ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿ ಒಡಲ ದನಿ: ಭಾರಿ ವಾಹನ ಸಂಚಾರ ನಿಯಂತ್ರಣ ಅಸಾಧ್ಯವೇ?

Last Updated 25 ಜನವರಿ 2022, 20:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಒಳ ಭಾಗದಲ್ಲಿ ಕೆಲವು ದಿನಗಳಿಂದ ಈಚೆಗೆ ಹಗಲಿನ ವೇಳೆಯೂ ಭಾರಿ ವಾಹನಗಳ ಸಂಚಾರದ ಅಬ್ಬರ ಜೋರಾಗಿದೆ. ಬೃಹತ್‌ ಟಿಪ್ಪರ್‌, ಲಾರಿಗಳ ಅನಿಯಂತ್ರಿತ ಓಡಾಟದಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಮಿತಿಗಿಂತ ಹೆಚ್ಚು ಭಾರ ತುಂಬಿದ ವಾಹನಗಳು ಇತರ ವಾಹನಗಳಲ್ಲಿರುವವರ ಪ್ರಾಣಕ್ಕೆ ಎರವಾಗುತ್ತಿವೆ.

ನಗರದ ಒಳಭಾಗದಲ್ಲಿ ಹಗಲಿನ ವೇಳೆ, ಅದರಲ್ಲೂ ಮುಖ್ಯವಾಗಿ ದಟ್ಟಣೆ ಅವಧಿಯಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧ ಸಾಧ್ಯವಿಲ್ಲವೇ? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿದೆ. ಈ ಬೇಡಿಕೆಯೂ ಬಲವಾಗಿದೆ. ಈ ಕುರಿತು ತಜ್ಞರ ಅಭಿಪ್ರಾಯಗಳು ಈ ವಾರದ ‘ರಾಜಧಾನಿ ಒಡಲ ದನಿ’ಯಲ್ಲಿ...

ಭಾರಿ ವಾಹನಗಳಿಗೆ ಪ್ರತ್ಯೇಕ ಪಥ ಅಗತ್ಯ

ಬೆಂಗಳೂರು ನಗರದ ನಿವಾಸಿಗಳದ್ದೇ ಒಂದು ಕೋಟಿ ವಾಹನಗಳಿವೆ. ನಿತ್ಯವೂ ಹತ್ತು ಲಕ್ಷ ವಾಹನಗಳು ಹೊರಗಿನಿಂದ ಬರುತ್ತಿವೆ. ಇಲ್ಲಿನ ಶೇಕಡ 60ರಷ್ಟು ರಸ್ತೆಗಳು ಕಿರಿದಾಗಿಯೇ ಇವೆ. ಹೊರ ರಾಜ್ಯಗಳಿಗೆ ಹೋಗುವ ಮತ್ತು ನಗರದಲ್ಲಿನ ನಿರ್ಮಾಣ ಕಾಮಗಾರಿಗೆ ಸರಕು ಪೂರೈಸುವ ಭಾರಿ ವಾಹನಗಳು ಅನಿಯಂತ್ರಿತವಾಗಿ ನಗರದೊಳಕ್ಕೆ ಪ್ರವೇಶಿಸುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ.

ಹಿಂದೆ ಹಗಲಿನ ವೇಳೆ ಭಾರಿ ವಾಹನಗಳು ನಗರ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗುತ್ತಿತ್ತು. ಇತ್ತೀಚೆಗೆ ಅದು ಪಾಲನೆ ಆಗುತ್ತಿಲ್ಲ. ಹೀಗಾಗಿ ನಿಯಂತ್ರಣವಿಲ್ಲದೇ ಭಾರಿ ವಾಹನಗಳು ನಗರದೊಳಗೆ ಸಂಚರಿಸುತ್ತಿವೆ. ಯೋಜಿತ ರೀತಿಯಲ್ಲಿ ರಸ್ತೆಗಳನ್ನು ನಿರ್ಮಿಸುವುದು ಮತ್ತು ನಿರ್ಬಂಧಗಳನ್ನು ಸರಿಯಾಗಿ ಜಾರಿ ಮಾಡುವುದರಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಪಕ್ಷ ರಾಜಕಾರಣವನ್ನು ಬದಿಗಿಟ್ಟು ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ನೋಡಬೇಕು.

ವರ್ತುಲ ರಸ್ತೆಯಲ್ಲೂ ದಟ್ಟಣೆ ಹೆಚ್ಚಾಗಿದೆ. ನಗರದ ಹೊರ ವಲಯಗಳಲ್ಲಿ ಪ್ರತ್ಯೇಕವಾದ ರಸ್ತೆಗಳನ್ನು ನಿರ್ಮಿಸಿ, ಅಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ಹೋಗುವ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ನಗರದೊಳಕ್ಕೆ ಬರುವಂತಹ ಭಾರಿ ವಾಹನಗಳಿಗೆ ಸಮಯದ ಮಿತಿ ಹಾಗೂ ನಿರ್ದಿಷ್ಟ ಪ್ರದೇಶಗಳ ಮಿತಿಯನ್ನು ವಿಧಿಸಬೇಕು. ಆಗ ಭಾರಿ ವಾಹನಗಳಿಂದ ಅಪಘಾತವಾಗಿ ಸಾವು, ನೋವು ಸಂಭವಿಸುವುದನ್ನು ತಪ್ಪಿಸಬಹುದು.

– ಪ್ರೊ.ಎಂ.ಎನ್‌. ಶ್ರೀಹರಿ, ಸಾರಿಗೆ ತಜ್ಞ

***

ಭಾರಿ ವಾಹನಗಳ ತಪಾಸಣೆ, ನಿಗಾ ಹೆಚ್ಚಿಸಬೇಕು

ನಗರದಲ್ಲಿ ಅಪಘಾತಕ್ಕೀಡಾಗುವ ಭಾರಿ ವಾಹನಗಳಲ್ಲಿ ನಿರ್ಮಾಣ ಕಾಮಗಾರಿಗೆ ಸರಕು ಸಾಗಿಸುವ ಟಿಪ್ಪರ್‌ ಮತ್ತು ಲಾರಿಗಳ ಸಂಖ್ಯೆಯೇ ಹೆಚ್ಚು. ಹೊರ ರಾಜ್ಯದ ಗುತ್ತಿಗೆದಾರರು ಬೇರೆ ಕಡೆಗಳಿಂದ ಇಲ್ಲಿಗೆ ವಾಹನಗಳನ್ನು ತರುತ್ತಾರೆ. ಅವುಗಳ ಚಾಲಕರೂ ಹೊರ ರಾಜ್ಯದವರೇ ಆಗಿರುತ್ತಾರೆ. ನಿರ್ವಹಣೆ ಇಲ್ಲದ ವಾಹನಗಳು ಮತ್ತು ಅನನುಭವಿ ಚಾಲಕರು ಅಪಘಾತಗಳಿಗೆ ಪ್ರಮುಖ ಕಾರಣ.

ಭಾರಿ ವಾಹನಗಳಲ್ಲಿ ನಿಗದಿತ ಮಿತಿಗಿಂತ ದುಪ್ಪಟ್ಟು ಭಾರ ಹಾಕಿ ಸಾಗಿಸುವವರ ಸಂಖ್ಯೆ ಹೆಚ್ಚು. ಅಂತಹ ಸಮಯದಲ್ಲಿ ನಿಯಂತ್ರಣ ತಪ್ಪಿದರೆ ದೊಡ್ಡ ದುರಂತಗಳಾಗುತ್ತವೆ. ಇದೇ ಕಾರಣಕ್ಕಾಗಿ ದಟ್ಟಣೆಯ ಅವಧಿಯಲ್ಲಿ ಭಾರಿ ವಾಹನಗಳು ನಗರದೊಳಕ್ಕೆ ಪ್ರವೇಶಿಸದಂತೆ ನಿರ್ಬಂಧಿಸುವ ಕ್ರಮ ಜಾರಿಯಲ್ಲಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ.

ಭಾರಿ ವಾಹನಗಳ ನಿರ್ವಹಣೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳೂ ನಿಯಮಿತವಾಗಿ ತಪಾಸಣೆ ನಡೆಸಬೇಕು. ಪೊಲೀಸರು ಕೂಡ ವಾಹನಗಳ ದಾಖಲೆ ಮತ್ತು ಚಾಲಕರ ದಾಖಲೆಗಳನ್ನು ತಪಾಸಣೆ ಮಾಡಬೇಕು. ಭಾರಿ ವಾಹನಗಳ ಚಾಲನೆಯ ಅನುಭವವಿಲ್ಲದವರನ್ನು ಚಾಲಕರನ್ನಾಗಿ ಬಳಕೆ ಮಾಡುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು. ವಾಹನಗಳ ಮಾಲೀಕರು ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡುವಂತೆ ಜಾಗೃತಿ ಮೂಡಿಸಬೇಕು.

– ಟಿ.ಆರ್‌. ಸುರೇಶ್‌, ನಿವೃತ್ತ ಐಪಿಎಸ್‌ ಅಧಿಕಾರಿ

***

ಬಹು ಆಯಾಮಗಳಲ್ಲಿ ಕ್ರಮ ಅಗತ್ಯ

ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳು, ಇತರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು, ಖಾಸಗಿ ನಿರ್ಮಾಣ ಕಾಮಗಾರಿಗಳಿಂದ ರಸ್ತೆಗಳಲ್ಲಿ ಅಡತಡೆಗಳು ಜಾಸ್ತಿಯಾಗುತ್ತಿವೆ. ಅದರ ಜತೆಯಲ್ಲೇ ವಾಹನಗಳ ದಟ್ಟಣೆ ಏರುತ್ತಲೇ ಇವೆ. ನಗರದ ರಸ್ತೆ ಮಾರ್ಗಗಳ ಕುರಿತು ಸರಿಯಾಗಿ ತಿಳಿದಿರದ ಚಾಲಕರು ಭಾರಿ ವಾಹನಗಳನ್ನು ನಗರದೊಳಕ್ಕೆ ತಂದು, ಗಲಿಬಿಲಿಗೊಂಡು ಅಪಘಾತಕ್ಕೆ ಕಾರಣವಾಗುವುದೇ ಹೆಚ್ಚು.

ಭಾರಿ ವಾಹನಗಳ ಚಾಲಕರು ದೀರ್ಘ ಕಾಲ ಕೆಲಸ ಮಾಡುತ್ತಾರೆ. ಅವರಲ್ಲಿ ಹೆಚ್ಚಿನವರು ರಾತ್ರಿ ವೇಳೆ ಅತಿ ವೇಗವಾಗಿ ವಾಹನ ಓಡಿಸುವ ಅಭ್ಯಾಸ ಹೊಂದಿರುತ್ತಾರೆ. ಹಗಲಿನಲ್ಲಿ ನಗರದೊಳಕ್ಕೆ ಬಂದಾಗಲೂ ಅದೇ ವೇಗದಲ್ಲಿ ವಾಹನ ಓಡಿಸಿ ದುರ್ಘಟನೆಗಳಿಗೆ ಕಾರಣವಾಗುತ್ತಾರೆ. ಕೆಲಸದ ಒತ್ತಡದಿಂದ ಬಳಲಿ ಹಗಲಿನಲ್ಲೇ ಮದ್ಯ ಸೇವಿಸಿ ಚಾಲನೆ ಮಾಡುವವರೂ ಇರುತ್ತಾರೆ.

ಈ ಸಮಸ್ಯೆ ಪರಿಹಾರಕ್ಕೆ ಬಹು ಆಯಾಮದ ಕ್ರಮಗಳ ಅಗತ್ಯವಿದೆ. ರಸ್ತೆಗಳಲ್ಲಿನ ಅಡೆತಡೆಗಳನ್ನು ನಿವಾರಿಸಬೇಕು. ನಿಯಂತ್ರಣ ಕ್ರಮಗಳನ್ನು ಬಿಗಿಯಾಗಿ ಜಾರಿಗೊಳಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ಭಾರಿ ವಾಹನಗಳ ತಪಾಸಣೆ ನಡೆಸಬೇಕು. ಕಾನೂನುಗಳ ಕಟ್ಟುನಿಟ್ಟಿನ ಜಾರಿಯೇ ಅಂತಿಮ ಪರಿಹಾರ.

– ಎಚ್‌.ಎಸ್‌. ಮಂಜುನಾಥ್‌, ನಿವೃತ್ತ ಡಿವೈಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT