ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ ನೆರವು-: ಜಯದೇವ ಮತ್ತಷ್ಟು ವಿಶಾಲ

ಸಜ್ಜಾಗಿದೆ ಇನ್ಫೊಸಿಸ್‌ ಫೌಂಡೇಷನ್‌ ಸಂಕೀರ್ಣ l ಜಗತ್ತಿನ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆಯಾಗುತ್ತಿದೆ ಜಯದೇವ
Last Updated 18 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಫೊಸಿಸ್‌ ಪ್ರತಿಷ್ಠಾನವು ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ 350 ಹಾಸಿಗೆಗಳ ಸಾಮರ್ಥ್ಯದ ಹೊಸ ಕಟ್ಟಡ ಸಂಕೀರ್ಣವನ್ನು ನಿರ್ಮಿಸಿಕೊಟ್ಟಿದ್ದು,ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ‘ಇನ್ಫೊಸಿಸ್‌ ಫೌಂಡೇಷನ್‌ ಸಂಕೀರ್ಣ’ದ ಸೇರ್ಪಡೆಯೊಂದಿಗೆ ಜಯದೇವ ಆಸ್ಪತ್ರೆಯು ವಿಶ್ವದಲ್ಲೇ ಅತಿದೊಡ್ಡ ಹೃದ್ರೋಗ ಆಸ್ಪತ್ರೆಯಾಗಲಿದೆ.

ನಗರದ ಆಸ್ಪತ್ರೆಯ 700 ಹಾಸಿಗೆಗಳು, ಕಲಬುರಗಿ ಹಾಗೂ ಮೈಸೂರಿನ ಶಾಖೆಗಳ ಸೌಕರ್ಯಗಳು ಸೇರಿ ಜಯದೇವ ಸಂಸ್ಥೆಯು ಒಟ್ಟು 1,450 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸಂಕೀರ್ಣವು ಸೇವೆಗೆ ಲಭ್ಯವಾದ ಬಳಿಕ ನಗರದ ಜಯದೇವ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ 1,050ಕ್ಕೆ ಹಾಗೂ ಸಂಸ್ಥೆಯ ಹಾಸಿಗೆಗಳ ಒಟ್ಟು ಸಾಮರ್ಥ್ಯ 1800 ಕ್ಕೆ ಹೆಚ್ಚಲಿದೆ.

‘ಹೃದ್ರೋಗ ಚಿಕಿತ್ಸೆಗೆ ಸೀಮಿತವಾಗಿರುವ ಆಸ್ಪತ್ರೆಗಳಲ್ಲಿ ಗುಜರಾತ್‌ನಲ್ಲಿರುವ ಯು.ಎನ್‌.ಮೆಹ್ತಾ ಆಸ್ಪತ್ರೆ ಜಗತ್ತಿನಲ್ಲೇ ಅತಿ ದೊಡ್ಡದು. ಅಲ್ಲಿ ಚಿಕಿತ್ಸೆಗೆ 1,000 ಹಾಸಿಗೆಗಳು ಬಳಕೆಯಾಗುತ್ತಿವೆ. ಇನ್ಫೊಸಿಸ್‌ ಪ್ರತಿಷ್ಠಾನದ ಹೃದಯ ವೈಶಾಲ್ಯದಿಂದ ನಮ್ಮ ಸಂಸ್ಥೆ ಜಗತ್ತಿನ ಅತಿದೊಡ್ಡ ಹೃದ್ರೋಗ ಆಸ್ಪತ್ರೆಯಾಗುತ್ತಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು.

‘ನಮ್ಮ ಆಸ್ಪತ್ರೆಗೆ ರಾತ್ರಿಯೂ ಪ್ರತಿ ಐದು ನಿಮಿಷಕ್ಕೊಬ್ಬರಂತೆ ಹೃದ್ರೋಗಿಗಳು ತುರ್ತುಚಿಕಿತ್ಸೆಗೆ ದಾಖಲಾಗುತ್ತಾರೆ. 700 ಹಾಸಿಗೆಗಳಿದ್ದರೂ ಸಾಲುತ್ತಿಲ್ಲ. ಐಸಿಯುನಲ್ಲಿ ಹಾಸಿಗೆ ಕೊರತೆ ತೀವ್ರವಾಗಿದೆ. ಹೊಸ ಸಂಕೀರ್ಣವು ಈ ಕೊರತೆಗಳನ್ನು ನೀಗಿಸಲಿದೆ’ ಎಂದರು.

‘ಆಸ್ಪತ್ರೆಗೊಮ್ಮೆ ಭೇಟಿ ನೀಡಿದ್ದನಾರಾಯಣಮೂರ್ತಿಯವರು ರೋಗಿಗಳ ಊರು ಮತ್ತು ಆರ್ಥಿಕ ಸ್ಥಿತಿಗತಿ ತಿಳಿದುಕೊಂಡರು. ಕಡುಬಡವರಿಗೂ ಇಲ್ಲಿ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿರುವುದನ್ನು ಹಾಗೂ ಇಲ್ಲಿ ಹಾಸಿಗೆಗಳ ಕೊರತೆ ಇರುವುದನ್ನು ಗಮನಿಸಿದರು. ಇದಾದ ಮರು ದಿನವೇ ಇನ್ಫೊಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಕರೆ ಮಾಡಿ ಆಸ್ಪತ್ರೆಗೆ ಹೊಸ ಕಟ್ಟಡ ಕಟ್ಟಿಸಿಕೊಡುವ ವಿಚಾರ ತಿಳಿಸಿದರು’ ಎಂದು ಸ್ಮರಿಸುತ್ತಾರೆ ನಿರ್ದೇಶಕರು.

‘ಆರಂಭದಲ್ಲಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದ್ದ ಇನ್ಫೊಸಿಸ್ ಪ್ರತಿಷ್ಠಾನವು ಬಳಿಕ 350 ಹಾಸಿಗೆಗಳ ಆಸ್ಪತ್ರೆಯನ್ನು ಕಟ್ಟಿಸಿಕೊಟ್ಟಿದೆ. 2019 ರಲ್ಲಿ ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಹೊಸ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕೋವಿಡ್‌ ಸಾಂಕ್ರಾಮಿಕ, ಲಾಕ್‌ಡೌನ್‌ಗಳ ನಡುವೆಯೂ ಕಾಮಗಾರಿ ಅಲ್ಪಾವಧಿಯಲ್ಲಿ ಪೂರ್ಣಗೊಂಡಿದೆ. ಕೇವಲ 36 ಗುಂಟೆ ಜಾಗದಲ್ಲಿ ನಾಲ್ಕು ಮಹಡಿಗಳ ಹಾಗೂ 1.8 ಲಕ್ಷ ಚದರ ಅಡಿ ವಿಸ್ತೀರ್ಣದ ಆಸ್ಪತ್ರೆ ನಿರ್ಮಾಣ
ವಾಗಿರುವುದು ಎಂಜಿನಿಯರಿಂಗ್‌ ಪವಾಡ ಎನ್ನಬಹುದು’ ಎಂದು ಹೇಳಿದರು.

‘ಹೊಸ ಕಟ್ಟಡದ ಎರಡು ಕ್ಯಾಥ್‌ಲ್ಯಾಬ್‌ಗಳೂ ಸೇರಿ ಸಂಸ್ಥೆಯ ಕ್ಯಾಥ್‌ಲ್ಯಾಬ್‌ಗಳ ಸಂಖ್ಯೆ 15ಕ್ಕೆ ಹೆಚ್ಚಲಿದೆ. 2,500ಕ್ಕೂ ಅಧಿಕ ಹೊರರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಈ ಕಟ್ಟಡವನ್ನು ನವೆಂಬರ್‌ನಲ್ಲಿ ಲೋಕಾರ್ಪಣೆಗೊಳಿಸಲು ಸಜ್ಜಾಗಿದ್ದೇವೆ’ ಎಂದರು.

ವರ್ಷದಲ್ಲಿ 40 ಸಾವಿರ ಮಂದಿಗೆ ಚಿಕಿತ್ಸೆ: ಪ್ರತಿ ವರ್ಷ 40 ಸಾವಿರಕ್ಕೂ ಹೆಚ್ಚು ರೋಗಿಗಳು ಜಯದೇವದಲ್ಲಿ ಆ್ಯಂಜಿಯೊಗ್ರಾಮ್‌, ಆ್ಯಂಜಿಯೋಪ್ಲಾಸ್ಟಿ, ಪೇಸ್‌ಮೇಕರ್‌ ಚಿಕಿತ್ಸೆ ಪಡೆಯುತ್ತಾರೆ. ದೇಶದಲ್ಲೇ ಅತಿ ಹೆಚ್ಚು ಕ್ಯಾಥ್‌ಲ್ಯಾಬ್‌ ಪ್ರಕ್ರಿಯೆಗಳನ್ನು ನಡೆಸುವ ಆಸ್ಪತ್ರೆಯಿದು. ನಿತ್ಯವೂ ಇಲ್ಲಿ 150 ರಿಂದ 175 ಆ್ಯಂಜಿಯೋಗ್ರಾಮ್‌ ಹಾಗೂ ಆ್ಯಂಜಿಯೊಪ್ಲಾಸ್ಟಿಗಳು, 20ಕ್ಕೂ ಹೆಚ್ಚು ತೆರೆದ ಹೃದಯದ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಸಂಸ್ಥೆಯು 12 ವರ್ಷಗಳಲ್ಲಿ 350ಕ್ಕೂ ಅಧಿಕ ಹೃದ್ರೋಗ ತಜ್ಞರು ಮತ್ತು ಹೃದಯ ಶಸ್ತ್ರಚಿಕಿತ್ಸಕರನ್ನು ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT