ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯರನ್ನೇ ನಾಯಕರಾಗಿಸಿದ್ದು ಸಾಹಿತ್ಯದ ಶಕ್ತಿ: ಸಾಹಿತಿ ರಹಮತ್‌ ತರೀಕೆರೆ

‘ಪ್ರಜಾವಾಣಿ ದೀಪಾವಳಿ ಕಥೆ–ಕವನ ಸ್ಪರ್ಧೆ’ಗಳ ವಿಜೇತರಿಗೆ ಬಹುಮಾನ ವಿತರಣೆ
Last Updated 5 ನವೆಂಬರ್ 2022, 20:26 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಪ್ರಭುತ್ವದ ಆರಾಧನೆಯ ಮುಂದುವರಿಕೆಯಂತೆ ಪ್ರಜಾಪ್ರಭುತ್ವದಲ್ಲೂ ನಾಯಕತ್ವದ ಆರಾಧನೆ ಕಾಣುತ್ತಿದ್ದೇವೆ. ಹೀಗಿರುವಾಗ, ಸಾಮಾನ್ಯರನ್ನೇ ನಾಯಕರನ್ನಾಗಿಸಿದ ಬರಹಗಳು ಮೂಡಿಬರುತ್ತಿರುವುದೇ ಸಾಹಿತ್ಯದ ಶಕ್ತಿ’ ಎಂದು ಸಾಹಿತಿ ರಹಮತ್‌ ತರೀಕೆರೆ ಅಭಿಪ್ರಾಯಪಟ್ಟರು.

ನ್ಯಾಷನಲ್‌ ಕಾಲೇಜು ಸಭಾಂಗಣ
ದಲ್ಲಿ ‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ–2022ರ ಕಥೆ–ಕವನ ಸ್ಪರ್ಧೆ’
ಗಳ ವಿಜೇತರಿಗೆ ಬಹುಮಾನ ವಿತರಿಸಿ, ‘ಕನ್ನಡದ ಸೃಜನಶೀಲತೆ ಸ್ವರೂಪ’ ಎಂಬ ವಿಷಯ ಕುರಿತು ಅವರು ಶನಿವಾರ ವಿಶೇಷ ಉಪನ್ಯಾಸ ನೀಡಿದರು.

ಚಳವಳಿಗಳ ಕಾಲಘಟ್ಟದ ಲೇಖಕರು ನುಡಿದಂತೆ ನಡೆಯುತ್ತಿ
ದ್ದರು. ಅದು ಅನಿವಾರ್ಯವೂ ಹೌದು. ಹಾಗೆ ಘನತೆಯಿಂದ ಬದುಕಿದ ಲೇಖಕರು ಸಾಂಸ್ಕೃತಿಕ ಹೀರೊಗಳಾಗಿ ರೂಪುಗೊಂಡಿದ್ದಾರೆ. ಕುಪ್ಪಳಿಯಲ್ಲಿ ಪ್ರದರ್ಶಿಸಿರುವ ಚಿತ್ರಗಳಲ್ಲಿ ಕುವೆಂಪು ಅವರು ವಿರಾಜಮಾನರಾಗಿ ಕುಳಿತಿದ್ದರೆ, 10–12 ಮುಖ್ಯಮಂತ್ರಿಗಳು ಅವರ ಪಕ್ಕ ವಿನೀತರಾಗಿ ನಿಂತಿರುವ ಅಥವಾ ಕುಳಿತಿರುವ ಫೋಟೋಗಳಿವೆ. ಹಿಂದೆ, ಸಾಹಿತಿಗಳು ಹೀಗೆ ಸಾಂಸ್ಕೃತಿಕ ಲೋಕವನ್ನು ಪ್ರಭಾವಿಸಿದ್ದರು ಎಂದರು.

ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಇತರೆ ಕ್ಷೇತ್ರಗಳಿಗೆ ಜಿಗಿದು ಅಲ್ಲಿಯೂ ಹೆಸರು ಮಾಡಿದ್ದಾರೆ. ಹಾಗೆಯೇ, ಇತರ ಕ್ಷೇತ್ರದವರೂ ಬರಹ
ಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಹಿತ್ಯ ವೈವಿಧ್ಯಕ್ಕೆ ಕೊಡುಗೆ ಸಲ್ಲಿಸಿದ್ದಾರೆ. ಕುವೆಂಪು, ಮಾಸ್ತಿ, ಕಾರಂತ, ಲಂಕೇಶರನ್ನೂ ಒಳಗೊಂಡಂತೆ ಕೆಲವರು ಹಲವು ಮಾಧ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಇಂತಹ ಸೀಮೋಲ್ಲಂಘನೆಯ ಫಲವಾಗಿಯೇ ಸಾಹಿತ್ಯಕ್ಕೆ ಬಹುತ್ವದ ಶಕ್ತಿ ದೊರಕಿದೆ ಎಂದು ವಿಶ್ಲೇಷಿಸಿದರು.

‘ಬರಹಗಾರರು ಪರಂಪರೆಯ ಜತೆಗೆ ನಡೆಸಿದ ಜಗಳಗಳ ಪರಿಣಾಮದಿಂದಲೂ ವಿಭಿನ್ನ ಸಾಹಿತ್ಯ ರಚನೆ ಸಾಧ್ಯವಾಗಿದೆ. ಕುವೆಂಪು ಅವರ ಜತೆ ಪೂರ್ಣಚಂದ್ರ ತೇಜಸ್ವಿಯವರು ಭಿನ್ನದೃಷ್ಟಿಯ ಜಗಳ ಮಾಡದೇ ಹೋಗಿದ್ದರೆ ತಂದೆಯ ನೆರಳಿನಿಂದ ಹೊರಬಂದು ತಮ್ಮದೇ ಛಾಪು ಮೂಡಿಸಲು ಸಾಧ್ಯವಾಗುತ್ತಿರಲಿಲ್ಲ. ‘ಕರ್ವಾಲೊ’ದಂತಹ ಕಾದಂಬರಿ ಮೂಡುತ್ತಿರಲಿಲ್ಲ.ಅಪ್ಪ ಮಗನಿಗೆ, ಮಗ ಅಪ್ಪನಿಗೆ ಬರೆದ ಪತ್ರಗಳು ಅದಕ್ಕೆ ಸಾಕ್ಷಿಯಾಗಿವೆ’ ಎಂದರು.

ಪರಂಪರೆ ಕಟ್ಟಿಕೊಡುವ ಸೃಜನಶೀಲ ಜಿಗಿತ ದೇಶದಿಂದ ದೇಶಕ್ಕೆ, ಪ್ರದೇಶ
ದಿಂದ ಪ್ರದೇಶಕ್ಕೆ ಸೀಮಿತವಾಗಿಲ್ಲ. ಭಿನ್ನ ಮಾಧ್ಯಮಗಳ ಮಧ್ಯೆಯೂ ನಿರಂತರ
ವಾಗಿ ನಡೆಯುವ ಪ್ರಕ್ರಿಯೆ ಆಗಿದೆ. ಹಿಂಜರಿಕೆ ಇಲ್ಲದೆ, ವಿಫಲತೆಯ ಅಳುಕಿಲ್ಲದೆ ಹಲವು ಪ್ರಕಾರಗಳಲ್ಲಿ
ಏಕಕಾಲಕ್ಕೆ ಹಲವರು ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಸಾಹಿತ್ಯ ಸೇರಿ ಯಾವುದೇ ಪ್ರಕಾರಗಳಲ್ಲಿ ಸೃಜನಶೀಲತೆ, ಸೃಜನಶೀಲವಲ್ಲದ್ದು ಎನ್ನುವ ವಿಂಗಡಣೆ ಸಲ್ಲದು. ರಾಜಕೀಯ ಸಿದ್ಧಾಂತಗಳ ಹೆಸರಿನಲ್ಲಿ ಬರಹಗಳನ್ನು ದೂಷಿಸುವ, ವೈಭವೀಕರಿಸುವ ವರ್ತನೆಗಳೂ ಅಪಾಯಕಾರಿ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಮನುಷ್ಯನ ಪ್ರತಿಭೆ ವ್ಯಕ್ತವಾಗುವ ಅಮೂರ್ತ ಶಕ್ತಿಯೇ ಸೃಜನಶೀಲತೆ. ಕಲ್ಪಕತೆ, ಭೌತಿಕತೆ, ಕಾಣ್ಕೆ, ಬರಹದ ರೂಪ ಹಾಗೂ ನಡೆ ಸೃಜನಶೀಲತೆಯ ಆಯಾಮಗಳು ಎಂದು ವಿವರಿಸಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಷನಲ್‌ ಕಾಲೇಜಿನ ‘ನಿನಾದ’ ತಂಡದವರು ನುಡಿಗೀತೆ ಹಾಡಿದರು.

ವಿಜೇತರೊಂದಿಗೆ ಸಂವಾದ

ಕಥೆ–ಕವನ ಸ್ಪರ್ಧೆಯ ವಿಜೇತರೊಂದಿಗೆ ನಡೆದ ಸಂವಾದದಲ್ಲಿ ಹಲವು ಪ್ರಶ್ನೆಗಳು ಎದುರಾದವು. ಅವುಗಳಿಗೆ ರಹಮತ್ ತರೀಕೆರೆ ಪ್ರತಿಕ್ರಿಯಿಸಿದ್ದ ಹೀಗೆ. . .

ಪ್ರಶ್ನೆ: ವಿಮರ್ಶೆಗಳಿಗೆ ಬಹುಮಾನಗಳಿಲ್ಲವೇಕೆ? ಹೊಸಬರು ಈ ಪ್ರಕಾರದತ್ತ ನಿರಾಸಕ್ತಿ ತೋರುತ್ತಿದ್ದಾರಲ್ಲವೆ?

ಉತ್ತರ: ವಿಮರ್ಶೆಯ ಸ್ವರೂಪ ಬದಲಾಗಿದೆ. ಎಲ್ಲರ ಪ್ರತಿಕ್ರಿಯೆಗಳ ಸಂಯೋಜನೆಯನ್ನೂ ವಿಮರ್ಶೆಯಾಗಿ ಪರಿಗಣಿಸಲಾಗುತ್ತಿದೆ. ಪತ್ರಿಕೆ, ಸೆಮಿನಾರ್‌ಗಳ ಹಂಗಿಲ್ಲದೆ ಹುಟ್ಟುವ ಅಭಿಪ್ರಾಯಗಳು ವಿಮರ್ಶೆಯ ಭಾಗವಾಗಿವೆ.

ಪ್ರಶ್ನೆ: ಕನ್ನಡವನ್ನು ಆಯಾ ಪ್ರದೇಶಗಳಲ್ಲಿ ವಿಭಿನ್ನವಾಗಿ ಬಳಸಲಾಗುತ್ತಿದೆ. ಏಕರೂಪದ ಗ್ರಾಂಥಿಕ ಭಾಷೆಯಲ್ಲೇ ಬಹುತೇಕ ಮಾಧ್ಯಮಗಳಲ್ಲಿ ಬರೆಯುತ್ತಿರುವುದು ಸೂಕ್ತವೇ?

ಉತ್ತರ: ಆಯಾ ನೆಲದ ಆಡುಮಾತಿನಂತೆ ಬರಹವಿದ್ದರೆ ಚೆಂದ. ಬದಲಾಯಿಸುವುದು ತರವಲ್ಲ. ಉತ್ತರ ಕರ್ನಾಟಕ, ದಕ್ಷಿಣ ಕನ್ನಡದ ಭಾಷೆಯನ್ನು ಹಾಗೆ ಬಳಸುವುದು ಕೃತಿಯ ಹೆಗ್ಗಳಿಕೆ. ಬದಲಾಯಿಸುವುದು ಭಾಷಾ ವೈವಿಧ್ಯದ ಹತ್ಯೆ ಮಾಡಿದಂತೆ.

ಪ್ರಶ್ನೆ: ಬರಹಗಾರರಿಗೆ ಸಾಹಿತ್ಯ ಪರಂಪರೆಯ ಜ್ಞಾನ ಕಡ್ಡಾಯವೇ?

ಉತ್ತರ: ಹಾಗೇನಿಲ್ಲ. ಪರಂಪರೆಯ ಜ್ಞಾನವಿಲ್ಲದ ಎಷ್ಟೋ ಜನರು ಅತ್ಯುತ್ತಮ ಕೃತಿಗಳನ್ನು ರಚಿಸಿದ್ದಾರೆ. ಆದರೆ, ಪರಂಪರೆಯ ಜ್ಞಾನವು ಬರಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ, ವಿಸ್ತರಿಸುತ್ತದೆ.

ಪ್ರಜಾವಾಣಿ’ ಕಥಾ ಸ್ಪರ್ಧೆ ಪರಂಪರೆ ಆಯಾ ಕಾಲಘಟ್ಟದ ಸಾಹಿತ್ಯವನ್ನು ಉತ್ತೇಜಿಸುತ್ತಾ ಬಂದಿದೆ. ಈ ಬಾರಿ ಮೊದಲ ಬಹುಮಾನ ನನಗೆಸಂದಿರುವುದು ಮತ್ತಷ್ಟು ಸ್ಫೂರ್ತಿಯಾಗಿದೆ.

- ಎಚ್‌.ಬಿ.ಇಂದ್ರಕುಮಾರ್,ಕಥಾ ಸ್ಪರ್ಧೆಯ ವಿಜೇತ.

ನನ್ನ ‘ಗಾಯಗೊಂಡವರು’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಏಳು ಪ್ರಶಸ್ತಿಗಳು ಸಂದಿವೆ. ಹೊಸತನದ ಹುಡುಕಾಟದ ಕವನಕ್ಕೆ ಬಹುಮಾನ ಸಿಕ್ಕಿರುವುದು ಹೆಮ್ಮೆಯ ಗರಿ</p>

-ಮಂಜುಳಾ ಹಿರೇಮಠ, ಕವನ ಸ್ಪರ್ಧೆಯ ವಿಜೇತೆ.

ಪ್ರಜಾವಾಣಿ ಕಥೆ, ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು ಭವಿಷ್ಯದಲ್ಲಿ ಬಹುದೊಡ್ಡ ಲೇಖಕರಾಗಿ ಹೊರಹೊಮ್ಮಿದ್ದಾರೆ. ಸಾವಿರಾರು ಲೇಖಕರನ್ನು ರೂಪಿಸಿದ ಹೆಗ್ಗಳಿಕೆ ಪತ್ರಿಕೆಗೆ ಸಲ್ಲುತ್ತದೆ.

-ರಹಮತ್‌ ತರೀಕೆರೆ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT