ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಮೆಟ್ರೊ’ ಹಳದಿ ಮಾರ್ಗ: ವಯಾಡಕ್ಟ್‌ನಲ್ಲಿ ಪರಿಶೀಲನೆ ಕಾರ್ಯ

ವಾಣಿಜ್ಯ ಸಂಚಾರ ಆರಂಭಿಸಲು ಮೊದಲ ಹಂತದ ಸಿದ್ಧತೆ
ಆದಿತ್ಯ ಕೆ.ಎ.
Published 23 ಮೇ 2024, 0:58 IST
Last Updated 23 ಮೇ 2024, 0:58 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ದ ಹಳದಿ ಮಾರ್ಗ ರೀಚ್‌–5ರ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದ ವರೆಗೆ ಸಿವಿಲ್‌ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಈ ಮಾರ್ಗದ ವಯಾಡಕ್ಟ್‌ನಲ್ಲಿ ಪರೀಕ್ಷಾರ್ಥ
ವಾಗಿ ವಿದ್ಯುತ್‌ ಹರಿಸಿ ಪರಿಶೀಲಿಸುವ ಕಾರ್ಯ ಆರಂಭವಾಗಿದೆ.

ಈ ಪರೀಕ್ಷಾರ್ಥ ಕೆಲಸದಿಂದ ಹಳದಿ ಮಾರ್ಗದಲ್ಲಿ ಕೊನೆಗೂ ಮೆಟ್ರೊ ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆಗಳು ಗರಿಗೆದರಿವೆ. ಹಳದಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾದರೆ ಜಯದೇವ, ಎಲೆಕ್ಟ್ರಾನಿಕ್‌ ಸಿಟಿ, ಕೂಡ್ಲುಗೇಟ್‌ ಭಾಗದಲ್ಲಿ ವಾಹನ ದಟ್ಟಣೆ ತಗ್ಗುವ ಸಾಧ್ಯತೆಯಿದೆ.

‘ಕಳೆದ ಡಿಸೆಂಬರ್‌ನಲ್ಲೇ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಆಲೋಚನೆಯಲ್ಲಿ ಬಿಎಂಆರ್‌ಸಿಎಲ್‌ ಇತ್ತು. ಆದರೆ, ಚಾಲಕ ರಹಿತ ಬೋಗಿಗಳ ಪೂರೈಕೆ, ಸಿವಿಲ್‌ ಕಾಮಗಾರಿ ವಿಳಂಬದಿಂದ ಅದು ಸಾಧ್ಯ ವಾಗಿರಲಿಲ್ಲ. ಅಂದುಕೊಂಡಂತೆ ಎಲ್ಲವೂ ಕಾರ್ಯ ಸಾಧ್ಯವಾದರೆ ಅಕ್ಟೋಬರ್ ಅಥವಾ ನವೆಂಬರ್‌ ಅಂತ್ಯದ ವೇಳೆಗೆ ವಾಣಿಜ್ಯ ಸಂಚಾರ ಆರಂಭಿಸುತ್ತೇವೆ. ಆಗಸ್ಟ್‌ ಅಂತ್ಯದ ವೇಳೆಗೆ ಎಲ್ಲ ಬೋಗಿಗಳ ಪೂರೈಕೆ ಆಗಲಿದೆ’ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ ಬಿಟಿಎಂ ಲೇಔಟ್ ನಿಲ್ದಾಣದ ಪ್ಲಾಟ್‌ಫಾರ್ಮ್‌, ಜಯದೇವ ನಿಲ್ದಾಣ, ರಾಗಿಗುಡ್ಡ ನಿಲ್ದಾಣ, ಆರ್‌.ವಿ.ರಸ್ತೆ ನಿಲ್ದಾಣದ ಬಫರ್‌ ಕೊನೆಯವರೆಗೆ ಹಾದು ಹೋಗಿರುವ 33 ಕೆವಿ ಕೇಬಲ್‌ಗಳು ಹಾಗೂ ವಯಾಡಕ್ಟ್ 750 ವೋಲ್ಟ್‌ ಡಿಸಿ ಥರ್ಡ್‌ ರೈಲು ಭಾಗಗಳಲ್ಲಿ ಪರೀಕ್ಷಾರ್ಥವಾಗಿ ವಿದ್ಯುತ್‌ ಹರಿಸಲಾಗುತ್ತಿದೆ. ಇದಾದ ಮೇಲೆ ಬೊಮ್ಮಸಂದ್ರ, ಹೆಬ್ಬಗೋಡಿ, ಇನ್ಫೊಸಿಸ್‌ ನಿಲ್ದಾಣ, ಎಲೆಕ್ಟ್ರಾನಿಕ್‌ ಸಿಟಿ ಸೇರಿ ಹಳದಿ ಮಾರ್ಗದ ವಯಾಡಕ್ಟ್‌ನಲ್ಲಿ ಪರೀಕ್ಷಾರ್ಥ ವಾಗಿ ವಿದ್ಯುತ್‌ ಹರಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಇದಕ್ಕೂ ಮೊದಲು ಚಾಲಕ ರಹಿತ ಮೆಟ್ರೊ ರೈಲಿನ ಕೆಲವು ಬೋಗಿಗಳನ್ನು ಜನರೇಟರ್‌ ಸಹಾಯದಿಂದ ಪರೀಕ್ಷಾರ್ಥವಾಗಿ ಓಡಿಸಲಾಗಿತ್ತು. ವಿದ್ಯುದ್ದೀಕರ ಣವಾದ ಮೇಲೆ ಮತ್ತೆ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಲಿದೆ ಎಂದು ಸಿಬ್ಬಂದಿ ಹೇಳುತ್ತಾರೆ.

ಹಳದಿ ಮಾರ್ಗ ಹಲವು ವಿಶೇಷತೆಯಿಂದ ಕೂಡಿದೆ. ಈ ಮಾರ್ಗದಲ್ಲಿ ಸಂಚಾರ ಆರಂಭವಾದರೆ ನೇರಳೆ, ಹಸಿರು ನಂತರದ ಮಾರ್ಗ ಇದಾಗಲಿದೆ. ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ 3.3 ಕಿ.ಮೀ. ಉದ್ದ ಒಂದೇ ಪಿಲ್ಲರ್‌ಗೆ ರೋಡ್ ಕಂ ರೇಲ್‌ (ಡಬಲ್ ಡೆಕ್ಕರ್) ಸೇತುವೆ ನಿರ್ಮಿಸಲಾಗಿದೆ. ಮೊದಲ ಮಟ್ಟದಲ್ಲಿ ರಸ್ತೆಯಿದ್ದು, ಎರಡು ಮಾರ್ಗ ಒಳಗೊಂಡಿದೆ. ಎರಡನೇ ಮಟ್ಟದಲ್ಲಿ ಮೆಟ್ರೊ ರೈಲು ಸಂಚಾರ ಇರಲಿದೆ. ನೆಲದಲ್ಲಿರುವ ರಸ್ತೆಯಲ್ಲಿ ಸದ್ಯವಿರುವ ತ್ರಿಪಥ ರಸ್ತೆ ಮಾರ್ಗವಿದ್ದು, ಮೆಟ್ರೊ ಸಂಚಾರ ಆರಂಭವಾಗದ ಕಾರಣ ‘ಡಬಲ್‌ ಡೆಕ್ಕರ್’ ರಸ್ತೆಯನ್ನು ಸದ್ಯ ಬಂದ್ ಮಾಡಲಾಗಿದೆ.

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ ಕಾಮಗಾರಿ 2017ರಲ್ಲಿ ಆರಂಭಗೊಂಡಿತ್ತು. ವಿಶೇಷ ವಿನ್ಯಾಸ ನಡೆಸುವ ಕಾರಣಕ್ಕೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಸಿಲ್ಕ್‌ ಬೋರ್ಡ್‌ನಲ್ಲಿ ಪಾದಚಾರಿ ಮಾರ್ಗ ಪ್ರಗತಿಯಲ್ಲಿದೆ. ಜಯದೇವ, ಇನ್ಫೊಸಿಸ್‌ ಸೇರಿದಂತೆ ಕೆಲವು ನಿಲ್ದಾಣ
ಗಳಲ್ಲಿ ಸಣ್ಣಪುಟ್ಟ ಕಾಮಗಾರಿ ಮಾತ್ರ ಬಾಕಿಯಿದೆ. ಜಯದೇವದಲ್ಲಿ ಇಂಟರ್‌ಚೇಂಜ್‌ ನಿಲ್ದಾಣವು
6 ಹಂತದಲ್ಲಿ ನಿರ್ಮಾಣಗೊಂಡಿದೆ.

ಬಿಎಂಆರ್‌ಸಿಎಲ್‌ನ 2ನೇ ಇಂಟರ್‌ ಚೇಂಜ್‌ ನಿಲ್ದಾಣವೆಂಬ ಹೆಗ್ಗಳಿಕೆಗೂ ಈ ನಿಲ್ದಾಣ ಪಾತ್ರವಾಗಲಿದೆ. ಮೆಜೆಸ್ಟಿಕ್‌ಗಿಂತ ವಿಸ್ತಾರವಾದ ನಿಲ್ದಾಣ ಇದಾಗಲಿದೆಯೆಂದು ಮೂಲಗಳು ತಿಳಿಸಿವೆ.

ಅನುಮತಿ ಇಲ್ಲದೇ ವಯಾಡಕ್ಟ್‌ ಹತ್ತಿರ ಯಾರೂ ಸುಳಿಯಬಾರದು. ಕೇಬಲ್‌ ಅಥವಾ ವಯಾಡಕ್ಟ್‌ ಅನ್ನು ನೇರವಾಗಿ ಸಂಪರ್ಕಿಸಿದರೆ ಅಪಾಯ ಉಂಟು ತರುವ ಸಾಧ್ಯತೆಯಿದೆ
ಬಿಎಂಆರ್‌ಸಿಎಲ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT