ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡಬ್ಲ್ಯುಎಸ್ ಮೀಸಲಾತಿ: ಶತಮಾನದ ದೊಡ್ಡ ಮೋಸ: ರವಿವರ್ಮ ಕುಮಾರ್‌

‘ಇಡಬ್ಲ್ಯುಎಸ್ 10% ಮೀಸಲಾತಿ ಮಹಾವಂಚನೆ’ ಪುಸ್ತಕ ಬಿಡುಗಡೆ
Last Updated 28 ಜನವರಿ 2023, 18:26 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ಜಾರಿಗೆ ತಂದಿರುವುದು ಈ ಶತಮಾನದ ಅತಿದೊಡ್ಡ ಮೋಸ’ ಎಂದು ‌ವಕೀಲ ರವಿವರ್ಮ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಪ್ರಕಟಿಸಿರುವ ಮಾವಳ್ಳಿ ಶಂಕರ್, ಬಿ.ಶ್ರೀಪಾದ ಭಟ್, ವಿಕಾಸ್ ಆರ್.ಮೌರ್‍ಯ ಸಂಪಾದಿತ ‘ಇಡಬ್ಲ್ಯುಎಸ್ 10% ಮಹಾವಂಚನೆ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಇಡೀ ದೇಶದಲ್ಲಿ ಮೊದಲು ಮೀಸಲಾತಿ ಜಾರಿಗೆ ಬಂದಿದ್ದು ಮೈಸೂರು ಸಂಸ್ಥಾನದಲ್ಲಿ. 1872ರಲ್ಲಿ ಮೊದಲ ಜಾತಿ ಜನಗಣತಿ ನಡೆಯಿತು. ಅದರ ಪ್ರಕಾರ ಶೇ 3.4ರಷ್ಟು ಮಾತ್ರ ಬ್ರಾಹ್ಮಣ ಸಮುದಾಯ ಇತ್ತು. ಸರ್ಕಾರಿ ಹುದ್ದೆಗಳಲ್ಲಿ ಶೇ 100ರಷ್ಟು ಬ್ರಾಹ್ಮಣರೇ ಇದ್ದರು. ಆಡಳಿತದಲ್ಲಿ ಬ್ರಾಹ್ಮಣರ ಪ್ರಾತಿನಿಧ್ಯ ಕಡಿಮೆ ಮಾಡುವ ಸಲುವಾಗಿಯೇ ಮೊದಲ ಬಾರಿಗೆ 1974ರಲ್ಲಿ ಪೊಲೀಸ್ ನೇಮಕಾತಿಯಲ್ಲಿ ಮೀಸಲಾತಿ ಜಾರಿಗೆ ತರಲಾಯಿತು’ ಎಂದರು.

ಈ ಮೀಸಲಾತಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಂವಿಧಾನಿಕ ಚೌಕಟ್ಟು ನೀಡಿದರು. ಇದಕ್ಕೆ ತದ್ವಿರುದ್ಧವಾಗಿ ಈಗ ಇಡಬ್ಲ್ಯುಎಸ್ ಮೀಸಲಾತಿ ಜಾತಿಗೆ ತರಲಾಗಿದೆ ಎಂದು ಹೇಳಿದರು.

‘ಎಲ್ಲಾ ಸಮುದಾಯದ ಬಡವರಿಗೆ ಮೀಸಲಾತಿ ದೊರೆತಿದ್ದರೆ ತೊಂದರೆ ಇರಲಿಲ್ಲ. ಈಗಾಗಲೇ ಮೀಸಲಾತಿ ಪಟ್ಟಿಯಲ್ಲಿ ಇರುವ ಸಮುದಾಯಗಳನ್ನು ಇದರಿಂದ ಹೊರಗಿಡಲಾಗಿದೆ. ಇದನ್ನು ಬ್ರಾಹ್ಮಿನ್– ಬನಿಯಾ ಮೀಸಲಾತಿ ಎಂದಷ್ಟೇ ಹೇಳಬೇಕು. ಆದರೆ, ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ ಎಂದು ಹೇಳುವ ಮೂಲಕ ಎಲ್ಲ ಸಮುದಾಯಗಳಿಗೆ ಮೋಸ ಮಾಡಲಾಗಿದೆ. ಇದಕ್ಕೆ ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿರುವುದು ದುರಂತ’ ಎಂದರು.

‘ಮೀಸಲು ಕ್ಷೇತ್ರದಿಂದ ಆಯ್ಕೆಯಾದವರೂ ಸೇರಿ ಎಲ್ಲಾ ಸಂಸದರು ಕಣ್ಮುಚ್ಚಿಕೊಂಡು ಒಪ್ಪಿಗೆ ಸೂಚಿಸಿದ್ದಾರೆ. ಈ ಮಸೂದೆಗೆ ಮತಕೊಟ್ಟ ಸಂಸದರಿಗೆ ಮತ ಹಾಕುವುದಿಲ್ಲ ಎಂಬ ಆಂದೋಲನ ನಡೆಯಬೇಕು. ಇಡಬ್ಲ್ಯುಎಸ್ ಮೀಸಲಾತಿ ತೆಗೆಯದ ಪಕ್ಷಕ್ಕೆ ಮತವಿಲ್ಲ ಎಂಬ ಕೂಗು ದೊಡ್ಡದಾಗಬೇಕು’ ಎಂದು ಅವರು ಹೇಳಿದರು.‌

ಪುಸ್ತಕ ಕುರಿತು ಮಾತನಾಡಿದ ಪತ್ರಕರ್ತ ಡಿ.ಉಮಾಪತಿ, ‘ಹಿಂದೂ ಧರ್ಮದ ಕೇಡುಗಳ ವಿರುದ್ಧ ಬೌದ್ಧ ಧರ್ಮ ಉದಯವಾಗಿ, ಸಮಾನತೆಯನ್ನು ಸ್ಥಾಪಿಸಿತ್ತು. ಅದಕ್ಕೆ ಪ್ರತಿಕ್ರಾಂತಿಯಾಗಿ ಪುಷ್ಯ ಮಿತ್ರ ಶೃಂಗ ಬ್ರಾಹ್ಮಣವಾದಕ್ಕೆ ಮರಳಿ, ಅದರ ಸ್ಥಾನ ಒದಗಿಸಿಕೊಟ್ಟ. ಅವನ ಪ್ರತಿಕ್ರಾಂತಿಯೇ ಮನುಸ್ಮೃತಿ ಆಯಿತು. ಜಾತಿ ವ್ಯವಸ್ಥೆ ಮತ್ತಷ್ಟು ಬಲಗೊಂಡಿತು. ಅಂಬೇಡ್ಕರ್ ಸಂವಿಧಾನ ಅದನ್ನು ಹಿಮ್ಮೆಟ್ಟಿಸಿತ್ತು. ಸಂವಿಧಾನದ ವಿರುದ್ಧ ಈಗ ಮತ್ತೊಮ್ಮೆ ಪುಷ್ಯ ಮಿತ್ರ ಶೃಂಗನ ರೀತಿಯ ಪ್ರತಿಕ್ರಾಂತಿ ಗಟ್ಟಿಯಾಗುತ್ತಿದೆ. ಅದನ್ನು ಹಿಮ್ಮೆಟ್ಟಿಸಬೇಕಿದೆ’ ಎಂದರು.

ಬಿಡುಗಡೆಯಾದ ಪುಸ್ತಕ

ಪುಸ್ತಕ: ಇಡಬ್ಲ್ಯುಎಸ್‌ 10% ಮಹಾವಂಚನೆ (ಲೇಖನಗಳ ಸಂಗ್ರಹ)

ಸಂಪಾದಕರು: ಮಾವಳ್ಳಿ ಶಂಕರ್, ಬಿ.ಶ್ರೀಪಾದ ಭಟ್, ವಿಕಾಸ್ ಆರ್‌.ಮೌರ್‍ಯ

ಪುಟ: 108

ಬೆಲೆ: ₹90

ಪ್ರಕಾಶನ: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT