ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ ಉಗ್ರ ಸಂಘಟನೆ ‘ಟ್ವಿಟರ್’ ಖಾತೆ ನಿರ್ವಹಣೆ: ಶಂಕಿತನಿಗೆ 10 ವರ್ಷ ಜೈಲು

Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಗೆ ಸೇರಿದ್ದ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಅಪರಾಧಿ ಮೆಹದಿ ಮಸ್ರೂರ್ ಬಿಸ್ವಾಸ್‌ಗೆ (24) 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಪಶ್ಚಿಮ ಬಂಗಾಳದ ಮೆಹದಿ, ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ವಾಸವಿದ್ದ. ಆಹಾರ ಉತ್ಪನ್ನ ತಯಾರಿ ಕಂಪನಿಯೊಂದರಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. 2014ರಲ್ಲಿ ಈತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ನಂತರ, ಎನ್‌ಐಎ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದರು.

ಕೃತ್ಯದ ಸಂಬಂಧ ಪುರಾವೆಗಳನ್ನು ಸಂಗ್ರಹಿಸಿದ್ದ ಎನ್‌ಐಎ ಅಧಿಕಾರಿಗಳು, ಮೆಹದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಗಂಗಾಧರ್, ಅಪರಾಧಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

‘ಪಶ್ಚಿಮ ಬಂಗಾಳದ ಗೋಪಾಲಪುರದಲ್ಲಿ ಜನಿಸಿದ್ದ ಮೆಹದಿ, ಎಂಜಿನಿಯರಿಂಗ್ ಪದವೀಧರ. ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಈತ, ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಉಗ್ರರ ಜೊತೆ ಒಡನಾಟ ಬೆಳೆಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತಂತ್ರಜ್ಞಾನದಲ್ಲಿ ಪರಿಣಿತಿ ಪಡೆದಿದ್ದ ಈತ, ಐಎಸ್‌ ಸಂಘಟನೆಯ ಟ್ವಿಟರ್ ಖಾತೆಯನ್ನು ನಿರ್ವಹಣೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ. ಸಿರಿಯಾ, ಟರ್ಕಿ, ಇಸ್ರೇಲ್, ಪ್ಯಾಲೆಸ್ಟೀನ್‌, ಗಾಝಾ ಪಟ್ಟಿ ಹಾಗೂ ಇತರೆಡೆಯ ವಿದ್ಯಮಾನಗಳನ್ನು ಗಮನಿಸಿ, ನಿರಂತರವಾಗಿ ಟ್ವೀಟ್ ಮಾಡುತ್ತಿದ್ದ. ಇದಕ್ಕಾಗಿ ಈತ ಪ್ರತಿ ತಿಂಗಳು 60 ಜೆ.ಬಿ ಅಂತರ್ಜಾಲ ಬಳಸುತ್ತಿದ್ದ. ಈತ ಪೋಸ್ಟ್‌ಗಳನ್ನು ಹಲವರು ಹಂಚಿಕೊಳ್ಳುತ್ತಿದ್ದರು. ಭಯೋತ್ಪಾದನೆಗೆ ಪ್ರಚೋದಿಸುತ್ತಿದ್ದರು.’

‘ಯುವಕರನ್ನು ಪ್ರಚೋದಿಸಿ ಉಗ್ರ ಸಂಘಟನೆಗೆ ಸೇರಿಸಲು ಮೆಹದಿ ಯತ್ನಿಸುತ್ತಿದ್ದ. 2009ರಲ್ಲಿ ಟ್ವಿಟರ್‌ನಲ್ಲಿ ‘ಎಲ್‌ ಸಾರ್ಟಡಾರ್’ ಹೆಸರಿನಲ್ಲಿ ಖಾತೆ ತೆರಿದಿದ್ದ ಮೆಹದಿ, ಪ್ರಚೋದನಾಕಾರಿ ಪೋಸ್ಟ್ ಪ್ರಕಟಿಸುತ್ತಿದ್ದ. ನಂತರ, 2013ರಲ್ಲಿ ‘ಶಮ್ಮಿ ವಿಟ್ನೆಸ್‌’ ಹೆಸರಿನಲ್ಲಿ ಖಾತೆ ತೆರೆದು ಐಎಸ್‌ ಪರ ಟ್ವೀಟ್ ಮಾಡುತ್ತಿದ್ದ. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT