ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧಾಂತ ಸಂಭಾಳಿಸುವುದೇ ಸಂವಿಧಾನವಲ್ಲ: ಹೈಕೋರ್ಟ್‌

Published 14 ಫೆಬ್ರುವರಿ 2024, 14:46 IST
Last Updated 14 ಫೆಬ್ರುವರಿ 2024, 14:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂವಿಧಾನಗಳ ಆಶಯವು, ವಾಸ್ತವಿಕ ಮತ್ತು ಭೌತಿಕ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿ ಇದೆಯೇ ಹೊರತು ಕೇವಲ ಸಿದ್ಧಾಂತಗಳನ್ನು ಸಂಭಾಳಿಸಲು ಅಲ್ಲ’ ಎಂಬ ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಅಲಿವರ್‌ ವೆಂಡಲ್‌ನ ತೀರ್ಪೊಂದನ್ನು ಉಲ್ಲೇಖಿಸಿರುವ ಹೈಕೋರ್ಟ್, ‘ರಾಜ್ಯ ಸರ್ಕಾರ ಪಿಂಚಣಿದಾರರನ್ನು ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದೆ.

ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿ ಸೇವೆ ಸಲ್ಲಿಸುವ ನೌಕರರಿಗೆ ನೀಡಲಾಗುವ ಒಂದು ಬಾರಿಯ ವೇತನ ಬಡ್ತಿಗೆ ನಿರಾಕರಿಸಿದ್ದ, ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್ಎಟಿ) ಆದೇಶವನ್ನು ಪ್ರಶ್ನಿಸಿ ಕುಂದಾಪುರ ತಾಲ್ಲೂಕಿನ ಕಣ್ಣುಕೆರೆ ಗ್ರಾಮದ ಸೀತಾಲಕ್ಷ್ಮಿ (62) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ಜಿ.ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ.

‘2018ರ ಫೆಬ್ರುವರಿಯಿಂದ ಜಾರಿಗೆ ಬರುವಂತೆ ಅರ್ಜಿದಾರರಿಗೆ ಮುಂದಿನ ಮೂರು ತಿಂಗಳ ಒಳಗಾಗಿ ಒಂದು ಬಾರಿಯ ವೇತನ ಬಡ್ತಿ ಮಂಜೂರು ಮಾಡಬೇಕು ಮತ್ತು ಹೆಚ್ಚಳದ ಬಾಕಿ ಮೊತ್ತವನ್ನೂ ಪಾವತಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿದೆ.

‘ಆದೇಶ ಜಾರಿಗೊಳಿಸುವಲ್ಲಿ ವಿಳಂಬವಾದರೆ ಪ್ರತಿ ತಿಂಗಳಿಗೆ ಶೇ 2ರ ದರದಲ್ಲಿ ಬಡ್ಡಿ ಸೇರಿಸಿ ಪಾವತಿಸಬೇಕು. ಬಡ್ಡಿ ಮೊತ್ತವನ್ನು ತಕ್ಷಣವೇ ಪಾವತಿ ಮಾಡಬೇಕು. ವಿಳಂಬಕ್ಕೆ ಕಾರಣವಾದ ಅಧಿಕಾರಿಯಿಂದ ಹಣ ವಸೂಲಿ ಮಾಡಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.

‘ಸೀತಾಲಕ್ಷ್ಮಿ ಮೂರು ದಶಕಗಳ ಕಾಲ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ, ಶಾಲಾ ಮಾತೆಯಾಗಿ ನಿಷ್ಕಳಂಕ ಸೇವೆ ಸಲ್ಲಿಸಿದ್ದಾರೆ. ಹಲವು ಕಂದಮ್ಮಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈಗವರು ಬಾಳಸಂಜೆಯಲ್ಲಿದ್ದಾರೆ. ಇಳಿ ವಯಸ್ಸಿನಲ್ಲಿ ಉಂಟಾಗುವ ಹಲವು ಸಮಸ್ಯೆಗಳನ್ನು ಎದುರಿಸಲು ಹಣದ ಅವಶ್ಯಕತೆ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಒಬ್ಬ ಬಡ ಶಿಕ್ಷಕಿ ತನ್ನ ಪಾಲಿನ ಸಂವಿಧಾನ ಬದ್ಧ ಹಕ್ಕನ್ನು ಸಂರಕ್ಷಿಸಿಕೊಳ್ಳಲು ಹೆಣಗಬೇಕಾಗಿರುವುದು ನ್ಯಾಯಸಮ್ಮತ ಅಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣವೇನು?

ಸೀತಾಲಕ್ಷ್ಮಿ ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿದ್ದರು. ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 1980ರ ಸೆಪ್ಟೆಂಬರ್‌ 24ರಿಂದ 2019ರ ಅಕ್ಟೋಬರ್ 31ರವರೆಗೆ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

‘ಎಸ್ಎಸ್ಎಲ್‌ಸಿವರೆಗೆ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿದಂತಹ ಸರ್ಕಾರಿ ನೌಕರರಿಗೆ ಒಂದು ಬಾರಿಯ ವೇತನ ಬಡ್ತಿ ನೀಡಬೇಕು’ ಎಂಬ ನಿಯಮಾನುಸಾರ ಸೀತಾಲಕ್ಷ್ಮಿ ಸಲ್ಲಿಸಿದ್ದ ಮನವಿಯನ್ನು ಶಿಕ್ಷಣ ಇಲಾಖೆ ತಿರಸ್ಕರಿಸಿತ್ತು. ಈ ಸಂಬಂಧ ಅವರು ಕೆಎಸ್‌ಎಟಿ ಮೊರೆ ಹೋಗಿದ್ದರು. ಕೆಎಸ್‌ಎಟಿ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಹೈಕೋರ್ಟ್‌ ವಕೀಲರಾದ ವಿಘ್ನೇಶ್ವರ ಎಸ್‌.ಶಾಸ್ತ್ರಿ ಮತ್ತು ಆರ್‌.ಗುರುರಾಜ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT