ಶುಕ್ರವಾರ, ಅಕ್ಟೋಬರ್ 30, 2020
25 °C

ಜೂಜಾಟ: ಇನ್‌ಸ್ಪೆಕ್ಟರ್, ಹೆಡ್ ಕಾನ್‌ಸ್ಟೆಬಲ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೋಟೆಲೊಂದರಲ್ಲಿ ನಡೆಯುತ್ತಿದ್ದ ಜೂಜಾಟದ ವಿರುದ್ಧ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಮಹದೇವಪುರ ಠಾಣೆ ಇನ್‌ಸ್ಪೆಕ್ಟರ್ ಅಶ್ವತ್ಥನಾರಾಯಣ ಸ್ವಾಮಿ ಹಾಗೂ ಹೆಡ್ ಕಾನ್‌ಸ್ಟೆಬಲ್ ಜಯಕಿರಣ್‌ ಅವರನ್ನು ಅಮಾನತು ಮಾಡಲಾಗಿದೆ.

ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೋಮವಾರ ಆದೇಶ ಹೊರಡಿಸಿದ್ದಾರೆ.

‘ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿರುವ ದೊಡ್ಡನೆಕ್ಕುಂದಿಯ ‘ಬೆಂಗಳೂರು ಇನ್‌’ ಹೋಟೆಲ್‌ನಲ್ಲಿ ಜೂಜಾಟ ನಡೆಯುತ್ತಿತ್ತು. ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿದ್ದರೂ ಮಾಹಿತಿ ಸಂಗ್ರಹಿಸದೇ ಇನ್‌ಸ್ಪೆಕ್ಟರ್ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಕೃತ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಬ್ಬರು ಕರ್ತವ್ಯ ಲೋಪ, ನಿರ್ಲಕ್ಷ್ಯ ಹಾಗೂ ದುರ್ನಡತೆ ಪ್ರದರ್ಶಿಸಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ಇಲಾಖೆ ಶಿಸ್ತು ಕ್ರಮ ಬಾಕಿ ಇರಿಸಿ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಕಮಲ್ ಪಂತ್  ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣದ ವಿವರ: ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಶಶಿ ಎಂಬಾತ, ಹೋಟೆಲ್ ನಡೆಸುತ್ತಿದ್ದ. ಹೋಟೆಲ್‌ನ ಸಭಾಂಗಣದಲ್ಲಿ ಜೂಜಾಟಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದ. ಪ್ರತಿಯೊಬ್ಬರಿಂದ ₹ 5 ಸಾವಿರ ಪ್ರವೇಶ ಶುಲ್ಕ ಪಡೆಯುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್ ನೇತೃತ್ವದ ತಂಡ ನ್ಯಾಯಾಲಯದ ವಾರಂಟ್ ಪಡೆದು ಭಾನುವಾರ ದಾಳಿ ಮಾಡಿತ್ತು.

ದಾಳಿ ಸಂದರ್ಭದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ 80 ಮಂದಿಯನ್ನು ಬಂಧಿಸಲಾಗಿತ್ತು. ಐಷಾರಾಮಿ ಕಾರುಗಳಲ್ಲಿ ಹೋಟೆಲ್‌ಗೆ ಬರುತ್ತಿದ್ದ ಆರೋಪಿಗಳು, ಜೂಜಾಟವಾಡಿ ಹೋಗುತ್ತಿದ್ದರು. ದಾಳಿ ವೇಳೆ ₹ 85 ಲಕ್ಷ ನಗದು ಹಾಗೂ 87 ಗ್ರಾಂ ಚಿನ್ನಾಭರಣ ಜಪ್ತಿ ಸಹ ಮಾಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು