು.

ಭಾರತೀಯ ಸಮಾಜ ವಿಜ್ಞಾನ ಅಕಾಡೆಮಿಯು (ಐಎಸ್‌ಎಸ್ಎ) ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರದಿಂದ ಆರಂಭವಾದ 43ನೇ ಭಾರತೀಯ ಸಮಾಜ ವಿಜ್ಞಾನ ಕಾಂಗ್ರೆಸ್‌ನ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣದಲ್ಲಿ ಅವರು, ಕಡಿಮೆ ವೆಚ್ಚದಲ್ಲಿ ಉಪಗ್ರಹ ಉಡಾವಣೆ ನಮ್ಮಲ್ಲಿ ಸಾಧ್ಯವಾಗಿದೆ, ಈ ಬಗ್ಗೆ ಅಮೆರಿಕವೇ ಅಚ್ಚರಿ ವ್ಯಕ್ತಪಡಿಸಿದೆ ಎಂದರು.

ಪ್ರತಿಭೆಯನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದರಿಂದಲೇ ಅಗ್ಗದ ತಂತ್ರಜ್ಞಾನ ಸಾಧ್ಯವಾಗಿದೆ, ಆದರೆ ಇಂತಹದೇ ಸಾಧನೆ ಇನ್ನೂ ಹಲವು ಕ್ಷೇತ್ರಗಳಲ್ಲಿ ನಡೆಯಬೇಕಿದೆ, ಅಮೆರಿಕ, ಚೀನಾ ಬಿಟ್ಟರೆ ಭಾರತವೇ ಅಗ್ರಸ್ಥಾನದಲ್ಲಿರಬೇಕಿತ್ತು, ಆದರೆ ಅದು ಸಾಧ್ಯವಾಗಿಲ್ಲ, ನಮ್ಮೆಲ್ಲರ ಗುರಿ ಅದರತ್ತ ಇರಬೇಕು ಎಂದರು.

ನೂತನ ಶಿಕ್ಷಣ ನೀತಿ ‍ಪ್ರಸ್ತಾ‍‍‍ಪಿಸಿದ ಅವರು, ವಿಶ್ವವಿದ್ಯಾಲಯಗಳಿಗೆ ಸ್ವಾಯ
ತ್ತತೆ ನೀಡುವ ಸಲಹೆ ಸ್ವಾಗತಾರ್ಹ, ವಿಶ್ವವಿದ್ಯಾಲಯಗಳಲ್ಲಿ ದೊಡ್ಡ ಮಟ್ಟದಲ್ಲಿ ಸಂಶೋಧನೆ ಆಗಬೇಕು ಎಂದರು.

ಸಮಾಜ–ವಿಜ್ಞಾನ ಜತೆಗೆ ಸಾಗಲಿ:  ಉತ್ತಮ ಬದುಕಿಗೆ ಸಮಾಜ ವಿಜ್ಞಾನದ ಸಂಶೋಧನೆ ಅಗತ್ಯ, ವಿಜ್ಞಾನ ಮತ್ತು ಸಮಾಜ ಜತೆ ಜತೆಯಾಗಿ ಮುನ್ನಡೆಯಬೇಕು, ಇಂತಹ ಸಮಾವೇಶ ಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಜಾರಿಗೆ ತರುವ ಪ್ರಯತ್ನ ನಡೆಯಬೇಕು ಎಂದು ಸಮಾವೇಶ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಐಎಸ್ಎಸ್‌ಎ ಅಧ್ಯಕ್ಷ ಪ್ರೊ.ಬೈಷ್ಣಬ್‌ ಸಿ.ತ್ರಿಪಾಠಿ ಮಾತನಾಡಿ, ದೇಶದಲ್ಲಿ ಪ್ರತಿದಿನ 10 ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಪ್ರತಿ ವರ್ಷ 15 ಲಕ್ಷ ಮಕ್ಕಳು ತಮ್ಮ ಮೊದಲ ಹುಟ್ಟುಹಬ್ಬವನ್ನು ಕಾಣದೆ ಅಸು ನೀಗುತ್ತಿದ್ದಾರೆ, ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸೂರ್ಯಪ್ರಕಾಶ್‌ ವಿಂಜಮುರಿ–ಸಮವೇದಂ ವೆಂಕಟ ಕಾಮೇಶ್ವರಿ ದಂಪತಿ, ಎಸ್‌.ಜಿ.ಒಂಬತ್ತುಕೆರೆ, ಜೆ.ರವೀಂದ್ರನಾಥ ಮತ್ತು ಇ.ಜೈಸಲ್‌ ಅವರಿಗೆ ಐಎಸ್ಎಸ್ಎ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಕುಲಪತಿ ಪ್ರೊ.ಎಸ್‌.ಜಾಫೆಟ್‌, ಐಎಸ್‌ಎಸ್‌ಎ ಪ್ರಧಾನ ಕಾರ್ಯದರ್ಶಿ ಪ್ರೊ.ಡಿ.ಎಂ.ದಿವಾನಕರ್‌ ಇದ್ದರು. ಇದೇ 21ರ ವರೆಗೆ ಸಮಾವೇಶ ನಡೆಯಲಿದ್ದು, 700ಕ್ಕೂ ಅಧಿಕ ಪ್ರಬಂಧಗಳನ್ನು ಮಂಡಿಸಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು