ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ವಿದೇಶದಿಂದ ಮರಳಿದವರಿಗೆ ಸೋಂಕು

ಸೋಂಕಿತರ ಸಂಖ್ಯೆ 357ಕ್ಕೆ ಏರಿಕೆ *21 ಮಂದಿಗೆ ಕೊರೊನಾ
Last Updated 31 ಮೇ 2020, 21:28 IST
ಅಕ್ಷರ ಗಾತ್ರ

ಬೆಂಗಳೂರು: ಗರ್ಭಿಣಿ, ಪೊಲೀಸ್ ಸಿಬ್ಬಂದಿ ಸೇರಿದಂತೆ 21 ಮಂದಿಗೆ ಭಾನುವಾರ ಒಂದೇ ದಿನ ಕೊರೊನಾ ಸೋಂಕು ತಗುಲಿದ್ದು, ನಗರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 357ಕ್ಕೆ ಏರಿಕೆಯಾಗಿದೆ.

ನಗರದಲ್ಲಿ 48 ಗಂಟೆಗಳಲ್ಲಿ 54 ಪ್ರಕರಣಗಳು ವರದಿಯಾಗಿವೆ. ಎಸ್‌.ಕೆ.ಗಾರ್ಡನ್‌ನ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ಮಹಿಳೆಯ (ರೋಗಿ 2180) ಸಂಪರ್ಕದಿಂದ ಮತ್ತೊಬ್ಬರು ಸೋಂಕಿತರಾಗಿದ್ದಾರೆ. ಇದರಿಂದಾಗಿ ಅಲ್ಲಿ ಮಹಿಳೆಯ ಸಂಪರ್ಕದಿಂದ ಸೋಂಕಿತರಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 33 ವರ್ಷದ ಕಾನ್‌ಸ್ಟೆಬಲ್‌ಗೂ ಸೋಂಕು ತಗುಲಿದೆ.

ಯಲಹಂಕದ ನ್ಯೂ ಟೌನ್‌ನ ಸಂಗಪ್ಪ ಬಡಾವಣೆಯ 9 ತಿಂಗಳ ಗರ್ಭಿಣಿ ಸೋಂಕಿತರಾಗಿದ್ದಾರೆ. ಅವರು ಸ್ವಯಂಪ್ರೇರಿತರಾಗಿ ಆಸ್ಪತ್ರೆಗೆ ತೆರಳಿ, ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಮಾಡಿಸಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.ಗದಗದ 51 ವರ್ಷದ ವ್ಯಕ್ತಿ ಇಂಡೊನೇಷ್ಯಾದಿಂದ ಕೆಲ ದಿನಗಳ ಹಿಂದೆ ವಾಪಸ್ ಆಗಿದ್ದರು. ಅವರನ್ನು ನಗರದ ಹಜ್ ಭವನದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅವರಿಗೂ ಈಗ ಸೋಂಕು ತಗುಲಿರುವುದು ಕೋವಿಡ್‌ ಪರೀಕ್ಷೆಯಿಂದ ದೃಢಪಟ್ಟಿದೆ. ನಾಗರಬಾವಿಯ ತೆರಿಗೆ ಭವನ ರಸ್ತೆ ಬಳಿಯ ನಿವಾಸಿ ದೋಹಾದಿಂದ ವಾಪಸ್ ಆಗಿದ್ದರು. ಅವರನ್ನುಯಶವಂತಪುರದ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಿ, ‌ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈಗ ಅವರು ಸೋಂಕಿತರಾಗಿದ್ದಾರೆ.

ದೋಹಾದಿಂದ ಕೆಲ ದಿನಗಳ ಹಿಂದೆ ವಾಪಸ್ ಆಗಿ, ಹೋಟೆಲ್ ಕ್ವಾರಂಟೈನ್‌ಗೆಒಳಗಾಗಿದ್ದ 25 ವರ್ಷದ ಯುವತಿಗೂ ಸೋಂಕು ತಗುಲಿದೆ. ಅವರು ಚನ್ನಸಂದ್ರ ಹೊರಮಾವು ನಿವಾಸಿಯಾಗಿದ್ದಾರೆ. ಮಹಾರಾಷ್ಟ್ರದಿಂದ ಹಿಂದಿರುಗಿ, ಕ್ವಾರಂಟೈನ್‌ನಲ್ಲಿದ್ದ 39 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಅವರು ಕೆ.ಆರ್.ಪೇಟೆ ನಿವಾಸಿಯಾಗಿದ್ದಾರೆ.ಮಡಿಕೇರಿಗೆ ಪ್ರಯಾಣ ಮಾಡಿ ವಾಪಸ್ ಆಗಿದ್ದ ನಗರದ 43 ವರ್ಷದ ಪುರುಷನಿಗೆ ಸೋಂಕು ಖಚಿತವಾಗಿದೆ. ಅವರ ಸಂಪರ್ಕಿತರನ್ನು ಪತ್ತೆ ಮಾಡಲಾಗುತ್ತಿದೆ. ರಾಜಾಜಿನಗರ ಇ ಬ್ಲಾಕ್‌ನ ಕ್ಯಾನ್ಸರ್ ರೋಗಿಯೊಬ್ಬರಿಗೆ ಸೋಂಕು ತಗುಲಿದೆ.

59 ಮಂದಿ ಒಂದೇ ದಿನ ಗುಣಮುಖ
ನಗರದಲ್ಲಿ ಭಾನುವಾರ ಒಂದೇ ದಿನ 59 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈವರೆಗೆ ಒಂದು ದಿನ ಗುಣಮುಖರಾದವರಲ್ಲಿ ಅತ್ಯಧಿಕ ಸಂಖ್ಯೆ ಇದಾಗಿದೆ. ಎರಡುದಿನಗಳಲ್ಲಿ 80 ಮಂದಿ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಮನೆಗೆ ತೆರಳಿದವರ ಸಂಖ್ಯೆ 231ಕ್ಕೆ ತಲುಪಿದೆ.

‘ನಗರದಲ್ಲಿ ಸೋಂಕಿತರು ಬೇಗ ಗುಣಮುಖರಾಗುತ್ತಿದ್ದಾರೆ. ಅನ್ಯ ರಾಜ್ಯಗಳಿಂದ ಬಂದವರು ಹೆಚ್ಚಾಗಿ ಸೋಂಕಿತರಾಗುತ್ತಿದ್ದಾರೆ. ಅವರನ್ನು ಕ್ವಾರಂಟೈನ್‌ನಲ್ಲಿಯೇ ಇರಿಸುವ ಪರಿಣಾಮ ಇನ್ನೊಬ್ಬರಿಗೆ ಸೋಂಕು ಹರಡಲು ಅವಕಾಶ ಇರುವುದಿಲ್ಲ. ಮನೆಯ ಕ್ವಾರಂಟೈನ್‌ಗೆ ಒಳಗಾದವರು ಕೂಡ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು. ಸುತ್ತಮುತ್ತಲಿನ ನಿವಾಸಿಗಳು ನಿಗಾ ಇಟ್ಟು, ನಿಯಮ ಉಲ್ಲಂಘಿಸಿದದವರ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದರು.

ಅಧಿಕಾರಿ ಪತ್ನಿಗೆ ಸೋಂಕು
ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಕಂದಾಯ ಅಧಿಕಾರಿಯೊಬ್ಬರ ಪತ್ನಿಗೆ ಸೋಂಕು ತಗುಲಿದೆ. ಅವರು ಸುಭಾಷ್ ನಗರ ವಾರ್ಡ್‌ನ ಶ್ರೀರಾಂಪುರದ ನಿವಾಸಿಯಾಗಿದ್ದು, ಕ್ಯಾನ್ಸರ್ ಬಳಲುತ್ತಿದ್ದಾರೆ. ಅವರು ಎಚ್‌ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿ ಸೇರಿದಂತೆ ಆರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಗುರಪ್ಪನಪಾಳ್ಯದ ದಂತ ವೈದ್ಯರೊಬ್ಬರಿಗೆ ಸೋಂಕು ತಗುಲಿದೆ. ಅವರುಇಂದಿರಾನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋರಮಂಗಲದ ಆಸ್ಪತ್ರೆಯೊಂದರಲ್ಲಿ ತಪಾಸಣೆ ಮಾಡಿಸಿದ್ದರು. ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ. ಪದ್ಮನಾಭನಗರದ ತರಕಾರಿ ವ್ಯಾಪಾರಿ ಒಬ್ಬರು ಸೋಂಕಿತರಾಗಿದ್ದು, ಅವರ ಸಂಪರ್ಕಿತರನ್ನು ಪತ್ತೆ ಮಾಡಲಾಗುತ್ತಿದೆ.

ಮತ್ತೆ ಏಳು ವಾರ್ಡ್‌ಗಳಲ್ಲಿಕಂಟೈನ್‌ಮೆಂಟ್‌ ಪ್ರದೇಶ
ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ ಏಳು ಹೊಸದಾಗಿ ನಿಯಂತ್ರಿತ (ಕಂಟೈನ್‌ಮೆಂಟ್‌) ಪ್ರದೇಶಗಳನ್ನು ಗುರುತಿಸಲಾಗಿದೆ. ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಹೊಂದಿರುವ ವಾರ್ಡ್‌ಗಳ ಸಂಖ್ಯೆ 31ಕ್ಕೆ ಏರಿಕೆ ಆಗಿದೆ. ದಾಸರಹಳ್ಳಿ ವಲಯದಲ್ಲೂ ಮೊದಲ ಕಂಟೈನ್‌ಮೆಂಟ್‌ ಪ್ರದೇಶವನ್ನು ಗುರುತಿಸಲಾಗಿದೆ.

ಬೊಮ್ಮನಹಳ್ಳಿ ವಲಯದಲ್ಲಿ ಎಚ್‌ಎಸ್‌ಆರ್‌ ಬಡಾವಣೆ ಮತ್ತು ಬೊಮ್ಮನಹಳ್ಳಿ ವಾರ್ಡ್‌, ಮಹದೇವಪುರ ವಲಯದ ಕಾಡುಗೋಡಿ, ಪೂರ್ವ ವಲಯದ ಅಗರ, ದಕ್ಷಿಣ ವಲಯದ ಸಿದ್ದಾಪುರ, ಹೊಸಹಳ್ಳಿ ಹಾಗೂ ದಾಸರಹಳ್ಳಿ ವಲಯದ ಚೊಕ್ಕಸಂದ್ರ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸಿರುವ ಹೊಸ ವಾರ್ಡ್‌ಗಳು. ಈ ನಡುವೆ ಇತ್ತೀಚೆಗೆ ಕೋವಿಡ್‌–19ರ ಯಾವುದೇ ಹೊಸ ಪ್ರಕರಣ ಕಾಣಿಸಿಕೊಳ್ಳದ ಕಾರಣ ಪಶ್ಚಿಮ ವಲಯದ ಕೆ.ಆರ್‌.ಮಾರುಕಟ್ಟೆ ವಾರ್ಡ್‌ನಲ್ಲಿ ಕಂಟೈನ್‌ಮೆಂಟ್‌ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.

ಬೇಗೂರು ವಾರ್ಡ್‌ ಹಾಗೂ ಬಿಟಿಎಂ ಬಡಾವಣೆಯ ಕಂಟೈನ್‌ಮೆಂಟ್‌ ಅವಧಿ ಸೋಮವಾರ ಕೊನೆಗೊಳ್ಳಲಿದೆ. ಹೊಸ ಪ್ರಕರಣ ಕಾಣಿಸದಿದ್ದರೆ ಇವುಗಳೂ ಬುಧವಾರದಿಂದ ಪಟ್ಟಿಯಿಂದ ಹೊರಗುಳಿಯಲಿವೆ.

198 ವಾರ್ಡ್‌ಗಳಲ್ಲಿ ಇದುವರೆಗೆ 59 ವಾರ್ಡ್‌ಗಳಲ್ಲಿ ಕೋವಿಡ್‌–19 ಸೋಂಕು ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT