ಶುಕ್ರವಾರ, ಸೆಪ್ಟೆಂಬರ್ 17, 2021
24 °C
ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸರಳವಾಗಿ ಆಚರಣೆ * ಕೋವಿಡ್ ಗುಣಮುಖರ ಸನ್ಮಾನಕ್ಕೆ ನಿರ್ಧಾರ

ಸ್ವಾತಂತ್ರ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ನಗರದ ಮಾಣೆಕ್ ಷಾ ಪರೇಡ್‌ ಮೈದಾನ ಸಜ್ಜುಗೊಂಡಿದೆ. ಕೋವಿಡ್ ಕಾರಣದಿಂದ ಈ ಬಾರಿಯೂ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. 100 ಕೊರೊನಾ ಸೇನಾನಿಗಳು ಹಾಗೂ ಕೋವಿಡ್‌ನಿಂದ ಗುಣಮುಖರಾಗಿರುವ 25 ಮಂದಿಯನ್ನು ಆಹ್ವಾನಿಸಿ ಸನ್ಮಾನಿಸಲಿರುವುದು ಈ ಬಾರಿಯ ವಿಶೇಷ.

‘ಕೋವಿಡ್‌ ಕಾರಣದಿಂದ ಸರಳ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು. ಅಲ್ಲದೆ, ಸುರಕ್ಷತೆಗೆ ಆದ್ಯತೆ ನೀಡಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈದಾನಕ್ಕೆ ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆ ಬಳಿಕ ಪರೇಡ್ ವಂದನೆ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವ ಸಂದೇಶ ನೀಡಲಿದ್ದಾರೆ ಎಂದರು.

ಸಾರ್ವಜನಿಕರಿಗೆ ಪ್ರವೇಶವಿಲ್ಲ:

‘ಈ ಬಾರಿಯೂ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೈಬಿಡಲಾಗಿದೆ. 20 ತುಕಡಿಗಳಿಂದ ಪಥಸಂಚಲನ ನಡೆಯಲಿದ್ದು,  ದೂರದರ್ಶನದಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ’ ಎಂದು ವಿವರಿಸಿದರು.

ಅತಿಗಣ್ಯರು, ಗಣ್ಯರು, ವಿಶೇಷ ಆಹ್ವಾನಿತರಿಗಾಗಿ 1000 ಆಸನ, ವೇದಿಕೆ ಸಿದ್ಧಪಡಿಸಲಾಗಿದೆ. ಪ್ರತಿ ಬಾರಿ 30ಕ್ಕೂ ಹೆಚ್ಚು ತುಕಡಿಗಳಿಂದ ಪಥ ಸಂಚಲನ ನಡೆಯುತ್ತಿತ್ತು. ಈ ಬಾರಿ 20 ತುಕಡಿಗಳಿಂದ 450 ಮಂದಿ ಮಾತ್ರ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ ಎಂದು ಗೌರವ್ ಗುಪ್ತ ತಿಳಿಸಿದರು.
 

ಬಿಗಿ ಭದ್ರತೆ:

‘ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಆಯುಕ್ತರ ನೇತೃತ್ವದಲ್ಲಿ 10 ಜನ ಡಿಸಿಪಿಗಳನ್ನು ಹಾಗೂ ಕೆಎಸ್ಆರ್‌ಪಿ, ಸಿಎಆರ್, ಸಿಆರ್‌ಟಿ,  ಕೆಎಸ್ಎಫ್, ಕೆಐಎಸ್ಎಫ್ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಭಾಗವಹಿಸುವ ಎಲ್ಲರಿಗೂ ಮಾಸ್ಕ್ ಕಡ್ಡಾಯ. ಪಾಸ್ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿದರು.

‘ಮೈದಾನದ ಸುತ್ತಮುತ್ತ ಪ್ರದೇಶದಲ್ಲಿ ಸೂಕ್ಷ್ಮವಾಗಿ ನಿಗಾ ವಹಿಸಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಗೂ ಬ್ಯಾರಿಕೇಡ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ. ಯಾವುದೇ ವಿಪತ್ತು ಸಂಭವಿಸಿದಲ್ಲಿ ತುರ್ತು ಸೇವೆಗಾಗಿ ಅಗ್ನಿಶಾಮಕ ಹಾಗೂ ಆಂಬುಲೆನ್ಸ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸೇರಿದಂತೆ ಇನ್ನಿತರೆ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು