ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿಗೆ ರಾಹುಲ್‌ ಸವಾಲಾಗುವುದು ಅಸಾಧ್ಯ’

ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
Last Updated 27 ಮಾರ್ಚ್ 2023, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಹುಲ್‌ ಗಾಂಧಿ ಒಬ್ಬ ಗೊಂದಲದ ಮನಸ್ಥಿತಿಯ ವ್ಯಕ್ತಿ. ಅಂಥವರು 2024ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಹೇಗೆ ಸವಾಲು ಒಡ್ಡಬಲ್ಲರು’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದರು.

ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಸೋಮವಾರ ಭಾರತೀಯ ಜನತಾ ಯುವ ಮೋರ್ಚಾ ಹಮ್ಮಿಕೊಂಡಿದ್ದ ಮೊದಲ ಬಾರಿ ಮತದಾನದ ಹಕ್ಕು ಪಡೆದ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ‘ರಾಹುಲ್‌ ಗಾಂಧಿ ಅನರ್ಹತೆ’ ಕುರಿತ ಪ್ರಶ್ನೆಗೆ ಅವರು
ಪ್ರತಿಕ್ರಿಯಿಸಿದರು.

‘ಸದನಕ್ಕೆ ಯಾವಾಗಲೂ ಗೈರುಹಾಜರಾಗುವ ಸಂಸದರಿಂದ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಅವಮಾನಿಸಿರುವುದು ಒಂದು ಸಮುದಾಯವನ್ನು. ಅಲ್ಲದೆ, ನ್ಯಾಯಾಲಯದಲ್ಲಿ ತಮ್ಮನ್ನು ಸಮರ್ಥಿಸಿಕೊಂಡಿಲ್ಲ. ನ್ಯಾಯಾಲಯದ ಸಾಮರ್ಥ್ಯದ ಅರಿವೂ ಅವರಿಗಿಲ್ಲ. ನ್ಯಾಯಾಂಗಕ್ಕಿಂತ ತಾವು ದೊಡ್ಡವರೆಂದು ಭಾವಿಸಿಕೊಂಡಿರಬಹುದು. ಅವರ ಅನರ್ಹತೆಯ ವಿಷಯದಲ್ಲಿ ಪ್ರಧಾನಿ, ಬಿಜೆಪಿಯ ಪಾತ್ರವಿಲ್ಲ. ಕಾನೂನಿನ ಪ್ರಕಾರ ಲೋಕಸಭೆಯ ಸ್ವೀಕರ್‌ ಕ್ರಮ ಕೈಗೊಂಡಿದ್ದಾರೆ’ ಎಂದರು.

‘ದೇಶದಲ್ಲಿ ಕಾನೂನು ರೂಪಿಸುವವರೇ ಎಷ್ಟೋ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ, ಮತದಾರರಿಗೆ ನೀತಿ ಬೋಧನೆ ಏಕೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಯೊಬ್ಬರಿಗೂ ಅವರದೇ ಆಯ್ಕೆಗಳಿರುತ್ತವೆ. ಪ್ರತಿಯೊಬ್ಬರೂ ಜಾಗೃತ ಸಮಾಜದ ಭಾಗವಾಗಿರುವ ಕಾರಣ ಮತ ಚಲಾವಣೆಯನ್ನು ಹಕ್ಕು ಎಂದು ಭಾವಿಸುವ ಬದಲು, ಜವಾಬ್ದಾರಿಯೆಂದು ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

ಬಹುಕ್ಷೇತ್ರಗಳ ಸ್ಪರ್ಧೆ, ಮೀಸಲಾತಿ ಸಮರ್ಥನೆ: ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದರಿಂದ ಜನರ ತೆರಿಗೆ ಹಣ ವ್ಯರ್ಥವಾಗುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಜನ ನಾಯಕರು ಸಂಸತ್‌ ಪ್ರವೇಶಿಸಲು ಇಂತಹ ಅವಕಾಶಗಳ ಅಗತ್ಯವಿದೆ. ಅದನ್ನು ಗಮನಿಸಿಯೇ ಹಿರಿಯರು ಅವಕಾಶ ಕೊಟ್ಟಿದ್ದಾರೆ. ಅಮೇಠಿಯಲ್ಲಿ ಸೋಲು ಕಂಡ ರಾಹುಲ್‌ ವಯನಾಡಿನ ಮೂಲಕ ಲೋಕಸಭೆ ಪ್ರವೇಶಿಸಿದರು’ ಎಂದರು.

‘ಶೋಷಿತರು, ದುರ್ಬಲರು, ಆರ್ಥಿಕವಾಗಿ ಹಿಂದುಳಿದವರು ಮುಖ್ಯವಾಹಿನಿಗೆ ಬರಲು ಇನ್ನಷ್ಟು ಸಮಯದ ಅವಶ್ಯ ಇದೆ. ಅಲ್ಲಿಯವರೆಗೂ ಮೀಸಲಾತಿ ಇರುತ್ತದೆ’ ಎಂದು ಹೇಳಿದರು.

ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್.ದೊರೆಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಪಿಇಎಸ್‌ ಸಿಇಒ ಡಿ.ಜವಾಹರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT