ಬೆಂಗಳೂರು: ‘ಎಲ್ಲರೂ ಒಂದೇ, ವ್ಯಕ್ತಿಗೌರವ, ಸಂವಿಧಾನದ ಪರ ಎಂಬುದೆಲ್ಲ ಹೆಮ್ಮೆಯ ವಿಚಾರ. ಆದರೆ, ಅದನ್ನು ಹೇಳಲು ಮುಜುಗರಪಟ್ಟುಕೊಳ್ಳುವ ಕಾಲದಲ್ಲಿದ್ದೇವೆ. ಜಾತಿ ಶ್ರೇಷ್ಠತೆ, ಧರ್ಮ ಶ್ರೇಷ್ಠತೆ, ಆಹಾರ ಶ್ರೇಷ್ಠತೆಗಳನ್ನು ಹೇಳಿಕೊಳ್ಳಲು ಮುಜುಗರಪಟ್ಟುಕೊಳ್ಳಬೇಕಿತ್ತು. ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ವಿಪರ್ಯಾಸ’ ಎಂದು ಕವಿ ವಿಲ್ಸನ್ ಕಟೀಲ್ ಹೇಳಿದರು.

ಭಾನುವಾರ ನಡೆದ ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ದ ‘ಅಸಹನೆಯ ಯುಗದಲ್ಲಿ ಹೊಸಕಾವ್ಯದ ಧಾತುಗಳು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೂರ್ಖತನ, ದ್ವೇಷ, ಅಸಹನೆ, ಸಲೀಸಾಗಿ ಹರಡುತ್ತಿವೆ. ಬುದ್ಧಿವಂತಿಕೆ, ಪ್ರೀತಿ, ವಿಚಾರಗಳು ಜನರನ್ನು ತಲುಪುವಲ್ಲಿ ಸೋಲುತ್ತಿವೆ. ಯಾಕೆ ಸೋಲುತ್ತಿವೆ. ಪ್ರತಿರೋಧದ ಧ್ವನಿಗಳು ಅಲ್ಲಲ್ಲಿ ಒಂಟಿಯಾಗಿವೆ. ಈ ಧ್ವನಿಗಳು ಒಟ್ಟಾದರೆ, ಒಂದು ಗುಂಪು ಆದರೆ ಶಕ್ತಿ ಬರುತ್ತದೆ. ಕೊರೊನಾ ಓಡಿಸಲು ತಟ್ಟೆ ಬಡಿಯಿರಿ ಎಂದರೆ ಎಲ್ಲರೂ ಸೌಟು, ತಟ್ಟೆ ಬಡಿದರು. ವಿಜ್ಞಾನ ತಲುಪಲಿಲ್ಲ. ಬರಹಗಾರರು ತಟ್ಟೆ, ಸೌಟುಗಳನ್ನೇ ಧಾತುವಾಗಿ ಇಟ್ಟುಕೊಂಡು ಜನರಿಗೆ ಸತ್ಯ ತಲುಪಿಸಬೇಕಿತ್ತು ಎಂದು ಹೇಳಿದರು.

ಕವಯಿತ್ರಿ ಮಂಜುಳಾ ಹುಲಿಕುಂಟೆ ಮಾತನಾಡಿ, ‘ಹಿಂದೆ ಕ್ರೌರ್ಯಗಳಿದ್ದವು. ಈಗ ಅದರ ಜಾಗಕ್ಕೆ ಅಸಹನೆ ಬಂದು ಕುಳಿತಿದೆ. ಭಾಷೆ, ಮುಖ ಇಲ್ಲದ ಅಸಹನೆಗಳಿಗೆ ದೊಡ್ಡ ಮಟ್ಟದಲ್ಲಿ ವೇದಿಕೆಗಳು ಸಿಗುತ್ತಿವೆ. ಸೃಜನಶೀಲತೆಯ ಹೆಸರಲ್ಲಿ ಅಸಮಾನತೆ, ಅಸಹನೆ, ಅಸಹಿಷ್ಣುತೆಗಳು ಕಾವ್ಯಗಳಾಗಿವೆ. ಕೋಮಲ ಭಾಷೆಯಲ್ಲಿ ಅವುಗಳನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಅಸಮಾನತೆಯ ಭಾರತೀಯ ಸಮಾಜದಲ್ಲಿ ಹಿಂದಿನಿಂದಲೂ ಅಸಹಿಷ್ಣುತೆ ಇತ್ತು. ಯಾವ ಕಾಲದಲ್ಲಿಯೂ ಪ್ರಭುತ್ವ ತನಗಾಗದ್ದನ್ನು ಸಹಿಸಿಕೊಂಡಿರಲಿಲ್ಲ. ಈಗ ಲಜ್ಜೆ ಇಲ್ಲದೇ ಹರಿದಾಡುತ್ತಿದೆ ಎಂಬುದಷ್ಟೇ ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಇರುವ ವ್ಯತ್ಯಾಸ’ ಎಂದು ಜಂಟಿ ಪೊಲೀಸ್ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಪ್ರತಿಪಾದಿಸಿದರು.

ಕವಯಿತ್ರಿ ಪ್ರತಿಭಾ ನಂದಕುಮಾರ್, ಬರಹಗಾರ್ತಿ ಎಚ್.ಎಲ್. ಪುಷ್ಪಾ ವಿಚಾರ ಮಂಡಿಸಿದರು. ಶ್ವೇತಾಮಣಿ ಎಚ್.ಎಂ. ಸಮನ್ವಯಕಾರರಾಗಿದ್ದರು.

‘ದಲಿತ, ರೈತ ಚಳವಳಿಯಲ್ಲಿ ಹೋರಾಟದ ಸಾಹಿತ್ಯ’

‘ದಲಿತ ಹಾಗೂ ರೈತ ಚಳವಳಿಗಳಲ್ಲಿ ಹೋರಾಟದ ಸಾಹಿತ್ಯವನ್ನು ಕಾಣಬಹುದು’ ಎಂದು ವಿದ್ವಾಂಸ
ಹಿ.ಶಿ. ರಾಮಚಂದ್ರೇಗೌಡ ಹೇಳಿದರು.

ಸಮಾಜಮುಖಿ ಪತ್ರಿಕೆ ಆಯೋಜಿಸಿದ್ದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ?’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ರೈತ ಚಳವಳಿಯಲ್ಲಿ ಜಾತ್ಯತೀತತೆ, ಕೃಷಿಯ ಸಮಗ್ರ ಚಿಂತನೆ, ನಾಯಕತ್ವ ಇತ್ತು. ಅಂತರ್ಜಾತಿ ವಿವಾಹಗಳನ್ನು ಮಾಡಲಾಗುತ್ತಿತ್ತು. ಎಲ್ಲ ಸಮುದಾಯದವರು ಇದರಲ್ಲಿ ಪಾಳ್ಗೊಳ್ಳಲು ಅವಕಾಶ ಇತ್ತು. ಎಂ.ಡಿ. ನಂಜುಂಡಸ್ವಾಮಿ ಅವರು ರೈತರಲ್ಲಿ ಸ್ವಾಭಿಮಾನ ಬೆಳೆಸಿದ್ದರು. ನೆಲ ಹಾಗೂ ಜನ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿದ್ದರು. ಆದರೆ, ಈಗ ರೈತ ಚಳವಳಿಗಳು ತುಂಡು ತುಂಡಾಗಿದ್ದು, ಬೇಡಿಕೆಗೆ ಸೀಮಿತವಾಗಿವೆ. ಇದಕ್ಕೆ ಕಾರಣ ಕಾರ್ಪೊರೇಟ್ ಪರವಾದ ನೀತಿಗಳು ಎಂದು ದೂರಿದರು.

‘ಹಿಂದೆ ರೈತ ಹಾಗೂ ದಲಿತ ಚಳವಳಿಗಳ ಮೇಲೆ ಸಾಹಿತ್ಯದ ಪ್ರಭಾವವಿತ್ತು. ಆದರೆ ಈಗ ಇಲ್ಲ. ಒಟ್ಟು ಜನರನ್ನು ಒಳಗೊಳ್ಳುವ ಸಾಹಿತ್ಯ ಬೇಕಿದೆ. ರೈತ ಮತ್ತು ದಲಿತ ಚಳವಳಿ ಪ್ರಬಲವಾಗಿಲ್ಲ’ ಎಂದರು.

ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, ‘ಹೋರಾಟದ ಹಾಡುಗಳಲ್ಲಿ ಬದುಕನ್ನು ಹಸನುಗೊಳಿಸುವ ಸಾಹಿತ್ಯ ಅಡಕವಾಗಿದೆ. ಆದರೆ ಸಾಹಿತ್ಯ ಲೋಕ ಈ ಹೋರಾಟದ ಹಾಡುಗಳನ್ನು ಸಾಹಿತ್ಯವೆಂದು ಪರಿಗಣಿಸುತ್ತಿಲ್ಲ. ಈ ನೆಲಕ್ಕೆ ಬೇಕಾದ ನಿಜವಾದ ಸಾಹಿತ್ಯವೇ ಹೋರಾಟದ ಹಾಡುಗಳಾಗಿವೆ. ಕರ್ನಾಟಕದಲ್ಲಿ ಹೋರಾಟದ ಭಾಗವಾಗಿ ಬಂದ ಎಲ್ಲ ಹಾಡುಗಳೂ ಹೋರಾಟದ ಸಾಹಿತ್ಯವೇ ಆಗಿದೆ’ ಎಂದು ತಿಳಿಸಿದರು.

ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಮ್ ಮಾತನಾಡಿ, ‘ಕನ್ನಡ ಸಾಹಿತ್ಯದಲ್ಲಿ ರೈತ ಹೋರಾಟ, ದಲಿತ ಹೋರಾಟ ಮತ್ತು ಮಹಿಳಾ ಹೋರಾಟವನ್ನು ಬೇರೆ ಬೇರೆ ಪ್ರಕಾರದಲ್ಲಿ ದಾಖಲಿಸಲಾಗಿದೆ. ಆದರೂ ರೈತನ ಸ್ಥಿತಿ ಗತಿಯ ಕುರಿತು ಹೆಚ್ಚು ಸಾಹಿತ್ಯ ಬರಬೇಕಿದೆ’ ಎಂದರು.

ಅಧ್ಯಾಪಕ ಲವಕುಮಾರ್ ಗೋಷ್ಠಿಯನ್ನು ನಿರ್ವಹಣೆ ಮಾಡಿದರು.

ರಾಮಾಯಣ, ಮಹಾಭಾರತಕ್ಕೆ ಜಾನಪದವೇ ಮೂಲ

ರಾಮಾಯಣ, ಮಹಾಭಾರತ ಸಹಿತ ಬಹುತೇಕ ಸಾಹಿತ್ಯದ ಮೂಲವೇ ಜಾನಪದ. ಅದೇ ಇಂದು ಲಿಪಿ ಸಾಹಿತ್ಯದಲ್ಲಿ ಬಿಟ್ಟುಹೋಗಿದೆ ಎಂದು ಜನಪದ ಸಾಹಿತಿ ಕೆ.ಆರ್. ಸಂಧ್ಯಾರೆಡ್ಡಿ ತಿಳಿಸಿದರು.

ಭಾನುವಾರ ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ದ ‘ಸಾಹಿತ್ಯ ಚರಿತ್ರೆಯಲ್ಲಿ ಬಿಟ್ಟುಹೋದ ದನಿಗಳನರಸುತ್ತ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಾನವ ಜನಾಂಗದ ಭಾವನೆಗಳ ಧ್ವನಿ ಜನಪದವಾಗಿದೆ. ಮಹಿಳೆಯರೇ ಪದಕಟ್ಟಿದ್ದು, ಹಾಡಿದವರು. ಆದರೆ, ಶಿಷ್ಟ ಸಾಹಿತ್ಯ ಆರಂಭಗೊಂಡ ಬಳಿಕ ಪುರುಷರೇ ಬರೆದರು. ಮಹಿಳಾ ಸಾಹಿತ್ಯ ಎನ್ನುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಯಿತು ಎಂದರು.

‘ವಾಲ್ಮೀಕಿ ರಾಮಾಯಣಕ್ಕೂ ಅದಕ್ಕಿಂತ ಹಿಂದೆ ಇದ್ದ ಜನಪದರ ರಾಮಾಯಣಕ್ಕೂ ಬಹಳ ವ್ಯತ್ಯಾಸವಿದೆ. ವಾಲ್ಮೀಕಿ ರಾಮಾಯಣದಲ್ಲಿ ಶೂರ್ಪನಖಿ ರಾಕ್ಷಸಿಯಾದರೆ, ಜನಪದರಲ್ಲಿ ನೊಂದ, ಬೆಂದ ಒಬ್ಬಳು ಹೆಣ್ಣು. ಹಾಗೆಯೇ ಸೀತೆಗೆ ರಾಮನಿಗಿಂತ ಲಕ್ಷ್ಮಣನ ಬಗ್ಗೆಯೇ ಹೆಚ್ಚು ನಂಬಿಕೆ, ವಿಶ್ವಾಸ ಇರುವುದು ಜಾನಪದದಲ್ಲಿ ಕಾಣುತ್ತೇವೆ. ಅಶೋಕವನದಲ್ಲಿ ಶೂರ್ಪನಖಿಯ ಅಪೇಕ್ಷೆಯಂತೆ ರಾವಣನ ಚಿತ್ರ ಬಿಡಿಸಿ ಅದಕ್ಕೆ ಜೀವ ತುಂಬಿದಳು ಎಂಬ ಕಾರಣಕ್ಕೆ ಸೀತೆಯನ್ನು ಕಾಡಿಗೆ ಅಟ್ಟಲಾಯಿತು ಎಂಬುದು ಜಾನಪದದ ಕಥೆ’ ಎಂದು ವಿವರಿಸಿದರು.

‘ಮಹಾಭಾರತ ಕೂಡ ಹಾಗೆ. ಶಿಷ್ಟ ಮಹಾಭಾರತದಲ್ಲಿ ಪಾಂಡವರು ಪಗಡೆ ಜೂಜಿನಲ್ಲಿ ಸೋಲುತ್ತಾರೆ. ಆದರೆ, ಜಾನಪದ ಮಹಾಭಾರತದಲ್ಲಿ ಸ್ವತಃ ದ್ರೌಪದಿಯೇ ದುರ್ಯೋಧನನೊಂದಿಗೆ ಜೂಜಾಡಿ ಅವನ ಗಮನ ಬೇರೆಡೆಗೆ ಸೆಳೆದು ಗೆದ್ದು, ರಾಜ್ಯ ಉಳಿಸಿಕೊಳ್ಳುತ್ತಾಳೆ’ ಎಂದರು.

ಜನಪದ ಸಾಹಿತಿಗಳಾದ ಎಚ್. ಶಶಿಕಲಾ, ಹಳೆಮನೆ ರಾಜಶೇಖರ್ ವಿಚಾರ ಮಂಡಿಸಿದರು. ರವಿಕುಮಾರ್ ಪಿ.ಜಿ. ಸಮನ್ವಯಕಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.