ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಸ್‌ ದಂಪತಿ ಜಗಳ: ಪತ್ನಿ ಮನೆ ಎದುರು ಧರಣಿ ಕುಳಿತ ಎಸ್ಪಿ!

ಮಗಳ ನೋಡಲು ಬಂದಿದ್ದ ಅರುಣ್ ರಂಗರಾಜನ್
Last Updated 10 ಫೆಬ್ರುವರಿ 2020, 2:05 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಸ್ ಅಧಿಕಾರಿಗಳಾದ ಅರುಣ್ ರಂಗರಾಜನ್ ಹಾಗೂ ಇಲಕಿಯಾ ಕರುಣಾಕರನ್‌ ದಂಪತಿ ಜಗಳ ಬೀದಿಗೆ ಬಂದಿದೆ. ‘ಮಗಳನ್ನು ನೋಡಲು ಅವಕಾಶ ಕೊಡುತ್ತಿಲ್ಲ’ ಎಂದು ಆರೋಪಿಸಿ ಅರುಣ್‌ ಅವರು ಪತ್ನಿ ಇಲಕಿಯಾ ಮನೆ ಎದುರು ಭಾನುವಾರ ಧರಣಿ ನಡೆಸಿದರು.

ಕಲಬುರ್ಗಿ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಎಸ್ಪಿ ಆಗಿರುವ ಅರುಣ್‌ ರಂಗರಾಜನ್ ಹಾಗೂ ಬೆಂಗಳೂರು ವಿವಿಐಪಿ ಭದ್ರತಾ ವಿಭಾಗದ ಡಿಸಿಪಿ ಆಗಿರುವ ಇಲಕಿಯಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಹೆಣ್ಣು ಮಗುವಿದೆ.

ಕೌಟುಂಬಿಕ ಕಲಹದಿಂದಾಗಿ ಹಲವು ವರ್ಷಗಳಿಂದ ಅವರಿಬ್ಬರು ಬೇರೆ ಆಗಿದ್ದರು. ನ್ಯಾಯಾಲಯದ ಮೆಟ್ಟಿಲೂ ಏರಿ ವಿಚ್ಛೇದನ ಸಹ ಪಡೆದಿದ್ದರು. ಹಿರಿಯರ ಸಂಧಾನದ ಬಳಿಕ ಪುನಃ ಜೊತೆಯಲ್ಲಿ ವಾಸವಿದ್ದರು. ಇದರ ನಡುವೆಯೇ ಮತ್ತೆ ಅವರಿಬ್ಬರ ನಡುವೆ ಕಲಹ ಶುರುವಾಗಿದೆ.

ಕೆಲ ತಿಂಗಳ ಹಿಂದಷ್ಟೇ ಅರುಣ್‌ ಅವರನ್ನು ಕಲಬುರ್ಗಿಗೆ ವರ್ಗಾಯಿಸಲಾಗಿತ್ತು. ಭಾನುವಾರ ರಜೆ ಇದುದ್ದರಿಂದ ಮಗಳನ್ನು ನೋಡಲು ಅವರು ವಸಂತ ನಗರದಲ್ಲಿರುವ ಪತ್ನಿ ಇಲಾಕಿಯಾ ಮನೆಗೆ ಬಂದಿದ್ದರು. ಅವರನ್ನು ಒಳಗೆ ಸೇರಿಸದೇ ಪತ್ನಿ ಬಾಗಿಲು ಹಾಕಿಕೊಂಡಿದ್ದರು. ಇದರಿಂದ ನೊಂದ ಅರುಣ್‌, ಮನೆ ಎದುರಿನ ಪಾದಚಾರಿ ಮಾರ್ಗದಲ್ಲೇ ಧರಣಿ ಕುಳಿತರು.

‘ಪತ್ನಿಯೂ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾಳೆ. ಮಗಳನ್ನೂ ನೋಡಲು ಬಿಡುತ್ತಿಲ್ಲ. ಆಕೆಯೇ ಹಿರಿಯ ಅಧಿಕಾರಿಗಳಿಗೆ ಹೇಳಿ ನನ್ನನ್ನು ಕಲಬುರ್ಗಿಗೆ ವರ್ಗಾವಣೆ ಮಾಡಿಸಿದ್ದಾಳೆ. ಇಂದು ಸಹ ನನ್ನನ್ನು ಮನೆಯೊಳಗೆ ಬಿಡದೇ ಅವಮಾನ ಮಾಡಿದ್ದಾಳೆ’ ಎಂದು ಅರುಣ್‌ ಹೇಳಿದರು.

‘ನಾವಿಬ್ಬರು ಛತ್ತೀಸಗಡದಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೀತಿಸಿದ್ದೆವು. ಅಲ್ಲಿ ಸೇವೆ ಸಲ್ಲಿಸಲು ಒಪ್ಪದ ಪತ್ನಿ, ಕರ್ನಾಟಕಕ್ಕೆ ವರ್ಗಾವಣೆ ಮಾಡಿಕೊಳ್ಳೋಣವೆಂದು ಹೇಳಿದ್ದಳು. ನನ್ನ ಹೆಸರಿನಲ್ಲಿ ಅಲ್ಲಿಯ ಸರ್ಕಾರಕ್ಕೆ ಪತ್ರ ಸಹ ಬರೆದಿದ್ದಳು. ವರ್ಗಾವಣೆ ವಿಷಯವಾಗಿ ನಮ್ಮಿಬ್ಬರ ನಡುವೆ ಜಗಳ ಶುರುವಾಗಿತ್ತು. ಆ ಜಗಳವೇ ನನ್ನನ್ನು ಬೀದಿಗೆ ತಂದು ನಿಲ್ಲಿಸಿದೆ’ ಎಂದು ಅಸಮಾಧಾನ ತೋಡಿಕೊಂಡರು.

ಸಂಧಾನಕ್ಕೂ ಒಪ್ಪದ ಅರುಣ್: ಸ್ಥಳಕ್ಕೆ ಬಂದಿದ್ದ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಅರುಣ್ ಅವರ ಮನವೋಲಿಸಲು ಪ್ರಯತ್ನಿಸಿದರು. ‘ರಸ್ತೆಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ. ದಯವಿಟ್ಟು ಎದ್ದೇಳಿ’ ಎಂದು ಕೋರಿದರು. ಅದಕ್ಕೆ ಒಪ್ಪದ ಅರುಣ್, ‘ನನಗೂ ಗೊತ್ತಿದೆ. ಮಗಳನ್ನು ನೋಡಿಯೇ ನಾನು ವಾಪಸು ಹೋಗುವುದು. ಅದಕ್ಕೆ ಅವಕಾಶ ಮಾಡಿಕೊಡಿ’ ಎಂದು ಹೇಳಿದರು. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಇಲಾಕಿಯಾ ಸಹ ಸ್ಪಂದಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT