ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಘವನ್ನು ಕಪ್ಪು, ಬಿಳುಪಾಗಿ ನೋಡಲು ಅಸಾಧ್ಯ: ಆರ್‌. ಜಗನ್ನಾಥನ್

‘ಮ್ಯಾನ್‌ ಆಫ್‌ ದ ಮಿಲೇನಿಯ–ಡಾ. ಹೆಡಗೇವಾರ್‌’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಜಗನ್ನಾಥನ್‌
Published 8 ಏಪ್ರಿಲ್ 2024, 16:07 IST
Last Updated 8 ಏಪ್ರಿಲ್ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ಕಪ್ಪು ಅಥವಾ ಬಿಳಿ ಎಂಬ ಎರಡೇ ದೃಷ್ಟಿಕೋನದಲ್ಲಿ ಎಲ್ಲವನ್ನೂ ನೋಡುವುದು ಪಾಶ್ಚಿಮಾತ್ಯ ಪರಿಕಲ್ಪನೆ. ಈ ರೀತಿಯಾಗಿ ಆರ್‌ಎಸ್‌ಎಸ್‌ ಅನ್ನು ನೋಡಲು ಸಾಧ್ಯವಿಲ್ಲ ಎಂದು ‘ಸ್ವರಾಜ್ಯ’ ಸಂಪಾದಕೀಯ ನಿರ್ದೇಶಕ ಆರ್‌. ಜಗನ್ನಾಥನ್ ಹೇಳಿದರು.

ನಗರದಲ್ಲಿ ‘ಮಂಥನ ಬೆಂಗಳೂರು‘ ಸೋಮವಾರ ಹಮ್ಮಿಕೊಂಡಿದ್ದ ‘ಮ್ಯಾನ್‌ ಆಫ್‌ ದ ಮಿಲೇನಿಯ–ಡಾ. ಹೆಡಗೇವಾರ್‌’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನ ದೇವರನ್ನು ನಂಬಬೇಕು. ನಂಬದವರು ದೆವ್ವದ ಆರಾಧಕರು. ನಾನು ಸರಿ–ನೀನು ತಪ್ಪು ಎಂದು ಎಲ್ಲವನ್ನೂ ಎರಡೇ ದೃಷ್ಟಿಯಲ್ಲಿ ಪಾಶ್ಚಾತ್ಯರು ನೋಡುತ್ತಾರೆ. ಹೆಡಗೇವಾರ್‌ ಪ್ರತಿಪಾದಿಸಿದ ಜನಾಂಗವಾದ, ಇನ್ನಿತರ ಸಿದ್ಧಾಂತಗಳನ್ನು ಕೂಡ ಇದೇ ರೀತಿ ನೋಡಿ ಪ‍್ರತಿಕ್ರಿಯಿಸಿದ್ದಾರೆ. ಅದಕ್ಕೆ ಹಲವು ಆಯಾಮಗಳು ಇರುವುದನ್ನು ಗಮನಿಸಿಲ್ಲ’ ಎಂದು ತಿಳಿಸಿದರು.

'ಆರ್‌ಎಸ್‌ಎಸ್‌ ಬಗ್ಗೆಯಾಗಲಿ, ಹೆಡಗೇವಾರ್‌ ಬಗ್ಗೆಯಾಗಲಿ ಬಹಳ ಕೃತಿಗಳು ಬಂದಿರಲಿಲ್ಲ. ಬಂದಿದ್ದರೂ ಅವು ಪ್ರಾದೇಶಿಕ ಭಾಷೆಗಳಿಗೆ ಸೀಮಿತವಾಗಿದ್ದು, ಇಂಗ್ಲಿಷ್‌ನಲ್ಲಿ ಇರಲಿಲ್ಲ. ಅದಕ್ಕೆ ರಾಜಕೀಯ ಕಾರಣವೂ ಇರಬಹುದು. ಕಳೆದ 10 ವರ್ಷಗಳಿಂದ ಈ ಕೊರತೆ ನೀಗುತ್ತಿದೆ. ಮುಕ್ತವಾಗಿ ಪುಸ್ತಕಗಳು ಪ್ರಕಟವಾಗುತ್ತಿವೆ. ಭಾರತದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುವ ಭಾಷೆಯ ಓದುಗರಿಗೆ ಕೃತಿಗಳು ತಲುಪಬೇಕು' ಎಂದರು.

‘ಹೆಡಗೇವಾರ್‌ ಎಂದಿಗೂ ರಾಜಕಾರಣದ ಜೊತೆಗೆ ರಾಜಿ ಮಾಡಿಕೊಳ್ಳಲಿಲ್ಲ. ವ್ಯಕ್ತಿತ್ವಗಳನ್ನು ನಿರ್ಮಿಸಬೇಕು ಎಂಬುದೇ ಅವರ ಧ್ಯೇಯವಾಗಿತ್ತು. ಅದಕ್ಕಾಗಿಯೇ ರಾಜಕೀಯೇತರ ಸಂಘವನ್ನು ಸ್ಥಾಪಿಸಿದರು’ ಎಂದು ಹೇಳಿದರು.

ಆರ್‌ಎಸ್‌ಎಸ್‌ ಸಹಕಾರ್ಯವಾಹ ಮುಕುಂದ ಸಿ.ಆರ್‌. ಮಾತನಾಡಿ, ‘ಹೆಡಗೇವಾರ್‌ ಅವರು ಸಂಘವನ್ನು ರಾಜಕೀಯೇತರ ಸಂಘಟನೆಯನ್ನಾಗಿ ಕಟ್ಟಿದರು. ಆದರೆ, ಸಂಘ ಕಟ್ಟುವ ಮೊದಲು ಅವರು ರಾಜಕಾರಣಿಯಾಗಿದ್ದರು. ಕ್ರಾಂತಿಕಾರಿಯಾಗಿದ್ದರು. ಕಾಂಗ್ರೆಸ್‌ನ ಕೇಂದ್ರ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿಯಾಗಿದ್ದರು’ ಎಂದು ವಿವರಿಸಿದರು.

‘ಈ ಕೃತಿಯಲ್ಲಿ 32 ಅಧ್ಯಾಯಗಳಿವೆ. ಹೆಡಗೇವಾರ್‌ ಚಿಂತನೆಯ ಹಂತ, ರಾಜಕೀಯ ಜೀವನ, ಸಂಘಟನೆ ಹೀಗೆ ಎಲ್ಲವನ್ನು ಕ್ರಮಪ್ರಕಾರವಾಗಿ ವಿವರಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT