ಬುಧವಾರ, ಫೆಬ್ರವರಿ 19, 2020
29 °C
ಗಮನ ಬೇರೆಡೆ ಸೆಳೆದು ಕಳ್ಳತನ, ಆರೋಪಿಗಳ ಬಂಧನ

ಲಕ್ಷ ಲಕ್ಷ ಕದ್ದಿದ್ದ ಇರಾನ್ ಪ್ರಜೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿಲ್ಲರೆ ಕೇಳುವ ಹಾಗೂ ಬಿಡಿಭಾಗ ಖರೀದಿಸುವ ನೆಪದಲ್ಲಿ ಕಾರು ಮಾರಾಟ ಮಳಿಗೆ ಹಾಗೂ ದುರಸ್ತಿ ಕೇಂದ್ರಗಳಿಗೆ ಹೋಗಿ ಲಕ್ಷಾಂತರ ರೂಪಾಯಿ ಕದ್ದಿದ್ದ ಇರಾನ್‌ನ ಇಬ್ಬರು ಪ್ರಜೆಗಳನ್ನು ಉತ್ತರ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದಾರೆ.

‘ಸಾಯಿದ್ ರೋಸ್ತಮಿ (26) ಹಾಗೂ ಸಬೀರ್ ಹುಸೈನ್ (35) ಬಂಧಿತರು. ಪ್ರವಾಸ ವೀಸಾದಡಿ ದೇಶಕ್ಕೆ ಬಂದಿದ್ದ ಅವರಿಬ್ಬರೂ ದೆಹಲಿಯಲ್ಲಿ ವಾಸವಿದ್ದರು. ಅಲ್ಲಿಂದಲೇ ರಾಜ್ಯಕ್ಕೆ ಬಂದು ಕೃತ್ಯ ಎಸಗಿ ಮರಳುತ್ತಿದ್ದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ಮಂಗಳೂರು ಹಾಗೂ ಬಂಟ್ವಾಳದ ಮಾಂಡೋವಿ ಮೋಟಾರ್ಸ್, ಮೈಸೂರಿನ ಮಾಂಡೋವಿ ಮೋಟಾರ್ಸ್ ಟ್ರೂವ್ಯಾಲ್ಯೂ, ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯ ಟ್ರೈಡೆಂಟ್ ಆಟೊ ಮೊಬೈಲ್ ಸರ್ವೀಸ್ ಮಳಿಗೆ ಹಾಗೂ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಕಲ್ಯಾಣಿ ಮೋಟಾರ್ಸ್‌ ಮಳಿಗೆಗಳಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದರು.

’ಇದುವರೆಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಹೇಳುತ್ತಿದ್ದಾರೆ. ಹಣವನ್ನು ಏತಕ್ಕೆ ಖರ್ಚು ಮಾಡಿದ್ದಾರೆಂಬುದು ಗೊತ್ತಾಗಿಲ್ಲ. ಹಣದ ಜಪ್ತಿ ಪ್ರಕ್ರಿಯೆ ನಡೆದಿದೆ’ ಎಂದು ಹೇಳಿದರು.

ನೋಟೇ ಅಸ್ತ್ರ: ‘₹2 ಸಾವಿರ ಮುಖಬೆಲೆಯ ನೋಟು ಹಿಡಿದು ಕಾರು ಮಾರಾಟ ಮಳಿಗೆ ಹಾಗೂ ದುರಸ್ತಿ ಕೇಂದ್ರಗಳಿಗೆ ಹೋಗುತ್ತಿದ್ದ ಆರೋಪಿಗಳು, ಅದೇ ನೋಟು ಬಳಸಿಕೊಂಡು ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಇದೇ 5ರಂದು ಎಂ.ಇ.ಐ. ರಸ್ತೆಯಲ್ಲಿರುವ ಟ್ರೈಡೆನ್ಟ್ ಆಟೊ ಮೊಬೈಲ್ಸ್‌ ಮಳಿಗೆಗೆ ಆರೋಪಿಗಳು ಹೋಗಿದ್ದರು. ಕ್ಯಾಷಿಯರ್‌  ಎಂ. ಕಿರಣ್ ಮಳಿಗೆಯಲ್ಲಿದ್ದರು. ಹಣ ಎಣಿಕೆ ಮಾಡುತ್ತಿದ್ದರು. ಅವರನ್ನು ಮಾತನಾಡಿಸಿದ್ದ ಆರೋಪಿಗಳು, ₹2ಸಾವಿರ ನೋಟು ಕೊಟ್ಟು ಚಿಲ್ಲರೆ ನೀಡುವಂತೆ ಕೇಳಿದ್ದರು. ಗ್ರಾಹಕರಿರಬಹುದೆಂದು ತಿಳಿದ ಕಿರಣ್, ನೋಟು ಪಡೆದುಕೊಂಡು ಡ್ರಾಯರ್ ಪರಿಶೀಲಿಸಿದ್ದರು. ಚಿಲ್ಲರೆ ಇಲ್ಲವೆಂದು ಹೇಳಿ ನೋಟು ವಾಪಸು ಕೊಟ್ಟಿದ್ದರು.’

‘ನೋಟು ಪಡೆದುಕೊಳ್ಳುವಾಗಲೇ ಅದನ್ನು ಆರೋಪಿ ಕೆಳಗೆ ಬೀಳಿಸಿದ್ದ. ಮತ್ತೊಬ್ಬ ಕಿರಣ್ ಗಮನವನ್ನು ಬೇರೆಡೆ ಸೆಳೆದು ₹44 ಸಾವಿರ ಕದ್ದಿದ್ದ. ನಂತರ, ತಮ್ಮದೇ ಭಾಷೆಯಲ್ಲಿ ಮಾತನಾಡುತ್ತ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಆ ಬಗ್ಗೆ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)