ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುರಕ್ಷ ನಗರ’ ಯೋಜನೆಯ ಟೆಂಡರ್ ಪ್ರಕ್ರಿಯೆ ಪಾರದರ್ಶಕ: ನಿಂಬಾಳ್ಕರ್

ಮುಂದುವರಿದ ಪೊಲೀಸ್ ಅಧಿಕಾರಿಗಳ ಜಟಾಪಟಿ
Last Updated 27 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಿರ್ಭಯಾ ನಿಧಿ’ ಯೋಜನೆಯಡಿ ₹612 ಕೋಟಿ ವೆಚ್ಚದಲ್ಲಿ ‘ಸುರಕ್ಷ ನಗರ’ ಯೋಜನೆಯ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದ್ದು, ನನ್ನ ಮೇಲೆ ಮಾಡಲಾಗಿರುವ ಆಪಾದನೆಗಳು ಸತ್ಯಕ್ಕೆ ದೂರವಾದವು’ ಎಂದು ನಗರದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಹೇಮಂತ್ ನಿಂಬಾಳ್ಕರ್ ತಿಳಿಸಿದರು.

ಯೋಜನೆಯ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದುಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಟೀಕಿಸುತ್ತಿದ್ದಾರೆ.‌ ಟೆಂಡರ್ ಸಂಬಂಧ ರಾಜ್ಯ ಮಟ್ಟದ ಉನ್ನತ ಸಮಿತಿ, ಟೆಂಡರ್ ಆಹ್ವಾನ ಸಮಿತಿ ಹಾಗೂ ಟೆಂಡರ್ ದಾಖಲೆಗಳ ಪರಾಮರ್ಶೆ ಎಂಬ ಮೂರು ಸಮಿತಿಗಳನ್ನುಸರ್ಕಾರ ರಚಿಸಿತ್ತು’ ಎಂದು ಮಾಹಿತಿ ನೀಡಿದರು.

‘ಗುತ್ತಿಗೆಯಿಂದ ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ (ಬಿಇಎಲ್‌) ಸಂಸ್ಥೆಯನ್ನು ಕೈಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಬಿಇಎಲ್‌ ಬಿಡ್ಡಿಂಗ್‌ನಲ್ಲಿ ಭಾಗಿಯಾಗಿರಲಿಲ್ಲ. ಮೊದಲ ಹಂತದಲ್ಲಿ ಸಂಸ್ಥೆ ಟೆಂಡರ್ ಹಾಕಿರಲಿಲ್ಲ. ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದ ಮೂರೂ ಸಂಸ್ಥೆಗಳು ತಾಂತ್ರಿಕ ಹಂತದಲ್ಲಿ ಅನರ್ಹಗೊಂಡವು’ಎಂದರು.

‘ಜೂನ್ 20ರಂದು ನಡೆದ ಎರಡನೇ ಬಿಡ್ಡಿಂಗ್‌ನಲ್ಲಿ ಎಲ್ ಆ್ಯಂಡ್‌ ಟಿ, ಮ್ಯಾಟ್ರಿಕ್ಸ್ ಹಾಗೂ ಬಿಎಎಲ್ ಸಂಸ್ಥೆಗಳು ಅರ್ಹತೆ ಪಡೆದವು. ಆದರೆ, ಚೀನಾ ಉತ್ಪನ್ನಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಆದೇಶಿಸಿದ್ದರಿಂದ ಎರಡನೇ ಹಂತದ ಟೆಂಡರ್‌ ಪ್ರಕ್ರಿಯೆ ರದ್ದುಗೊಳಿಸಲಾಯಿತು. ಮೂರನೇ ಹಂತದ ಬಿಡ್ಡಿಂಗ್‌ ನ.11ರಿಂದ ಆರಂಭವಾಗಿದ್ದು,ಜ.8 ರವರೆಗೆ ಕಾಲಾವಕಾಶ ಇದೆ. ಯಾರು ಬೇಕಾದರೂ ಬಿಡ್ ಸಲ್ಲಿಸಬಹುದು’ ಎಂದು ಹೇಳಿದರು.

‘ಬಿಡ್ಡಿಂಗ್ ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ನಡೆಯುತ್ತಿದೆ. ಇದರಲ್ಲಿ ಯಾವುದೇ ಅವ್ಯವಹಾರ, ಪಕ್ಷಪಾತ ಇಲ್ಲ. ನನ್ನ ಮೇಲಿನ ಆರೋಪದ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ವೈಯಕ್ತಿಕ ದ್ವೇಷಗಳಿಗೆ ನಾನು ಉತ್ತರ ನೀಡುವುದು ಸಮಂಜಸವಲ್ಲ’ ಎಂದು ರೂಪಾ ಅವರ ಆರೋಪ ಕುರಿತು ಉತ್ತರಿಸಿದರು.

‘ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್ ಪ್ರಕ್ರಿಯೆಯಲ್ಲಿ ಡಿ.ರೂಪಾ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಹೇಮಂತ್‌ ನಿಂಬಾಳ್ಕರ್ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

‘ಅಧಿಕಾರಿ..ಗೌರವ ನಿನಗಿಲ್ಲ!’
ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಿ. ರೂಪಾ ಅತಿಥಿಯಾಗಿ ಭಾಗವಹಿಸಿದ್ದರು. ‌ಭಾಷಣದ ನಡುವೆ ‘ಟಿಕ್, ಟಿಕ್‌, ಟಿಕ್, ಟಿಕ್‌ ಬರುತಿದೆ ಕಾಲ.. ಮುಗಿವುದು ನಿನ್ನ ಮೋಸದ ಜಾಲ.. ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ, ಅಧಿಕಾರಿ ಗೌರವ ನಿನಗಿಲ್ಲ. ಎಚ್ಚರಿಕೆ, ದುಷ್ಟನೆ ಎಚ್ಚರಿಕೆ!’ ಎಂದು ಸಾಲುಗಳನ್ನು ತಿರುಚಿ ಹಾಡಿದರು. ಬಳಿಕ ‘ಈ ಸಾಲುಗಳು ಅರ್ಥ ಆಗುವವರಿಗೆ ಆಗಿದೆ’ ಎಂದೂ ಹೇಳಿದ್ದು, ಅವರು ಹಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ತನಿಖೆಗೆ ಆಗ್ರಹ: ಹೇಮಂತ್ ನಿಂಬಾಳ್ಕರ್ ಅವರು ಸರ್ಕಾರ, ಮಾಧ್ಯಮಗಳು ಹಾಗೂ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಡಿ. ರೂಪಾ ಆರೋಪಿಸಿದ್ದಾರೆ.

‘ಎರಡು ಬಾರಿ ಟೆಂಡರ್ ರದ್ದತಿಗೆ ಕಾರಣವಾದ ದೂರಿಗೆ ಹಾಗೂ ಅವ್ಯವಹಾರದ ಕುರಿತುಸುದ್ದಿಗೋಷ್ಠಿಯಲ್ಲಿನಿಂಬಾಳ್ಕರ್ ಸೂಕ್ತವಾಗಿ ಉತ್ತರಿಸಿಲ್ಲ. ದೊಡ್ಡ ಮೊತ್ತದ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆದಿದ್ದು, ಪ್ರಕ್ರಿಯೆ ಅಕ್ರಮಗಳಿಂದ ಕೂಡಿದೆ. ಸರ್ಕಾರಕ್ಕೆ ಈ ಬಗ್ಗೆ ತಪ್ಪು ಮಾಹಿತಿ ಸಲ್ಲಿಕೆಯಾಗಿದೆ’ ಎಂದಿದ್ದಾರೆ.‘ದೂರು ಮತ್ತು ಆರೋಪಗಳನ್ನು ಪರಿಹರಿಸದೆ, ಟೆಂಡರ್ ಅಂತಿಮಗೊಳಿಸದಿರಲು ಕೇಂದ್ರ ಸರ್ಕಾರ ಸೂಚಿಸಿದೆ. ಅಕ್ರಮಗಳ ಬಗ್ಗೆ ಟೆಂಡರ್ ಸಮಿತಿಯಿಂದ ವರದಿ ಕೇಳಿದೆ. ನಿರ್ಭಯಾ ‘ಸುರಕ್ಷ ನಗರ’ ಯೋಜನೆಯ ಪ್ರಕ್ರಿಯೆಯಲ್ಲಿ ಹೇಮಂತ್ ನಿಂಬಾಳ್ಕರ್ ವಹಿಸಿರುವ ಪಾತ್ರದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

*
ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರ ಜತೆ ಚರ್ಚಿಸಿದ್ದೇನೆ. ಇಬ್ಬರೂ ಅಧಿಕಾರಿಗಳಿಗೆ ಅವರು ಸೂಕ್ತ ಆದೇಶ ಮತ್ತು ಉಪದೇಶ ಎರಡನ್ನೂ ನೀಡುತ್ತಾರೆ.
–ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT